'ಡಾಲಿ' ಧನಂಜಯ ಜೊತೆ ಸಾಲು ಸಾಲು ಸಿನಿಮಾ ಮಾಡೋಕೆ ಕೆ.ಆರ್.ಜಿ ಸ್ಟುಡಿಯೋಸ್ ರೆಡಿ!

ಡಾಲಿ ಧನಂಜಯ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ, ಪರಭಾಷೆಯಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಇದೀಗ ಅವರ ಫ್ಯಾನ್ಸ್ ಖುಷಿಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಆ ಕುರಿತು ಇಲ್ಲಿದೆ ಫುಲ್ ಡಿಟೇಲ್ಸ್!

'ಡಾಲಿ' ಧನಂಜಯ ಜೊತೆ ಸಾಲು ಸಾಲು ಸಿನಿಮಾ ಮಾಡೋಕೆ ಕೆ.ಆರ್.ಜಿ ಸ್ಟುಡಿಯೋಸ್ ರೆಡಿ!
Linkup
'ಟಗರು' ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು ನಟ ಧನಂಜಯ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿಬಿಡ್ತು. ವಿಲನ್ ಪಾತ್ರದಿಂದ ಭಾರಿ ಮನ್ನಣೆ ಪಡೆದುಕೊಂಡರು. ಸದ್ಯ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯ ಅವರು ನಿರ್ಮಾಣ ಮಾಡಿರುವ 'ರತ್ನನ್ ಪ್ರಪಂಚ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಅದೊಂದೇ ಅಲ್ಲ, ಕೆ.ಆರ್.ಜಿ. ಸಂಸ್ಥೆ ಜೊತೆಗೆ ಸಾಲು ಸಾಲು ಸಿನಿಮಾಗಳನ್ನು ಮಾಡುವುದಕ್ಕೆ ಒಪ್ಪಂದ ಮಾಡಿರುವ ಕುರಿತು ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ, ಕೆ.ಆರ್.ಜಿ. ಸ್ಟುಡಿಯೋಸ್ ಹಾಗೂ ಧನಂಜಯ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದು, ಅವರಿಬ್ಬರೂ ಜೊತೆಗೂಡಿ ಇನ್ನೂ ಹಲವಾರು ಚಿತ್ರಗಳನ್ನು ಸಾಲು ಸಾಲಾಗಿ ಮಾಡಲಿದ್ದಾರೆ. ಇದು ನಿಜಕ್ಕೂ ಧನಂಜಯ್ ಅಭಿಮಾನಿಗಳಿಗೆ ಬಿಗ್‌ ನ್ಯೂಸ್ ಆಗಿದೆ. ಸದ್ಯದಲ್ಲೇ ಆ ಹೊಸ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಕುರಿತು ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಮ್ಸ್‌ನ ಮತ್ತು ನಿರ್ದೇಶಕ ಯೋಗಿ ಜಿ. ರಾಜ್‌ ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅನ್ನು ಆರಂಭಿಸಿದ್ದಾರೆ. ಈಗಾಗಲೇ ಇದೇ ಬ್ಯಾನರ್‌ನ 'ರತ್ನನ್ ಪ್ರಪಂಚ' ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. 'ದಯವಿಟ್ಟು ಗಮನಿಸಿ' ನಂತರ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಈಗಾಗಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇಲ್ಲಿ ಧನಂಜಯಗೆ ನಾಯಕಿಯಾಗಿ ರೆಬಾ ಜಾನ್‌ ನಟಿಸುತ್ತಿದ್ದಾರೆ. ಅನು ಪ್ರಭಾಕರ್‌, ವೈನಿಧಿ ಜಗದೀಶ್, ಪ್ರಮೋದ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ಧಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಶ್ರೀಶ ಕುದುವಳ್ಳಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸುತ್ತಿರುವುದು ವಿಶೇಷ. ವಿಶೇಷ ಏನೆಂದರೆ, ಈ ಚಿತ್ರದಲ್ಲಿ ಧನಂಜಯ ಇನ್ಶೂರೆನ್ಸ್ ಏಜೆಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಧನಂಜಯ ಮಾಡಿದ ಕಮರ್ಷಿಯಲ್‌ ಪಾತ್ರಗಳಿಗಿಂತಲೂ ಈ ಇನ್ಶೂರೆನ್ಸ್ ಏಜೆಂಟ್‌ ಪಾತ್ರ ತುಂಬ ಭಿನ್ನವಾಗಿ ಮೂಡಿಬರಲಿದೆಯಂತೆ. ಅವರಿಲ್ಲಿ ಒಬ್ಬ ಸಾಮಾನ್ಯ ಮಧ್ಯಮವರ್ಗದ ಹುಡುಗನಾಗಿ, ತನ್ನ ಕುಟುಂಬಕ್ಕಾಗಿ ಓವರ್‌ಟೈಮ್‌ ಕೆಲಸ ಮಾಡುವಂತಹ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಕೌಟುಂಬಿಕ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್‌ ಆಗಲಿದೆಯಂತೆ.