ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ಗೋಡ್ಸೆಯನ್ನು ಬೆಂಬಲಿಸಿದ್ದ ಬಿಜೆಪಿಯ ಮಹಿಳಾ ಅಭ್ಯರ್ಥಿಗೆ ಜಯ

ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಮತ ಗಳಿಕೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಚೆನ್ನೈ ಬೃಹತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ವಾರ್ಡ್‌ನಲ್ಲಿ ಗೆಲುವು ಕಂಡಿದೆ. ತಾವು ನಾಥೂರಾಮ್ ಗೋಡ್ಸೆಯ ಬೆಂಬಲಿಗಳು ಎಂದು ಬಹಿರಂಗವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡು ವಿವಾದ ಸೃಷ್ಟಿಸಿದ್ದ ಬಿಜೆಪಿಯ ಮಹಿಳಾ ಅಭ್ಯರ್ಥಿ ಉಮಾ ಆನಂದನ್ ಅವರು ಗೆಲುವು ಕಂಡಿದ್ದಾರೆ. ಅವರು ಎದುರಾಳಿ ಡಿಎಂಕೆ ಅಭ್ಯರ್ಥಿಯನ್ನು ಸುಮಾರು ಎರಡು ಸಾವಿರ ಮತಗಳಿಂದ ಸೋಲಿಸಿದ್ದಾರೆ.

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ಗೋಡ್ಸೆಯನ್ನು ಬೆಂಬಲಿಸಿದ್ದ ಬಿಜೆಪಿಯ ಮಹಿಳಾ ಅಭ್ಯರ್ಥಿಗೆ ಜಯ
Linkup
ಚೆನ್ನೈ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿ ಇಲ್ಲದೆಯೇ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ, ನಿರೀಕ್ಷೆಗೂ ಮೀರಿ ಸೀಟುಗಳಲ್ಲಿ ಗೆದ್ದಿದೆ. ಡಿಎಂಕೆ ಮತ್ತು ಎಐಡಿಎಂಕೆ ನಂತರದ ಸ್ಥಾನದಲ್ಲಿ ಇದೆ. ಮತ ಹಂಚಿಕೆಯಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೊಂಡಿದ್ದಾರೆ. ಆದರೆ ಮಹಾನಗರ ಪಾಲಿಕೆಯ 200 ವಾರ್ಡ್‌ಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗಳಿಸಿದೆ. ಅದೂ ಗೋಡ್ಸೆ ಪರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಿಳಾ ಅಭ್ಯರ್ಥಿ ಎನ್ನುವುದು ಕುತೂಹಲ ಮೂಡಿಸಿರುವ ಸಂಗತಿ. ಚೆನ್ನೈ ಹೃದಯ ಭಾಗದಲ್ಲಿರುವ 134ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಉಮಾ ಆನಂದನ್ ಅವರು ಜಯಗಳಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾಥೂರಾಮ್ ಗೋಡ್ಸೆಯನ್ನು ಶ್ಲಾಘಿಸಿದ್ದ ಅವರು, ಬಹಿರಂಗವಾಗಿ ಅವರನ್ನು ಬೆಂಬಲಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಫೆ. 19ರಂದು ನಡೆದ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಫೆ. 22ರಂದು ನಡೆದಿತ್ತು. ಎಐಎಡಿಎಂಕೆಯ ಪ್ರಬಲ ನೆಲೆಗಳಲ್ಲಿಯೂ ಸಾಮರ್ಥ್ಯ ಪ್ರದರ್ಶಿಸಿರುವ ಡಿಎಂಕೆ, ಭರ್ಜರಿ ಜಯಭೇರಿ ಬಾರಿಸಿದೆ. ಮತ ಎಣಿಕೆ ಆರಂಭವಾದ ಸಂದರ್ಭದಲ್ಲಿ ಉಮಾ ಆನಂದನ್ (Uma Anandhan) ಅವರು ಹಿಂದೆ ಉಳಿದಿದ್ದರು. ಅವರಿಗೆ ಕೇವಲ ಎಂಟು ಮತಗಳು ಸಿಕ್ಕಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳು ಹರಿದಾಡಿದ್ದವು. ಡಿಎಂಕೆ ಹಾಗೂ ಕಾಂಗ್ರೆಸ್ ಬೆಂಬಲಿಗರು ಉಮಾ ಅವರನ್ನು ಅಣಕಿಸಿದ್ದರು. ಆದರೆ, ಅಂತಿಮ ಫಲಿತಾಂಶ ಪ್ರಕಟವಾದಾಗ ಕಾರ್ಯಕರ್ತರು ಪೆಚ್ಚಾದರು. ವಾರ್ಡ್ ಸಂಖ್ಯೆ 134ರಲ್ಲಿ 5,539 ಮತಗಳನ್ನು ಪಡೆದ ಉಮಾ ಅವರು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನು 2,036 ಮತಗಳಿಂದ ಸೋಲಿಸಿದರು. ಎಐಎಡಿಎಂಕೆ ಅಭ್ಯರ್ಥಿ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದ ಉಮಾ ಆನಂದನ್, ಗೋಡ್ಸೆ ಒಬ್ಬ ಹಿಂದೂ ಎಂಬುದು ಹೆಮ್ಮೆಯ ಸಂಗತಿ. ಆತನನ್ನು ಬೆಂಬಲಿಸಲು ತಮಗೆ ಯಾವ ಪಶ್ಚಾತ್ತಾಪವೂ ಇಲ್ಲ. ವಾಸ್ತವವಾಗಿ ಅವರು ಮಹಾತ್ಮ ಗಾಂಧಿಯನ್ನು ಕೊಂಚ ತಡವಾಗಿ ಸಾಯಿಸಿದರು ಎಂದು ಹೇಳಿಕೆ ನೀಡಿದ್ದರು. ಚುನಾವಣೆಯಲ್ಲಿನ ಗೆಲುವಿನ ಬಳಿಕ ತಮ್ಮ ಈ ವಿವಾದಾತ್ಮಕ ಸಂದರ್ಶನದ ಬಗ್ಗೆ ಅವರು ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಈ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ಪರಿವರ್ತಿಸಲು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅನೇಕ ವಾರ್ಡ್‌ಗಳಲ್ಲಿ ಬಿಜೆಪಿ ಗಣನೀಯ ಪ್ರಮಾಣದಲ್ಲಿ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕೆಲವು ವಾರ್ಡ್‌ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ಇದು ಬಿಜೆಪಿಯ ಅಮೋಘ ಸಾಧನೆ ಎಂದು ಬಣ್ಣಿಸಿದ್ದಾರೆ.