ಕೊವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯ ನಿರೀಕ್ಷೆಯಲ್ಲಿ ಭಾರತ್‌ ಬಯೋಟೆಕ್‌

ವಿಶ್ವ ಆರೋಗ್ಯ ಸಂಸ್ಥೆ ಫೈಜರ್‌, ಮಾಡೆರ್ನಾ ಮತ್ತು ಕೋವಿಶೀಲ್ಡ್‌ ಲಸಿಕೆಗಳಿಗೆ ಮಾತ್ರ ಅನುಮತಿ ನೀಡಿದೆ. ಕೊವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕೇಳಿದ್ದು, ಸದ್ಯಕ್ಕೆ ಈ ಲಸಿಕೆಗೆ ಅನುಮತಿ ನೀಡಿಲ್ಲ.

ಕೊವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯ ನಿರೀಕ್ಷೆಯಲ್ಲಿ ಭಾರತ್‌ ಬಯೋಟೆಕ್‌
Linkup
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮತ್ತೆ ಅಂತಾರಾಷ್ಟ್ರೀಯ ಪ್ರಯಾಣ ಆರಂಭವಾಗಿದೆ. ಆದರೆ ಭಾರತದಿಂದ ವಿದೇಶಕ್ಕೆ ತೆರಳುತ್ತಿರುವವರು ಲಸಿಕೆ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತದ ಪತ್ತೆ ಹಚ್ಚಿರುವ ಲಸಿಕೆಗೆ ಇಲ್ಲಿಯವರೆಗೆ ಅನುಮತಿ ಸಿಕ್ಕಿಲ್ಲ. ಜತೆಗೆ ಹಲವು ದೇಶಗಳೂ ಲಸಿಕೆಯ ಪಟ್ಟಿಯಲ್ಲಿ ಇದನ್ನು ನಮೂದಿಸಿಲ್ಲ. ಹೀಗಾಗಿ ಈ ಲಸಿಕೆ ಪಡೆದುಕೊಂಡು ವಿದೇಶಕ್ಕೆ ತೆರಳುತ್ತಿರುವವರು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಲಸಿಕೆ ಪಡೆದಿದ್ದರೂ, ಅದು ಆ ದೇಶಗಳಲ್ಲಿ ಲಸಿಕೆ ಎಂದು ಪರಿಗಣನೆಗೆ ಒಳಗಾಗುತ್ತಿಲ್ಲ. ಪ್ರಮುಖವಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್‌ ಮತ್ತು ಯುರೋಪಿಯನ್‌ ಯೂನಿಯನ್‌ ಕೊವ್ಯಾಕ್ಸಿನ್‌ಗೆ ಅನುಮತಿ ನೀಡಿಲ್ಲ. ಉನ್ನತ ವಿವಿಗಳು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಯಾ ದೇಶಗಳು ಅನುಮತಿ ನೀಡಿದ ಲಸಿಕೆಯನ್ನು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುತ್ತಿವೆ. ಇದರಿಂದ ಭಾರತದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಡ್ಡಾಯವಾಗಿ ಹೋಟೆಲ್‌ ಕ್ವಾರಂಟೈನ್‌ಗೆ ಒಳಗಾಗಬೇಕಾಗಿ ಬಂದಿದೆ. ಡಬ್ಲ್ಯೂಎಚ್‌ಒ ಫೈಜರ್‌, ಮಾಡೆರ್ನಾ ಮತ್ತು ಕೋವಿಶೀಲ್ಡ್‌ ಲಸಿಕೆಗೆ ಮಾತ್ರ ಅನುಮತಿ ನೀಡಿದೆ. ಕೊವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕೇಳಿದೆ. ಹೀಗಾಗಿ ಸದ್ಯಕ್ಕೆ ಈ ಲಸಿಕೆಗೆ ಅನುಮತಿ ಸಿಕ್ಕಿಲ್ಲ. ಸರಕಾರದ ಜತೆ ಮಂಗಳವಾರ ನಡೆದ ಸಭೆಯಲ್ಲಿ ಭಾರತ್‌ ಬಯೋಟೆಕ್‌, ವಿಶ್ವ ಆರೋಗ್ಯ ಸಂಸ್ಥೆ ಕೇಳಿದ ಶೇ. 90ರಷ್ಟು ದಾಖಲೆಗಳನ್ನು ನೀಡಿರುವುದಾಗಿ ಹೇಳಿದೆ. “ಉಳಿದ ದಾಖಲೆಗಳನ್ನು ಜೂನ್‌ನಲ್ಲಿ ಸಲ್ಲಿಕೆ ಮಾಡಲಿದ್ದೇವೆ,” ಎಂದು ಕಂಪನಿ ಸಭೆಯಲ್ಲಿ ಹೇಳಿದ್ದಾಗಿ ಸರಕಾರದ ಮೂಲಗಳು ಹೇಳಿವೆ. ತಮ್ಮ ಅನುಭವದ ಆಧಾರದ ಮೇಲೆ ಲಸಿಕೆಗೆ ಅನುಮತಿ ಸಿಗುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ. ಬ್ರೆಜಿಲ್‌ ಮತ್ತು ಹಂಗರಿಯಲ್ಲಿ ಲಸಿಕೆಗೆ ಅನುಮತಿ ನೀಡುವ ಸಂಬಂಧ ನಾವು ಅಂತಿಮ ಹಂತದ ದಾಖಲೆಗಳನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ಭಾರತ್‌ ಬಯೋಟೆಕ್‌ ಹೇಳಿದೆ ಎನ್ನಲಾಗಿದೆ. ಜತೆಗೆ ಅಮೆರಿಕದಲ್ಲಿ ಸಣ್ಣ ಪ್ರಮಾಣದಲ್ಲಿ ಮೂರನೇ ಹಂತದ ಪ್ರಯೋಗ ನಡೆಸಲೂ ಅನುಮತಿ ಕೋರಲಾಗಿದ್ದು, ಇದೂ ಅಂತಿಮ ಹಂತದಲ್ಲಿದೆ. ಈಗಾಗಲೇ ಕೊವ್ಯಾಕ್ಸಿನ್‌ಗೆ 11 ದೇಶಗಳು ಅನುಮತಿ ನೀಡಿವೆ. ಜತೆಗೆ 7 ದೇಶಗಳ 11 ಕಂಪನಿಗಳು ತಂತ್ರಜ್ಞಾನದ ವರ್ಗಾವಣೆ ಮತ್ತು ಲಸಿಕೆ ಉತ್ಪಾದನೆಗೆ ಆಸಕ್ತಿ ತೋರಿವೆ. ಈ ಮಾಹಿತಿಯನ್ನೂ ಕಂಪನಿ ಸರಕಾರಕ್ಕೆ ನೀಡಿದೆ.