ಗುಡ್ ನ್ಯೂಸ್: ಕೋವಿಡ್ 19 ಗೆದ್ದು ಬಂದ ಮಹಾರಾಷ್ಟ್ರದ ಶತಾಯುಷಿ ಅಜ್ಜ

ಕೋವಿಡ್ 19 ಸೋಂಕಿನಿಂದ ಕಡಿಮೆ ಪ್ರಾಯದ ಜನರೂ ಮೃತಪಡುತ್ತಿರುವ ಆಘಾತಕಾರಿ ಘಟನೆಗಳ ನಡುವೆ, ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ 103 ವರ್ಷದ ವೃದ್ಧ ಶಾಮರಾವ್ ಇಂಗ್ಲೆ ಎಂಬುವವರು ಸೋಂಕಿನ ವಿರುದ್ಧದ ಹೋರಾಟದಲ್ಲಿ ಗೆಲುವು ಕಂಡಿದ್ದಾರೆ.

ಗುಡ್ ನ್ಯೂಸ್: ಕೋವಿಡ್ 19 ಗೆದ್ದು ಬಂದ ಮಹಾರಾಷ್ಟ್ರದ ಶತಾಯುಷಿ ಅಜ್ಜ
Linkup
ಮುಂಬಯಿ: ಎರಡನೆಯ ಅಲೆ ಭಾರಿ ಪ್ರಮಾಣದಲ್ಲಿ ಸಾವು ನೋವಿಗೆ ಕಾರಣವಾಗುತ್ತಿದೆ. ತೀರಾ ಚಿಕ್ಕ ವಯಸ್ಸಿನವರೂ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿರುವ ಮತ್ತು ಆ ಸಮಸ್ಯೆಯನ್ನು ಎದುರಿಸಿ ಬರಲು ಹೆಣಗಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೋವಿಡ್ ಮೊದಲ ಅಲೆಯಲ್ಲಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದು ವಯೋವೃದ್ಧರು. ಹೀಗೆ ಕೋವಿಡ್ ತಗುಲಿದ ಅನೇಕ ವೃದ್ಧರು ಅದನ್ನು ಜಯಿಸಿ ಬಂದಿದ್ದರು. ಪಾಲ್ಘಾರ್‌ನಲ್ಲಿ ಶತಾಯುಷಿಯೊಬ್ಬರು ಎರಡನೆ ಅಲೆಯಲ್ಲಿನ ಕೋವಿಡ್ ಅನ್ನು ಗೆದ್ದಿದ್ದಾರೆ. ಕೋವಿಡ್‌ನಿಂದ ಅತ್ಯಂತ ಅಪಾಯ ಎದುರಿಸುವ ವಯಸ್ಸಿನ ಗುಂಪಿನಲ್ಲಿದ್ದರೂ 103 ವರ್ಷದ ವ್ಯಕ್ತಿಯೊಬ್ಬರು ರೋಗದಿಂದ ಗುಣಮುಖರಾಗಿ ಬಂದಿದ್ದಾರೆ. ಇದು ಈ ಸನ್ನಿವೇಶದ ಅಪರೂಪದ ಸಕಾರಾತ್ಮಕ ಸುದ್ದಿಯೂ ಹೌದು. ಪಾಲ್ಘಾರ್‌ನ ವೀರೇಂದ್ರ ನಗರ ಪ್ರದೇಶದ ಶಾಮರಾವ್ ಇಂಗ್ಲೆ ಅವರು ಸೋಂಕಿಗೆ ಒಳಗಾದ ಬಳಿಕ ಪಾಲ್ಘಾರ್‌ನ ಗ್ರಾಮೀಣ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಕಚೇರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರ ಪ್ರಕಾರ, 103 ವರ್ಷದ ಇಂಗ್ಲೆ ಅವರು ವೈದ್ಯಕೀಯ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿದರು. ಜತೆಗೆ ಆಸ್ಪತ್ರೆ ಸಿಬ್ಬಂದಿಗೆ ಉತ್ತಮ ಸಹಕಾರ ನೀಡಿದರು. ಶನಿವಾರ ಆಸ್ಪತ್ರೆಯಿಂದ ನಗುವಿನೊಂದಿಗೆ ಹೊರ ನಡೆದರು. ಶತಾಯುಷಿ ಅಜ್ಜನ ಹೋರಾಟ ಅನೇಕರಲ್ಲಿ ಸ್ಫೂರ್ತಿ ನೀಡಿದೆ. ಜಿಲ್ಲಾಧಿಕಾರಿ ಡಾ. ಮಾಣಿಕ್ ಗುರ್ಸಲ್ ಮತ್ತು ಆಸ್ಪತ್ರೆ ಸಿಬ್ಬಂದಿ ಅವರನ್ನು ಅಭಿನಂದಿಸಿ ಶುಭ ಕೋರಿದರು.