ಚಿಕ್ಕಪ್ಪನ ಜತೆ ಮೈತ್ರಿ ಘೋಷಿಸಿದ ಅಖಿಲೇಶ್‌ ಯಾದವ್‌, ಯುಪಿಯಲ್ಲಿ ಪ್ರಬಲವಾಗುತ್ತಲೇ ಇದೆ ಎಸ್‌ಪಿ!

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿರುವ ಎಸ್‌ಪಿಯ ಅಖಿಲೇಶ್‌ ಯಾದವ್‌ ತಮ್ಮ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಜತೆ ಮೈತ್ರಿ ಮಾಡಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

ಚಿಕ್ಕಪ್ಪನ ಜತೆ ಮೈತ್ರಿ ಘೋಷಿಸಿದ ಅಖಿಲೇಶ್‌ ಯಾದವ್‌, ಯುಪಿಯಲ್ಲಿ ಪ್ರಬಲವಾಗುತ್ತಲೇ ಇದೆ ಎಸ್‌ಪಿ!
Linkup
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿರುವ (ಎಸ್‌ಪಿ)ದ ತಮ್ಮ ಚಿಕ್ಕಪ್ಪ ಜತೆ ಕದನ ವಿರಾಮ ಘೋಷಿಸಲು ನಿರ್ಧರಿಸಿದ್ದಾರೆ. ಜತೆಗೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ. ಲಕ್ನೋದಲ್ಲಿ ಗುರುವಾರ ನಡೆದ ಸುಮಾರು 45 ನಿಮಿಷಗಳ ಸಭೆಯ ಬಳಿಕ ಭೇಟಿಯ ಚಿತ್ರ ಟ್ಟೀಟ್‌ ಮಾಡಿರುವ ಅಖಿಲೇಶ್‌ ಯಾದವ್‌, 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. 2017ರ ವಿಧಾನಸಭೆ ಚುನಾವಣೆಗೂ ಮುನ್ನ ಶಿವಪಾಲ್‌ ಯಾದವ್‌ ಸಮಾಜವಾದಿ ಪಕ್ಷದಿಂದ ದೂರ ಸರಿದಿದ್ದಲ್ಲದೆ ತಮ್ಮದೇ ಸ್ವಂತ ಪಕ್ಷ ಸ್ಥಾಪನೆ ಮಾಡಿಕೊಂಡಿದ್ದರು. ಅಖಿಲೇಶ್‌ ಯಾದವ್‌ ಜತೆಗಿನ ಮುನಿಸಿನ ಬಳಿಕ ಪಕ್ಷ ತೊರೆದಿದ್ದ ಅವರು ತಮ್ಮ ಪಕ್ಷಕ್ಕೆ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಎಂದು ಹೆಸರಿಟ್ಟಿದ್ದರು. ಕಳೆದ ವರ್ಷ ಶಿವಪಾಲ್‌ ಯಾದವ್‌ ಹಲವು ಬಾರಿ ತಾವು ಹೊಂದಾಣಿಕೆಗೆ ಸಿದ್ಧ ಎಂದು ಬಹಿರಂಗವಾಗಿ ಹೇಳಿದ್ದರೂ, ಅಖಿಲೇಶ್‌ ಯಾದವ್‌ ಮಾತ್ರ ಅವರನ್ನು ನಿರ್ಲಕ್ಷಿಸಿದ್ದರು. ಆದರೆ ಈಗ ಅಖಿಲೇಶ್‌ ತಮ್ಮ ನಿರ್ಧಾರ ಬದಲಿಸಿದ್ದಾರೆ. “ಪಿಎಸ್‌ಪಿಎಲ್‌ನ ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಭೆ ನಡೆಸಿ ಮೈತ್ರಿ ವಿಚಾರವನ್ನು ನಿರ್ಧರಿಸಲಾಯಿತು. ಪ್ರಾದೇಶಿಕ ಪಕ್ಷಗಳನ್ನು ಕರೆದುಕೊಂಡು ಹೋಗುವ ನೀತಿಯು ಎಸ್‌ಪಿಯನ್ನು ನಿರಂತರವಾಗಿ ಬಲಪಡಿಸುತ್ತಿದೆ ಮತ್ತು ಎಸ್‌ಪಿ ಮತ್ತು ಇತರ ಮಿತ್ರಪಕ್ಷಗಳನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ಯುತ್ತಿದೆ,” ಎಂದು ಅಖಿಲೇಶ್‌ ಯಾದವ್‌ ಭೇಟಿ ಬಳಿಕ ಹಿಂದಿಯಲ್ಲಿ ಟ್ಟೀಟ್‌ ಮಾಡಿದ್ದಾರೆ. ಈಗಾಗಲೇ ಹಲವು ಸಣ್ಣ ಪುಟ್ಟ ಪಕ್ಷಗಳ ಜತೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಜನವಾದಿ ಪಾರ್ಟಿ (ಸೋಷಿಯಲಿಸ್ಟ್‌), ಓಂ ಪ್ರಕಾಶ್‌ ರಾಜ್‌ಭರ್‌ ಅವರ ಎಸ್‌ಬಿಎಸ್‌ಪಿ, ಕೇಶವ್‌ ದೇವ್‌ ಮೌರ್ಯ ಅವರ ಮಹಾನ್‌ ದಳ್‌, ಕೃಷ್ಣಾ ಪಟೇಲ್‌ ನೇತೃತ್ವದ ಅಪ್ನಾ ದಳ ಬಣ ಮತ್ತು ಜಯಂತ್‌ ಚೌಧರಿಯ ರಾಷ್ಟ್ರೀಯ ಲೋಕದಳದ ಜತೆ ಅಖಿಲೇಶ್‌ ಯಾದವ್‌ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೈತ್ರಿಯೂ ಸೇರಿದರೆ ಇದು ಸ್ಥಳೀಯ ಪಕ್ಷಗಳ ಜತೆಗಿನ ಎಸ್‌ಪಿ ಆರನೇ ಮೈತ್ರಿಯಾಗಲಿದೆ. ಇತ್ತೀಚೆಗೆ ಅಖಿಲೇಶ್‌ ಯಾದವ್‌ ಸಮಾವೇಶಗಳಿಗೆ ಉತ್ತರ ಪ್ರದೇಶದಲ್ಲಿ ಭಾರೀ ಜನರು ಹರಿದು ಬರುತ್ತಿದ್ದಾರೆ. ಜತೆಗೆ ಸಣ್ಣಪುಟ್ಟ ಪಕ್ಷಗಳನ್ನು ಜತೆಗೆ ಕರೆದುಕೊಂಡು ಹೋಗುವ ಅವರ ತಂತ್ರಗಾರಿಗೆ ಕುತೂಹಲ ಹುಟ್ಟಿಸಿರುವುದಂತೂ ಸತ್ಯ. ಇಟವಾ ಭಾಗದಲ್ಲಿ ಕೆಲವೇ ಕ್ಷೇತ್ರಗಳ ಮೇಲೆ ಶಿವಪಾಲ್‌ ಯಾವದ್ ಪಕ್ಷದ ಪ್ರಭಾವ ಇದೆ. ಆದರೆ ಹಿರಿಯ ನಾಯಕನಾಗಿ, ಸಮಾಜವಾದಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿ ಅವರ ಸಲಹೆ ಸೂಚನೆಗಳು ಅಖಿಲೇಶ್‌ ಯಾದವ್‌ ಪಾಲಿಗೆ ಸಹಾಯಕವಾಗುವ ಎಲ್ಲಾ ಸಾಧ್ಯತೆಗಳು ಇವೆ. ಜತೆಗೆ ಈ ಬೆಳವಣಿಗೆಯಿಂದ ಸಮಾಜವಾದಿ ಪಕ್ಷದ ಮತದಾರರಿಗೆ ಒಗ್ಗಟ್ಟಿನ ಸಂದೇಶವೂ ರವಾನೆಯಾಗಲಿದೆ ಎಂದೂ ಪಕ್ಷದ ಮೂಲಗಳು ಹೇಳಿವೆ. ಹಾಗೆ ನೋಡಿದರೆ ಮುಲಾಯಂ ಸಿಂಗ್‌ ತಮ್ಮ ಶಿವಪಾಲ್‌ ಯಾದವ್‌ ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಬಳಿಕ ಎರಡನೇ ಅತೀ ದೊಡ್ಡ ನಾಯಕರಾಗಿದ್ದವರು. ಆದರೆ 2017ರ ಚುನಾವಣೆಗೂ ಮುನ್ನ ಪಕ್ಷದ ನಾಯಕತ್ವ ಸಂಬಂಧ ಅಖಿಲೇಶ್‌ ಜತೆ ಮುನಿಸಿಕೊಂಡು ಪಕ್ಷ ಬಿಟ್ಟಿದ್ದರು. 2017ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಈ ಹೊಯ್ದಾಟದಲ್ಲಿ ಮುಲಾಯಂ ಸಿಂಗ್‌ ಯಾದವ್‌ ಮಗನ ಬದಲು ತಮ್ಮ ಶಿವಪಾಲ್‌ ಯಾದವ್‌ ಜತೆಗೆ ನಿಂತಿದ್ದರು. ಆದರೆ ಪಕ್ಷದ ಮೇಲೆ ಪ್ರಬಲ ಹಿಡಿತ ಹೊಂದಿದ್ದ ಅಂದಿನ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸಮಾಜವಾದಿ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ನಂತರ ಶಿವಪಾಲ್‌ ಯಾದವ್‌ ತಮ್ಮದೇ ಪಕ್ಷವನ್ನು ಹುಟ್ಟುಹಾಕಿದ್ದರು. ಈ ಬೆಳವಣಿಗೆ ಹಾಗೂ ಇತರ ಹಲವು ಕಾರಣಗಳಿಂದ 2017ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮಕಾಡೆ ಮಲಗಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂ ಎಸ್‌ಪಿ ಮೈತ್ರಿ ಮಾಡಿಕೊಂಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬದ್ಧ ವೈರಿ ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡಿತು. ಆದರೆ ಎರಡೂ ಕಹಿ ಅನುಭವಗಳ ಬಳಿಕ ಇದೀಗ ಸಣ್ಣಪುಟ್ಟ ಪಕ್ಷಗಳನ್ನಷ್ಟೆ ಜತೆಗಿಟ್ಟುಕೊಂಡು ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಧುಮುಕಿದೆ ಸಮಾಜವಾದಿ ಪಕ್ಷ. ಸಹಜವಾಗಿಯೇ ಫಲಿತಾಂಶ ಏನಾಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.