ನೆಹರೂ-ಗಾಂಧಿ ಕುಟುಂಬದಿಂದಾಗಿ ಭಾರತ ಉಳಿಯುತ್ತಿದೆ: ಮೋದಿ ಸರ್ಕಾರದ ವಿರುದ್ಧ ಶಿವಸೇನಾ ಕಿಡಿ

ಭಾರತದ ಕೋವಿಡ್ ಸನ್ನಿವೇಶದ ಬಗ್ಗೆ ಇಡೀ ಜಗತ್ತು ಆತಂಕ ಪಡುತ್ತಿದೆ. ನೆರೆಯ ಬಡ ದೇಶಗಳೂ ಭಾರತಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿವೆ. ಅವು ನೀಡುವ ನೆರವನ್ನೆಲ್ಲ ಸ್ವೀಕರಿಸುತ್ತಿರುವ ಮೋದಿ ಸರ್ಕಾರ, ತನ್ನ ಬಹುಕೋಟಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಮಾತ್ರ ನಿಲ್ಲಿಸುತ್ತಿಲ್ಲ ಎಂದು ಶಿವಸೇನಾ ಕಿಡಿಕಾರಿದೆ.

ನೆಹರೂ-ಗಾಂಧಿ ಕುಟುಂಬದಿಂದಾಗಿ ಭಾರತ ಉಳಿಯುತ್ತಿದೆ: ಮೋದಿ ಸರ್ಕಾರದ ವಿರುದ್ಧ ಶಿವಸೇನಾ ಕಿಡಿ
Linkup
ಮುಂಬೈ: ಎದುರಿಸುವ ಸಲುವಾಗಿ ನೆರೆಹೊರೆಯಲ್ಲಿನ ಸಣ್ಣ ದೇಶಗಳೂ ಭಾರತಕ್ಕೆ ಸಹಾಯ ಮಾಡಲು ಮುಂದೆ ಬರುತ್ತಿವೆ. ಆದರೆ ಮೋದಿ ಸರ್ಕಾರ ಮಾತ್ರ ದೆಹಲಿಯಲ್ಲಿನ ತನ್ನ ಬಹುಕೋಟಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸ ನಿಲ್ಲಿಸಲು ಸಿದ್ಧವಿಲ್ಲ ಎಂದು ಶಿವಸೇನಾ ವಾಗ್ದಾಳಿ ನಡೆಸಿದೆ. ಹಿಂದಿನ ಪ್ರಧಾನಿಗಳಾದ ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕಳೆದ 70 ವರ್ಷಗಳಿಂದ ಸೃಷ್ಟಿಸಿದ ವ್ಯವಸ್ಥೆಯು, ಇಂದು ದೇಶ ಎದುರಿಸುತ್ತಿರುವ ಈ ಕಠಿಣ ಸಮಯದಲ್ಲಿ ಜೀವಿಸಲು ಸಹಾಯ ಮಾಡುತ್ತಿದೆ ಎಂದು ಸೇನಾ ಹೇಳಿದೆ. 'ದೇಶದಲ್ಲಿ ಹರಡುತ್ತಿರುವ ವೇಗದಿಂದಾಗಿ ಜಗತ್ತಿಗೆ ಭಾರತದಿಂದ ಬೆದರಿಕೆ ಇದೆ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ. ಕೋವಿಡ್ 19ರ ವಿರುದ್ಧ ಭಾರತಕ್ಕೆ ಗರಿಷ್ಠ ಸಂಖ್ಯೆಯಲ್ಲಿ ದೇಶಗಳು ಸಹಾಯ ಮಾಡುವಂತೆ ಅದು ಮನವಿ ಮಾಡಿದೆ. ಬಾಂಗ್ಲಾದೇಶವು 10,000 ರೆಮ್ಡಿಸಿವಿರ್ ಲಸಿಕೆಗಳನ್ನು ಕಳುಹಿಸಿದೆ. ಭೂತಾನ್ ವೈದ್ಯಕೀಯ ಆಕ್ಸಿಜನ್ ರವಾನಿಸಿದೆ. ನೇಪಾಳ, ಮಯನ್ಮಾರ್, ಶ್ರೀಲಂಕಾಗಳು ಕೂಡ 'ಆತ್ಮನಿರ್ಭರ' ಭಾರತಕ್ಕೆ ಸಹಾಯ ಮಾಡಲು ಮುಂದಾಗಿವೆ' ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಹೇಳಿದೆ. 'ಸ್ಪಷ್ಟವಾಗಿ ಹೇಳುವುದಾದರೆ, ಭಾರತವು ನೆಹರೂ-ಗಾಂಧಿ ಕುಟುಂಬ ಸೃಷ್ಟಿಸಿದ ವ್ಯವಸ್ಥೆಯಿಂದಾಗಿ ಉಳಿದಿದೆ. ಅನೇಕ ಬಡ ದೇಶಗಳೂ ಭಾರತಕ್ಕೆ ಸಹಾಯ ಹಸ್ತ ಚಾಚಿವೆ. ಈ ಮುಂದೆ ಪಾಕಿಸ್ತಾನ, ರವಾಂಡಾ ಮತ್ತು ಕಾಂಗೊ ದೇಶಗಳು ಬೇರೆಯವರಿಂದ ಸಹಾಯ ಪಡೆಯುತ್ತಿದ್ದವು. ಆದರೆ ಇಂದಿನ ಆಡಳಿತಾಗಾರರ ತಪ್ಪು ನೀತಿಗಳಿಂದಾಗಿ ಈಗಿನ ಪರಿಸ್ಥಿತಿಗೆ ಹೋಗುವಂತಾಗಿದೆ' ಎಂದು ಕಿಡಿಕಾರಿದೆ. ಬಡ ದೇಶಗಳು ತಮ್ಮ ಕೈಲಾದ ರೀತಿಯಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿರುವಾಗ, ದೆಹಲಿಯಲ್ಲಿ 20,000 ಕೋಟಿ ರೂ ವೆಚ್ಚದ ತನ್ನ ಮಹತ್ವಾಕಾಂಕ್ಷಿ ಸೆಂಟ್ರ ವಿಸ್ತಾ ಪ್ರಾಜೆಕ್ಟ್ ಕೈಬಿಡಲು ಪ್ರಧಾನಿ ಸಿದ್ಧರಿಲ್ಲ ಎಂದು ಆರೋಪಿಸಿದೆ. ಒಂದೆಡೆ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್‌ಗಳಂತಹ ದೇಶಗಳಿಂದ ಭಾರತ ನೆರವನ್ನು ಸ್ವೀಕರಿಸುತ್ತಿದ್ದರೆ, ಇನ್ನೊಂದೆಡೆ ಬಹುಕೋಟಿ ವೆಚ್ಚದ ಯೋಜನೆಯನ್ನು ನಿಲ್ಲಿಸಲು ಪ್ರಧಾನಿ ಮೋದಿ ಮುಂದಾಗದೆ ಇರುವುದರ ಬಗ್ಗೆ ಯಾರಿಗೂ ಪಶ್ಚಾತ್ತಾಪ ಉಂಟಾಗುತ್ತಿಲ್ಲ ಎಂಬ ಬಗ್ಗೆ ಸೇನಾ ಅಚ್ಚರಿ ವ್ಯಕ್ತಪಡಿಸಿದೆ. ಜಗತ್ತು ಕೋವಿಡ್ 19 ಎರಡನೆ ಅಲೆಯ ವಿರುದ್ಧ ಹೋರಾಡುತ್ತಿರುವಾಗ, ಮೂರನೇ ಅಲೆ ಇನ್ನೂ ಭೀಕರವಾಗಿರಲಿದೆ ಎಂದು ಪರಿಣತರು ಭವಿಷ್ಯ ನುಡಿದಿದ್ದಾರೆ. ಆದರೆ ಆಡಳಿತಾರೂಢ ಬಿಜೆಪಿ ಈಗಲೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಾದದ್ದನ್ನೆಲ್ಲ ಮಾಡುತ್ತಿದೆ ಎಂದು ಟೀಕಿಸಿದೆ. ಸಂವೇದನಾಶೀಲ ಮತ್ತು ರಾಷ್ಟ್ರೀಯವಾದಿ ಸರ್ಕಾರವು ರಾಜಕೀಯ ಪರ ಮತ್ತು ವಿರೋಧಗಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಬದಲಾಗಿ ಈ ಸಾಂಕ್ರಾಮಿಕವನ್ನು ಸೋಲಿಸಲು ಮಾರ್ಗಗಳ ಬಗ್ಗೆ ಚರ್ಚಿಸುವ ಸಲುವಾಗಿ ಎಲ್ಲ ಮುಖ್ಯಪಕ್ಷಗಳೊಂದಿಗೆ ರಾಷ್ಟ್ರೀಯ ಸಮಿತಿಯನ್ನು ರಚಿಸುತ್ತಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಆರೋಗ್ಯ ಸಚಿವರನ್ನಾಗಿ ಮಾಡುವಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ಈಗಿನ ಕೇಂದ್ರ ಆರೋಗ್ಯ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಸೇನಾ ಹೇಳಿದೆ. ವೈರಸ್‌ನಿಂದ ಉಂಟಾಗುತ್ತಿರುವ ಮರಣ ಪ್ರಮಾಣದಲ್ಲಿ ನಾವು ಅಮೆರಿಕ ಮತ್ತು ಬ್ರೆಜಿಲ್‌ಗಳನ್ನೂ ಹಿಂದಿಕ್ಕಿದ್ದೇವೆ. ಇಡೀ ಜಗತ್ತು ಈಗ ಭಾರತದ ಬಗ್ಗೆ ಭಯಪಡುತ್ತಿದೆ. ಭಾರತವು ಇಂದು ಉಳಿಯುತ್ತಿರುವುದಕ್ಕೆ ಪಂಡಿತ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವರ ಸರ್ಕಾರಗಳು ಸ್ಥಾಪಿಸಿದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ನೀಡಿದ ಆತ್ಮವಿಶ್ವಾಸಕ್ಕೆ ಧನ್ಯವಾದ ಸಲ್ಲಿಸಬೇಕು ಎಂದು ಹೇಳಿದೆ.