ದಿಲ್ಲಿ ಫ್ಲೈಓವರ್‌ನಲ್ಲಿ ಟ್ರಕ್‌ಗೆ ಅಪ್ಪಳಿಸಿ ಪುಡಿ ಪುಡಿಯಾದ ಮರ್ಸಿಡಿಸ್ ಕಾರು: 2 ಸಾವು, ಮೂವರ ಸ್ಥಿತಿ ಗಂಭೀರ

ದಿಲ್ಲಿಯ ಧೌಲಾ ಕೌನ್- ಪಲಾಂ ಫ್ಲೈ ಓವರ್‌ನಲ್ಲಿ ಮರ್ಸಿಡಿಸ್ ಸೆಡಾನ್ ವಾಹನ ಟ್ರಕ್‌ಗೆ ಜೋರಾಗಿ ಅಪ್ಪಳಿಸಿದ ಪರಿಣಾಮ ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನೂ ಮೂವರ ಸ್ಥಿತಿ ಬಹಳ ಗಂಭೀರವಾಗಿದೆ. ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ದಿಲ್ಲಿ ಫ್ಲೈಓವರ್‌ನಲ್ಲಿ ಟ್ರಕ್‌ಗೆ ಅಪ್ಪಳಿಸಿ ಪುಡಿ ಪುಡಿಯಾದ ಮರ್ಸಿಡಿಸ್ ಕಾರು: 2 ಸಾವು, ಮೂವರ ಸ್ಥಿತಿ ಗಂಭೀರ
Linkup
ಹೊಸದಿಲ್ಲಿ: ಸೆಡಾನ್ ಕಾರು ಟ್ರಕ್ ಒಂದಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು, ಇನ್ನೂ ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಶನಿವಾರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಐಷಾರಾಮಿ ಮರ್ಸಿಡಿಸ್ ಸೆಡಾನ್ ಕಾರು ಸಂಪೂರ್ಣ ಪುಡಿ ಪುಡಿಯಾಗಿರುವ ಚಿತ್ರಗಳು ಅಪಘಾತ ಸ್ಥಳದಿಂದ ಹರಿದಾಡುತ್ತಿದ್ದು, ಅಪಘಾತದ ತೀವ್ರತೆಯನ್ನು ತೋರಿಸುತ್ತಿವೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಏರ್ ಬ್ಯಾಗ್ ಕೂಡ ಒಳಗಿದ್ದವರ ರಕ್ಷಣೆ ಮಾಡದಂತೆ ಹಾನಿಗೊಳಗಾಗಿದೆ. ನೈಋತ್ಯ ದಿಲ್ಲಿಯ ಪಲಾಂನ ನಿವಾಸಿಗಳಾಗಿರುವ ಐವರು ಯುವಕರು ಫರೀದಾಬಾದ್‌ನಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಮರಳುತ್ತಿದ್ದರು. ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಧೌಲಾ ಕೌನ್ ಮತ್ತು ಪಲಾಂ ನಡುವಿನ ಮೇಲ್ಸೇತುವೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಟ್ರಕ್‌ಗೆ ಅಪ್ಪಳಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ತಂಡವನ್ನು ಸ್ಥಳಕ್ಕೆ ಕೂಡಲೇ ರವಾನಿಸಲಾಯಿತು. ಅಪಘಾತದ ರಭಸಕ್ಕೆ ಕಾರು ತಲೆಕೆಳಗಾಗಿ ಬಿದ್ದಿತ್ತು ಮತ್ತು ತೀವ್ರ ಹಾನಿಗೊಳಗಾಗಿತ್ತು ಎಂದು ಹೇಳಿದ್ದಾರೆ. ಕಾರಿನೊಳಗಿದ್ದ ಎಲ್ಲ ಐವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ವಿನೋದ್ ಮತ್ತು ಕೃಷ್ಣ ಸೋಲಂಕಿ ಎಂಬ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿತಿನ್, ಜಿತೇಂದರ್ ಮತ್ತು ಕರಣ್ ಭಾರದ್ವಾಜ್ ಎಂಬ ಇತರೆ ಮೂವರು ಯುವಕರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರಕ್ ಚಾಲಕನ ಪತ್ತೆಗೆ ಪ್ರಯತ್ನ ನಡೆಸಿದ್ದಾರೆ. ಅಪಘಾತಕ್ಕೆ ಕಾರಣ ಏನು ತಿಳಿಯಲು ಹೆಚ್ಚಿನ ವಿವರ ಪಡೆದುಕೊಳ್ಳುವ ಸಲುವಾಗಿ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.