ಗುಂಪಿನಿಂದ ಹೊರಹಾಕಲ್ಪಟ್ಟ ಪುಂಡಾನೆಯಿಂದ ದಾಳಿ: 2 ತಿಂಗಳಲ್ಲಿ 16 ಗ್ರಾಮಸ್ಥರ ಸಾವು

ತನ್ನ ದುರ್ವರ್ತನೆಯ ಕಾರಣದಿಂದ ಗುಂಪಿನಿಂದ ಉಚ್ಚಾಟನೆಗೊಂಡಿದ್ದ ಸಲಗವೊಂದು ಜಾರ್ಖಂಡ್‌ನ ಬುಡಕಟ್ಟು ಹಳ್ಳಿಯಲ್ಲಿ 16 ಗ್ರಾಮಸ್ಥರನ್ನು ಕೊಂದು ಹಾಕಿದೆ. ಈ ಸಲಗವು ತನ್ನ ಗುಂಪನ್ನು ಮರಳಿ ಸೇರಿಕೊಳ್ಳಲಿದೆಯೇ ಎಂದು ಅರಣ್ಯ ಇಲಾಖೆ ಪರಿಶೀಲಿಸುತ್ತಿದೆ.

ಗುಂಪಿನಿಂದ ಹೊರಹಾಕಲ್ಪಟ್ಟ ಪುಂಡಾನೆಯಿಂದ ದಾಳಿ: 2 ತಿಂಗಳಲ್ಲಿ 16 ಗ್ರಾಮಸ್ಥರ ಸಾವು
Linkup
ರಾಂಚಿ: ಜಾರ್ಖಂಡ್‌ನಲ್ಲಿ ಪುಂಡಾನೆಯೊಂದು ಎರಡು ತಿಂಗಳಲ್ಲಿ ಕನಿಷ್ಠ 16 ಗ್ರಾಮಸ್ಥರನ್ನು ಕೊಂದುಹಾಕಿದೆ. ಈ ಪುಂಡಾನೆಯನ್ನು ಕೆಟ್ಟ ವರ್ತನೆಯ ಕಾರಣದಿಂದ ಆನೆಗಳ ಗುಂಪು ಹೊರಗೆ ಹಾಕಿದ್ದಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 22 ಆನೆಗಳ ಹಿಂಡಿನಲ್ಲಿದ್ದ 15-16 ವರ್ಷದ ಈ ಗಂಡಾನೆಯು ಕೆಲವು ತಿಂಗಳ ಹಿಂದೆ ತನ್ನ ಗುಂಪಿನಿಂದ ಪ್ರತ್ಯೇಕಗೊಂಡಿತ್ತು. ಅಂದಿನಿಂದಲೂ ಅದು ಜಾರ್ಖಂಡ್‌ನ ಬುಡಕಟ್ಟು ಪ್ರದೇಶ ಸಂತಲ್ ಪರ್ಗನದಲ್ಲಿ ದಾಂದಲೆಗಳನ್ನು ನಡೆಸುತ್ತಿದೆ. 'ಈ ಸಲಗವು ಉದ್ರೇಕಕ್ಕೆ ಬಂದಿರಬಹುದು, ಈ ಸಮಯದಲ್ಲಿ ಕೆಟ್ಟ ವರ್ತನೆ ಪ್ರದರ್ಶಿಸಬಹುದು ಅಥವಾ ಇತರೆ ಗಂಡಾನೆಗಳೊಂದಿಗೆ ಲೈಂಗಿಕ ದ್ವೇಷ ಸಾಧಿಸಿರಬಹುದು. ಇಂತಹ ಕಾರಣಗಳಿಂದ ಆನೆಗಳು ತಮ್ಮ ಗುಂಪಿನಿಂದ ಉಚ್ಚಾಟನೆ ಮಾಡುತ್ತವೆ' ಎಂದು ಪ್ರಾದೇಶಿಕ ವಿಭಾಗೀಯ ಅರಣ್ಯಾಧಿಕಾರಿ ಸತೀಶ್ ಚಂದ್ರ ರೈ ತಿಳಿಸಿದ್ದಾರೆ. 'ನಾವು ಆತನ ವರ್ತನೆಯನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು 20 ಅಧಿಕಾರಿಗಳ ತಂಡವು ನಿರಂತರವಾಗಿ ಆತನ ಜಾಡು ಪತ್ತೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಏಕೆಂದರೆ ಆ ಪ್ರಾಣಿಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ' ಎಂದು ಅವರು ತಿಳಿಸಿದ್ದಾರೆ. ಈ ಆನೆಯು ಈಗ ತನ್ನ ಗುಂಪನ್ನು ಮರಳಿ ಸೇರಿಕೊಳ್ಳಲು ಪ್ರಯತ್ನಿಸುತ್ತಿದೆ. ಅದು ಊಹಿಸಲೂ ಅಸಾಧ್ಯವಾದ ವೇಗದಲ್ಲಿ ಸಾಗುತ್ತಿದೆ. ಅದರ ನಡೆಯನ್ನು ಅಂದಾಜಿಸುವುದು ಕಷ್ಟಕರ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪುಂಡಾನೆಯು ಮಂಗಳವಾರ ಮುಂಜಾನೆ ಹೊರಗೆ ಹೋಗಿದ್ದ ವೃದ್ಧ ದಂಪತಿಯನ್ನು ಸೊಂಡಿಲಿನಲ್ಲಿ ಹಿಡಿದೆತ್ತಿ ಕೊಂದು ಹೊಸಕಿ ಹಾಕಿತ್ತು. ಈ ಜನರ ಮೇಲೆ ದಾಳಿ ನಡೆಸಿ ಕೊಲ್ಲುತ್ತಿಲ್ಲ. ತನ್ನ ದಾರಿಯಲ್ಲಿ ಎದುರಾದವರನ್ನು, ತೀರಾ ಸಮೀಪಕ್ಕೆ ಬಂದವರನ್ನು ಅಥವಾ ತನ್ನನ್ನು ಪ್ರಚೋದಿಸಿ, ಚಿತ್ರ ತೆಗೆಯಲು ಹೋದವರನ್ನು ಸಾಯಿಸುತ್ತಿದೆ. ಇದು ಗ್ರಾಮಸ್ಥರ ಮನೆಗಳ ಮೇಲೆ ದಾಳಿ ನಡೆಸಿಲ್ಲ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. 'ತಾನು ಕೆಟ್ಟವನಲ್ಲ ಎಂದು ಸಾಬೀತುಪಡಿಸಿದರೆ, ಆನೆಗಳ ಗುಂಪು ಆತನನ್ನು ಮರಳಿ ಸೇರಿಸಿಕೊಳ್ಳಲಿದೆಯೇ ಎಂಬುದನ್ನು ನೋಡಲು ಬಯಸಿದ್ದೇವೆ' ಎಂದಿದ್ದಾರೆ.