ಚಿತ್ರರಂಗಕ್ಕೆ ನಟಿ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯಾರನ್ನು ಪರಿಚಯಿಸಿದ್ದು ಪಾರ್ವತಮ್ಮ ರಾಜ್‌ಕುಮಾರ್: ಗಾಲಿ ಜನಾರ್ಧನ ರೆಡ್ಡಿ

ವರನಟ ಡಾ ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಗಾಲಿ ಜನಾರ್ಧನ ರೆಡ್ಡಿ ವಿಶೇಷವಾದ ಬರಹದ ಮೂಲಕ ಶುಭಾಶಯ ತಿಳಿಸಿದ್ದಾರೆ. ಇನ್ನು 'ಗಂಧದ ಗುಡಿ' ಸಾಕ್ಷ್ಯಚಿತ್ರದ ಟೀಸರ್‌ ಕೂಡ ರಿಲೀಸ್ ಆಗಿದೆ.

ಚಿತ್ರರಂಗಕ್ಕೆ ನಟಿ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯಾರನ್ನು ಪರಿಚಯಿಸಿದ್ದು ಪಾರ್ವತಮ್ಮ ರಾಜ್‌ಕುಮಾರ್: ಗಾಲಿ ಜನಾರ್ಧನ ರೆಡ್ಡಿ
Linkup
ಗಾಲಿ ಜನಾರ್ಧನ ರೆಡ್ಡಿ ಬರಹ ಅವರ ಜನ್ಮ ದಿನದಂದು ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳು.. ಕನ್ನಡ ಚಿತ್ರರಂಗದಲ್ಲಿ ಚಿತ್ರ ನಿರ್ಮಾಪಕಿಯಾಗಿ, ಡಾ. ರಾಜ್‌ಕುಮಾರ್ ಅವರ ಹಿಂದಿನ ಬಹುದೊಡ್ಡ ಶಕ್ತಿಯಾಗಿ, 'ಪೂರ್ಣಿಮಾ ಎಂಟರ್ ಪ್ರೈಸಸ್' ಮತ್ತು 'ವಜ್ರೇಶ್ವರಿ ಕಂಬೈನ್ಸ್' ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವಾರು ಕನ್ನಡದ ಹಿಟ್ ಚಿತ್ರಗಳನ್ನು ನೀಡುವುದರ ಜೊತೆಗೆ ಅನೇಕ ನಟ ಮತ್ತು ನಟಿ ಮಣಿಯರನ್ನು ಪರಿಯಚಿಸಿದ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮ ದಿನದಂದು ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಡಾ. ರಾಜ್‌ಕುಮಾರ್ ಅವರಿಗಾಗಿ ಉತ್ತಮ ಕಥೆಗಳನ್ನು ಹುಡುಕುವುದರಲ್ಲಿ ನಿರತರಾಗಿರುತ್ತಿದ್ದ ಪಾರ್ವತಮ್ಮನವರು, ಚಿತ್ರ ನಿರ್ಮಾಣದ ಮೂಲಭೂತ ತತ್ವಗಳನ್ನು ಅರಿತ ನಂತರ ತಾವೇ ಒಂದು ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿ ಡಾ. ರಾಜ್‌ಗಾಗಿ ಚಿತ್ರ ನಿರ್ಮಿಸಲು ಆಲೋಚಿಸಿದರು. ಪಾರ್ವತಮ್ಮನವರು ತಾವು ನಿರ್ಮಿಸುವ ಚಿತ್ರದ ಯಶಸ್ಸಿಗೆ ದೊಡ್ಡ ಕಲಾವಿದರು ಮಾತ್ರವಲ್ಲದೇ ಚಿತ್ರದ ಕಥೆ ಮತ್ತು ತಂತ್ರಜ್ಞರು ಕೂಡ ಮುಖ್ಯವೆಂದು ಬಲವಾಗಿ ನಂಬುತ್ತಿದ್ದರು. ಉತ್ತಮ ಸಾಹಿತ್ಯವೇ ಚಿತ್ರದ ಆತ್ಮವೆಂದು ನಂಬಿದ್ದ ಪಾರ್ವತಮ್ಮನವರು ತಮ್ಮ ಬ್ಯಾನರ್ ಮೂಲಕ ಹಲವಾರು ಲೇಖಕರಿಗೆ ಆಶ್ರಯವಾದರು. ಡಾ. ಪಾರ್ವತಮ್ಮನವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ 'ತ್ರಿಮೂರ್ತಿ', ನಂತರ 'ಸನಾದಿ ಅಪ್ಪಣ್ಣ', 'ಶಂಕರ ಗುರು', 'ತಾಯಿಗೆ ತಕ್ಕ ಮಗ' ಹೀಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನಿರ್ಮಿಸಿದರು. ಈ ಎಲ್ಲಾ ಚಿತ್ರಗಳು ಸಮಾಜಮುಖಿಯಾಗಿ ಇಂದಿಗೂ ಜನಪ್ರಿಯವಾಗಿವೆ. 1986ರಲ್ಲಿ ಹಿರಿಯ ಪುತ್ರ ಶಿವರಾಜಕುಮಾರ್‌ರನ್ನು 'ಆನಂದ' ಚಿತ್ರದ ಮೂಲಕ, 1988ರಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು 'ಚಿರಂಜೀವಿ ಸುಧಾಕರ್'" ಚಿತ್ರದ ಮೂಲಕ, 2002ರಲ್ಲಿ ಪುನೀತ್‌ರನ್ನು 'ಅಪ್ಪು' ಚಿತ್ರದ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲದೆ ಕನ್ನಡ ಚಿತ್ರರಂಗಕ್ಕೆ ವಜ್ರೇಶ್ವರಿ ಕಂಬೈನ್ಸ್ ಮೂಲಕ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯಾ ಮುಂತಾದ ನಟಿಯರನ್ನು ಪರಿಚಯಿಸಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸುಮಾರು 78 ಚಿತ್ರಗಳನ್ನು ನಿರ್ಮಿಸಿ ದಾಖಲೆ ಮಾಡಿದ್ದಾರೆ. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2010ರಲ್ಲಿ, ಬಳ್ಳಾರಿ ನಗರದಲ್ಲಿ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ನಿರ್ಮಿಸಲಾದ ಉದ್ಯಾನವನ ಹಾಗೂ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಡಾ. ಪಾರ್ವತಮ್ಮ ರಾಜ್‌ಮಾರ್ ಅವರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿರುವುದು. ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಹಾಗೂ ಕುಟುಂಬ ಸಮೇತರಾಗಿ ಆಗಮಿಸಿ ಡಾ. ರಾಜ್‌ಕುಮಾರ್ ಅವರ ಹೆಸರಿನ ಉದ್ಯಾನವನ ಹಾಗೂ ಪುತ್ಥಳಿಯನ್ನು ಅನಾವರಣಗೊಳಿಸಿ, ಅವರು ನಮ್ಮೊಂದಿಗೆ ಕಳೆದ ಆ ಸಮಯ ಅವಿಸ್ಮರಣೀಯ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಹಿಂದಿನ ಶಕ್ತಿಯಾಗಿ, ಯಶಸ್ವಿ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ, ಪಾರ್ವತಮ್ಮ ರಾಜಕುಮಾರ್ ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ನಾಡಿನ ಜನತೆಗೆ ಮತ್ತೊಮ್ಮೆ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಗೌರವಗಳೊಂದಿಗೆ - ಗಾಲಿ ಜನಾರ್ಧನ ರೆಡ್ಡಿ