'ತುಪ್ಪದ ಹುಡುಗಿ' ರಾಗಿಣಿ ದ್ವಿವೇದಿ 'ಸಾರಿ' ಎಂದಿದ್ದೇಕೆ? ಇಲ್ಲಿದೆ ಸ್ಪೆಷಲ್ ನ್ಯೂಸ್!

ನಟಿ ರಾಗಿಣಿ ದ್ವಿವೇದಿ ಪುನಃ ಬಣ್ಣದ ಲೋಕದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಶ್ರೇಯಸ್ ಮಂಜು ಜೊತೆಗೆ 'ರಾಣ' ಸಿನಿಮಾದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದು, ಅದರ ಜೊತೆಗೆ ಈಗ 'ಸಾರಿ' ಎನ್ನುತ್ತಿದ್ದಾರೆ. ಏನಿದು ಹೊಸ ವಿಷ್ಯ? ಈ ಸುದ್ದಿ ಓದಿ.

'ತುಪ್ಪದ ಹುಡುಗಿ' ರಾಗಿಣಿ ದ್ವಿವೇದಿ 'ಸಾರಿ' ಎಂದಿದ್ದೇಕೆ? ಇಲ್ಲಿದೆ ಸ್ಪೆಷಲ್ ನ್ಯೂಸ್!
Linkup
'ತುಪ್ಪದ ಹುಡುಗಿ' ನಟಿ ಬಹಳ ಗ್ಯಾಪ್‌ನ ಬಳಿಕ ಪುನಃ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಈಚೆಗಷ್ಟೇ ಅವರು ಕೆ. ಮಂಜು ಪುತ್ರ ಶ್ರೇಯಸ್ ಮಂಜು ನಟಿಸಲಿರುವ ಹೊಸ ಸಿನಿಮಾ 'ರಾಣ'ದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆ ಚಿತ್ರದಲ್ಲೊಂದು ವಿಶೇಷ ಹಾಡಿದ್ದು, ಅದರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಇದೀಗ ರಾಗಿಣಿ ಇದ್ದಕ್ಕಿದ್ದಂತೆಯೇ 'ಸಾರಿ' ಎಂದು ಹೇಳುವುದಕ್ಕೆ ಶುರು ಮಾಡಿದ್ದಾರೆ! ಅರೇ, ಅವರು ಕೇಳಿದ್ದು ಯಾರಿಗೆ? ಮುಂದೆ ಓದಿ. ರಾಗಿಣಿ ಹೊಸ ಸಿನಿಮಾ ಸಾರಿ! ಹೌದು, ನಟಿ ರಾಗಿಣಿ ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಅದಕ್ಕೆ ಸಾರಿ ಎಂದು ಶೀರ್ಷಿಕೆಯನ್ನು ಇಡಲಾಗಿದೆ. ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಈ 'ಸಾರಿ' ಚಿತ್ರಕ್ಕೆ ಕರ್ಮ ರಿಟರ್ನ್ಸ್ ಎಂಬ ಟ್ಯಾಗ್ ಲೈನ್ ಇದೆ. ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ನಾಯಕಿ ಪ್ರಧಾನ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಈ ಹಿಂದೆ ಎಂದೂ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ! ಕಿಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ (ಕೆನಡಾ) ಅಡಿಯಲ್ಲಿ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿರುವ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಈಚೆಗೆ ನೆರವೇರಿತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್ (ಸೂಪರ್‌ ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈ ಕೃಪಲಾನಿ ಅವರ ಸಹ ನಿರ್ಮಾಪಕರು. ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತವಿದ್ದು, ರಾಜೀವ್ ಗಣೇಸನ್ ಅವರ ಛಾಯಾಗ್ರಹಣವಿದೆ. ಅಲ್ಟಿಮೇಟ್ ಶಿವು ಸಾಹಸನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್, ಮನು ಅವರ ನೃತ್ಯ ನಿರ್ದೇಶನವಿದೆ. ರಾಗಿಣಿ ಜೊತೆಗೆ ಅಫ್ಜಲ್ (ಸೂಪರ್‌ ಸ್ಟಾರ್‌) ವಿ.ಜೆ. ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ಮುಂತಾದವರು ನಟಿಸುತ್ತಿದ್ದಾರೆ. ಈ ಹಿಂದೆ ಇದೇ ನಿರ್ಮಾಪಕ ಮತ್ತು ನಿರ್ದೇಶಕರ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಸಿದ್ದಿ ಸೀರೆ ಎಂಬ ಚಿತ್ರವು ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿತ್ತು. ರಾಣದಲ್ಲಿ ಜವಾರಿ ಹಾಡಿಗೆ ರಾಗಿಣಿ ಹೆಜ್ಜೆಈ ಹಿಂದೆ ಶರಣ್ ಹೀರೋ ಆಗಿದ್ದ ವಿಕ್ಟರಿ ಸಿನಿಮಾದಲ್ಲಿ 'ಯಕ್ಕ ನಿನ್ನ ಮಗಳು ನನಗೆ..' ಹಾಡು ಭಾರಿ ಹಿಟ್ ಆಗಿತ್ತು. ಆ ಹಾಡಿನಲ್ಲಿ ಶರಣ್‌ ಜೊತೆಗೆ ರಾಗಿಣಿ ಸಖತ್ ಸ್ಟೆಪ್‌ ಹಾಕಿದ್ದರು. ಆ ಹಾಡನ್ನು ಬರೆದವರು ಶಿವು ಬೆರಗಿ. ಈ ಬಾರಿಯೂ ಕೂಡ ಅವರೇ 'ರಾಣ' ಚಿತ್ರಕ್ಕಾಗಿ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿರುವ ಈ ಗೀತೆಯಲ್ಲಿ ರಾಗಿಣಿ ಸಖತ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಈ ಹಾಡಿಗೆ ಇದೆ.