ಕೋವಿಡ್ ಪರಿಣಾಮ: ಕರ್ನಾಟಕದ ವಿವಿಧ ನಗರಗಳಲ್ಲಿ ಮನೆ ಬಾಡಿಗೆ ದರ ಶೇ 10-15ರಷ್ಟು ಇಳಿಕೆ

ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಬೆಂಗಳೂರು ಹಾಗೂ ಇತರೆ ನಗರಗಳಿಂದ ಜನರು ತಮ್ಮ ಊರುಗಳಿಗೆ ಗುಳೆ ಹೋಗಿದ್ದಾರೆ. ಇದರಿಂದ ನಗರಗಳಲ್ಲಿನ ಬಾಡಿಗೆ ಮನೆಗಳು ಖಾಲಿಯಾಗುತ್ತಿದ್ದು, ಬಾಡಿಗೆ ದರ ಕುಸಿತವಾಗಿದೆ.

ಕೋವಿಡ್ ಪರಿಣಾಮ: ಕರ್ನಾಟಕದ ವಿವಿಧ ನಗರಗಳಲ್ಲಿ ಮನೆ ಬಾಡಿಗೆ ದರ ಶೇ 10-15ರಷ್ಟು ಇಳಿಕೆ
Linkup
ಬೆಂಗಳೂರು: ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಾಗೂ ಇತರೆ ಪ್ರಮುಖ ನಗರಗಳಿಂದ ಜನರು ತಮ್ಮ ತಮ್ಮ ಊರುಗಳಿಗೆ ಮರಳಿ ಹೋಗುತ್ತಿದ್ದಾರೆ. ಬಹುತೇಕ ಕಂಪೆನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ಒದಗಿಸಿರುವುದರಿಂದ ಮತ್ತು ಬೆಂಗಳೂರಿನಲ್ಲಿನ ದುಡಿಯುವ ಮಾರ್ಗಗಳು ಮುಚ್ಚಿ ಪರದಾಡುವಂತಾಗಿರುವುದರಿಂದ ಅನೇಕರು ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಈ ಕಾರಣದಿಂದ ನಗರಗಳಲ್ಲಿನ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಾಡಿಗೆ ದರದಲ್ಲಿ ಶೇ 10-15ರಷ್ಟು ಇಳಿಕೆಯಾಗಿದೆ. ಕೋವಿಡ್ 19 ಹೆಚ್ಚಳದ ನಡುವೆ ಬಾಡಿಗೆದಾರರು ಆರ್ಥಿಕ ಮುಗ್ಗಟ್ಟಿನ ಕಾರಣ ಮತ್ತು ಸುರಕ್ಷತೆಯ ದೃಷ್ಟಿಯಿಂದ ತಮ್ಮ ಮೂಲ ಊರುಗಳಿಗೆ ವಾಪಸಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಆಸ್ತಿಗಳು, ಮುಖ್ಯವಾಗಿ ಫ್ಲ್ಯಾಟ್‌ಗಳು ಖಾಲಿಯಾಗಿವೆ. ಲಾಕ್‌ಡೌನ್ ಕಾರಣದಿಂದ ಊರಿಗೆ ಹೋಗಿರುವ ಅನೇಕರು ಬೆಂಗಳೂರಿಗೆ ವಾಪಸಾಗಿಲ್ಲ. ದುಬಾರಿ ಸ್ಥಳಗಳಲ್ಲಿ ಒಂದಾದ ಡಾಲರ್ಸ್ ಕಾಲೋನಿಯ ಆರ್‌ಎಂವಿ ಎಕ್ಸ್‌ಟೆನ್ಷನ್ 2ನೇ ಹಂತದಲ್ಲಿ 4 ಬಿಎಚ್‌ಕೆ ಮನೆಯ ಮಾಸಿಕ ಬಾಡಿಗೆ ಮಾರ್ಚ್‌ನಲ್ಲಿ 50,000 ರೂ ಇದ್ದದ್ದು, ಈಗ 45,000 ರೂಪಾಯಿಗೆ ಇಳಿದಿದೆ. ಸಮೀಪದ ಆರ್‌ಟಿ ನಗರದಲ್ಲಿ 3 ಬಿಎಚ್‌ಕೆ ಸ್ವತಂತ್ರ ಮನೆಯು ಈ ಮುಂಚೆ 35,000 ರೂ ಬಾಡಿಗೆ ದರವಿದ್ದರೆ, ಈಗ 31,000 ರೂಪಾಯಿಗೆ ಇಳಿದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದೇ ಸ್ಥಿತಿ ಇದೆ. ವೈಟ್ ಫೀಲ್ಡ್ ಸಮೀಪದ ಹೂಡಿಯಲ್ಲಿ 4 ಬಿಎಚ್‌ಕೆ ಅಪಾರ್ಟ್‌ಮೆಂಟ್ 25,000 ರೂಪಾಯಿಯಿಂದ 21,000ಕ್ಕೆ ಇಳಿಕೆಯಾಗಿದೆ. ಮೈಸೂರಿನಲ್ಲಿಯೂ ಇಳಿಕೆ ಮೈಸೂರಿನ ವಿಜಯನಗರ 1ನೇ ಹಂತದ 2 ಬಿಎಚ್‌ಕೆ ಒಂದೆರಡು ತಿಂಗಳ ಹಿಂದೆ 25,000 ರೂ ಇದ್ದದ್ದು, ಈಗ 19,000ಕ್ಕೆ ಕುಸಿದಿದೆ. ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ನಗರಗಳಲ್ಲಿಯೂ ಬಾಡಿಗೆ ದರ ಇಳಿಕೆಯಾಗಿದೆ. 'ಬೆಂಗಳೂರಿನಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಬಾಡಿಗೆ ದರವು ಶೇ 10-15ರಷ್ಟು ಇಳಿಕೆಯಾಗಿದೆ. ಉದ್ಯೋಗ ನಷ್ಟ, ವೇತನ ಕಡಿತ, ವ್ಯವಹಾರ ಕುಸಿತ ಮತ್ತು ಬಾಡಿಗೆ ಅಪಾರ್ಟ್‌ಮೆಂಟ್‌ಗಳ ಸಂಖ್ಯೆಯ ಹೆಚ್ಚಳಗಳು ಇದಕ್ಕೆ ಕಾರಣ' ಎನ್ನುತ್ತಾರೆ ಸಿಲ್ವರ್‌ಲೈನ್ ರಿಯಾಲ್ಟಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಫಾರೂಕ್ ಮಹಮೂದ್. ದುಬಾರಿ ಬಾಡಿಗೆಗಳಲ್ಲಿ ಬದಲಾವಣೆ ಇಲ್ಲ ಆದರೆ, ಇಂದಿರಾನಗರ, ಜಯನಗರ ಮತ್ತು ಶಿವಾಜಿನಗರದಂತಹ ಪ್ರದೇಶಗಳಲ್ಲಿ ಬಾಡಿಗೆ ದರದಲ್ಲಿ ಅಂತಹ ಬದಲಾವಣೆಗಳಾಗಿಲ್ಲ. 2 ಲಕ್ಷ ಅಥವಾ ಅದಕ್ಕಿಂತ ಅಧಿಕ ಬಾಡಿಗೆಯಿರುವ ಭಾರಿ ದರದ ಆಸ್ತಿಗಳಲ್ಲಿ ಅತ್ಯಲ್ಪ ಪರಿಣಾಮ ಉಂಟಾಗಿದೆ. ಇಂತಹ ಆಸ್ತಿಗಳಲ್ಲಿ ಖಾಲಿಯಾಗುವ ಮಟ್ಟ ಶೇ 10-15ಕ್ಕಿಂತ ಕಡಿಮೆ ಇದೆ. ಅಂದರೆ ಅಧಿಕ ಬೆಲೆಯ ಬಾಡಿಗೆ ತೆರುತ್ತಿರುವವರು ಹೆಚ್ಚಾಗಿ ಖಾಲಿ ಮಾಡುತ್ತಿಲ್ಲ. ಹೀಗಾಗಿ ಅವುಗಳ ಬಾಡಿಗೆ ದರದ ಮೇಲೆ ಅಂತಹ ಪರಿಣಾಮ ಉಂಟಾಗಿಲ್ಲ ಎಂದು ಇರ್ಷಾದ್ಸ್ ಪ್ರಾಪರ್ಟಿ ಮ್ಯಾಟರ್ಸ್‌ನ ಕಾರ್ಯಕಾರಿ ಮುಖ್ಯಸ್ಥ ಶಬೀರ್ ಶೇಟ್ ಹೇಳಿದ್ದಾರೆ. ಆದರೆ 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಬಾಡಿಗೆ ದರವಿರುವಲ್ಲಿ ವಾಸದ ಸಂಖ್ಯೆ ಇಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಶೇ 25ರಷ್ಟು ಮನೆಗಳು ಖಾಲಿ ಕೋವಿಡ್ 19 ಮೊದಲ ಅಲೆಯ ವೇಳೆ ಮನೆಗಳ ಖಾಲಿಯಾಗುವಿಕೆ ಶೇ 10-15ರಷ್ಟಿತ್ತು. ಆದರೆ ಈಗ ಅದು ಶೇ 25ಕ್ಕೆ ಏರಿಕೆಯಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಮನೆಗಳ ಮಾಲೀಕರು ಮನೆ ಮುಂದೆ 'ಟು-ಲೆಟ್' ಫಲಕಗಳನ್ನು ಹಾಕಿಕೊಂಡಿದ್ದಾರೆ. ಆದರೆ ಅವರಿಗೆ ಬಾಡಿಗೆದಾರರು ಸಿಗುತ್ತಿಲ್ಲ ಎನ್ನುತ್ತಾರೆ ಕೆಲವು ಆಸ್ತಿ ಖರೀದಿ ಸಲಹೆಗಾರರು. ಮಾಲೀಕರಿಗೆ ಅರ್ಥವಾಗುತ್ತಿದೆ 'ಮೊದಲ ಅಲೆ ಸಂದರ್ಭದಲ್ಲಿ ಮನೆ ಮಾಲೀಕರು ಬಾಡಿಗೆ ಇಳಿಸಲು ಸಿದ್ಧರಿರಲಿಲ್ಲ. ಆದರೆ ಕಂಪೆನಿಗಳ ಹಿರಿಯ ಉದ್ಯೋಗಿಗಳು ಮತ್ತು ಇತರರು ವೇತನ ಕಡಿತ ಎದುರಿಸುತ್ತಿರುವುದರಿಂದ ಅಧಿಕ ಬಾಡಿಗೆಗೆ ಕಾಯುವುದರಲ್ಲಿ ಅರ್ಥವಿಲ್ಲ ಎಂದು ಅವರಿಗೆ ಅರ್ಥವಾಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೆ. ಹೀಗಾಗಿ ಜನರು ಅಧಿಕ ಬಾಡಿಗೆ ನೀಡಲು ಸಿದ್ಧರಿಲ್ಲ' ಎಂದು ಮನೆ ಮಾಲೀಕ ಜಿಎನ್ ರಿಷಿಕೇಶ್ ಹೇಳಿದ್ದಾರೆ.