ಉತ್ತರ ಪ್ರದೇಶ ಚುನಾವಣೆಯಲ್ಲಿ ಶೇ 40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್: ಕಾಂಗ್ರೆಸ್ ಘೋಷಣೆ

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಶೇ 40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್: ಕಾಂಗ್ರೆಸ್ ಘೋಷಣೆ
Linkup
ಲಕ್ನೋ: ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಉತ್ತರ ಪ್ರದೇಶದಲ್ಲಿ ಮಹಿಳಾ ಶಕ್ತಿಯನ್ನು ತನ್ನತ್ತ ಸೆಳೆಯಲು ಮತ್ತು ಅವರ ಸಹಾನುಭೂತಿ ಗಳಿಸಲು ತಂತ್ರ ರೂಪಿಸಿದೆ. 2022ರ ಚುನಾವಣೆಯಲ್ಲಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಎಲ್ಲವೂ ತಮ್ಮ ಇಚ್ಛೆಗೆ ಅನುಗುಣವಾಗಿ ನಡೆದಿದ್ದರೆ ಮಹಿಳೆಯರಿಗೆ ಅರ್ಧದಷ್ಟು ಟಿಕೆಟ್‌ಗಳನ್ನು ಮೀಸಲಿಡುತ್ತಿದ್ದುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ನವೆಂಬರ್ 15ರವರೆಗೂ ವಿವಿಧ ಕ್ಷೇತ್ರಗಳ ಸೀಟುಗಳಿಗೆ ಅರ್ಜಿ ಸಲ್ಲಿಸುವಂತೆ ಮಹಿಳೆಯರಿಗೆ ಆಹ್ವಾನ ನೀಡಿರುವ ಪ್ರಿಯಾಂಕಾ ಗಾಂಧಿ, ಮಹಿಳಾ ಅಭ್ಯರ್ಥಿಗಳ ಆಯ್ಕೆಗಳು ಸಂಪೂರ್ಣವಾಗಿ ಅರ್ಹತೆ ಆಧಾರದ ಮೇಲೆ ನಡೆಯುತ್ತದೆ ಎಂದಿದ್ದಾರೆ. 'ನಮ್ಮ ಕಾಂಗ್ರೆಸ್ ಪಕ್ಷವು 2022ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಎಲ್ಲ ಶೇ 40ರಷ್ಟು ಸೀಟುಗಳನ್ನು ನೀಡಲಾಗುವುದು' ಎಂದು ಪ್ರಿಯಾಂಕಾ ಗಾಂಧಿ ಅವರು ನಿರ್ಧಾರವನ್ನು ಪ್ರಕಟಿಸಿದರು. ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು, 'ಈ ನಿರ್ಧಾರವು ಉತ್ತರ ಪ್ರದೇಶದಲ್ಲಿ ಬದಲಾವಣೆ ಬಯಸಿರುವ, ಏಕತೆಯಲ್ಲಿ ನಂಬಿಕೆ ಇರಿಸಿರುವ ಮತ್ತು ನ್ಯಾಯದ ಪರ ನಿಂತಿರುವ ಪ್ರತಿಯೊಬ್ಬ ಮಹಿಳೆಯರಿಗಾಗಿ. ತನ್ನ ಕುಟುಂಬ ಮತ್ತು ರಾಜ್ಯಕ್ಕೆ ಉತ್ತಮ ಜೀವನ ನೀಡಲು ಹೋರಾಡುತ್ತಿರುವ ಮಹಿಳೆಯರಿಗಾಗಿ' ಎಂದು ಹೇಳಿದರು. ಈ ನಿರ್ಧಾರ ತೆಗೆದುಕೊಳ್ಳುವಂತೆ ತಮ್ಮನ್ನು ಪ್ರೇರೇಪಿಸಿದ ಹಾಗೂ ಉತ್ಸಾಹ ತುಂಬಿದ ಕೆಲವು ಮಹಿಳೆಯರ ಹೆಸರುಗಳನ್ನು ಕೂಡ ಪ್ರಿಯಾಂಕಾ ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯು ಅತ್ಯಾಚಾರ ಸಂತ್ರಸ್ತರು, ಸಂತ್ರಸ್ತರ ಸಂಬಂಧಿಕರು, ವಾಸ್ತವ ಅಭಿವೃದ್ಧಿ ಬಯಸಿರುವ ಯುವತಿಯರನ್ನು ಒಳಗೊಂಡಿದೆ. ಹಿಂದಿನ ಸರ್ಕಾರಗಳು ಮಹಿಳೆಯರ ಪರ ಯಾವ ಕೆಲಸವನ್ನೂ ಮಾಡುವಲ್ಲಿ ವಿಫಲವಾಗಿವೆ ಎಂದಿರುವ ಅವರು, 'ಮಹಿಳೆಯರು ಎದ್ದೇಳಬೇಕು ಮತ್ತು ನೀವು ನಿಜವಾದ ಬದಲಾವಣೆ ಬಯಸಿದ್ದರೆ ಕೈ ಜೋಡಿಸಬೇಕು. ನಿಮ್ಮ ಹಣೆಬರಹವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನೀವೇ ಎದ್ದು ನಿಲ್ಲಬೇಕು ಮತ್ತು ಕೈಗೆ ತೆಗೆದುಕೊಳ್ಳಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದಾಗಿ ಪ್ರತಿಯೊಬ್ಬರೂ ಭರವಸೆ ನೀಡುತ್ತಾರೆ. ಆದರೆ ಅದನ್ನು ಈಡೇರಿಸುವ ಸಮಯ ಬಂದಾಗ ನಿಮ್ಮನ್ನು ತುಳಿದವರನ್ನು ಅವರು ರಕ್ಷಿಸುತ್ತಾರೆ' ಎಂದರು. ಸರ್ಕಾರ ಎಂದರೆ ಅಮಾಯಕರನ್ನು ದಮನಗೊಳಿಸಬಲ್ಲ ಎಂಬ ಅರ್ಥಕ್ಕೆ ಸಮನಾಗಿ ಬದಲಾಗಿದೆ. ಸಂದರ್ಭಗಳು ತಪ್ಪು ಮತ್ತು ಅನ್ಯಾಯದ ಹಾದಿಯಲ್ಲಿವೆ. ಈ ನಿಯಮಗಳನ್ನು ಮಹಿಳೆಯರು ಬದಲಿಸಬಹುದು. ಏಕೆಂದರೆ ಅವರು ಬದಲಾವಣೆಯ ಹರಿಕಾರರು. ಅವರು ಸೂಕ್ಷ್ಮ, ದೃಢ, ಸೇವೆಗೆ ಸಿದ್ಧ ಮತ್ತು ತಮ್ಮ ಸುತ್ತಲಿನ ಪ್ರತಿಯೊಬ್ಬರ ಆರೈಕೆ ಮಾಡುವವರು. ಮಹಿಳೆಯರು ತಮ್ಮ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಬೇಕು ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿ, ದೇಶದ ಒಳಿತಿಗಾಗಿ ಬದಲಾವಣೆ ತರಬೇಕು ಎಂದು ಹೇಳಿದರು. ಮಹಿಳೆಯರಿಗೆ ಶೇ 40ರಷ್ಟು ಮೀಸಲಾತಿ ನೀಡಲು ಉತ್ತರ ಪ್ರದೇಶ ಕಾಂಗ್ರೆಸ್ ಏಕೆ ನಿರ್ಧಾರ ಕೈಗೊಂಡಿದೆ ಎಂಬ ಪ್ರಶ್ನೆಗೆ ಅವರು, 'ಎಲ್ಲ ಸಂಗತಿಗಳು ನನ್ನ ಬಯಕೆಗೆ ತಕ್ಕಂತೆ ನಡೆಯುವುದಾಗಿದ್ದರೆ ಅದು ಶೇ 50ರಷ್ಟು ಇರುತ್ತಿತ್ತು. ಆದರೆ ಇದು ಮುಂದಿನ ಚುನಾವಣೆಗಳಲ್ಲಿ ನಡೆಯಬಹುದು' ಎಂದರು.