: ಇದು ಮಹಿಳೆಯೊಬ್ಬರ ಕರುಣಾಜನಕ ಕಥೆ.. ಲೆಕ್ಕವಿಲ್ಲದಷ್ಟು ವಿವಾಹಿತ ಹೆಣ್ಣು ಮಕ್ಕಳ ಕಥೆಯಂತೆ ಕಂಡರೂ ಕೂಡಾ, ಇವರ ಬದುಕಿನಲ್ಲಿ ಸಾಲು ಸಾಲಾಗಿ ಬಂದು ನಿಂತಿರುವ ಸಂಕಷ್ಟಗಳು ಎಂಥವರ ಕಣ್ಣನ್ನೂ ತೇವಗೊಳಿಸುತ್ತೆ..
ಹೆಸರು ಅನಿತಾ. ವಯಸ್ಸು 43 ವರ್ಷ. ಈಕೆಗೆ 11 ವರ್ಷದ ಮಗಳಿದ್ದಾಳೆ. ಜೊತೆಯಲ್ಲೇ 80 ವರ್ಷ ವಯಸ್ಸಿನ ವೃದ್ಧ ತಾಯಿಯೂ ಇದ್ದಾರೆ. ನವ್ಯಾ ಹಾಗೂ ತಾಯಿ ಶಾಂತಮ್ಮ ಸೇರಿದಂತೆ ಮೂರು ಜನರ ಈ ಕುಟುಂಬ ಇದೀಗ ದಿಕ್ಕೆಟ್ಟು ಕುಳಿತಿದೆ. ಸ್ವಯಂ ಸೇವಕರು ಆಗಾಗ ತಂದು ಕೊಡುವ ಫುಡ್ ಕಿಟ್ ಮಾತ್ರವೇ ಈ ಕುಟುಂಬದ ಆಧಾರ..
ಆದ್ರೆ ಒಂದು ಕಾಲದಲ್ಲಿ ಅನಿತಾ ಅವರು ಈ ರೀತಿ ಇರಲಿಲ್ಲ. ಅವರದ್ದು ಸುಖೀ ಪರಿವಾರ. ಪಿಯುಸಿ ಓದಿದ್ದ ಅನಿತಾ ಅವರು ಟೀಚರ್ ಆಗುವ ಕನಸು ಕಂಡಿದ್ದರು. ಗಾರ್ಮೆಂಟ್ ಫ್ಯಾಕ್ಟರಿ ಒಂದರಲ್ಲಿ ಲೈಬ್ರೆರಿ ನೋಡಿಕೊಳ್ತಿದ್ದರು. ಆದ್ರೆ, ಅವರ ದುರಂತಮಯ ಅಧ್ಯಾಯ ಆರಂಭವಾಗಿದ್ದು, 2005, ನೆಂಬರ್ 5ನೇ ತಾರೀಖಿನಿಂದ.. ಏಕೆಂದರೆ, ಅಂದು ಅವರ ವಿವಾಹವಾಯ್ತು.
ಸಂಬಂಧಿಕರಲ್ಲೇ ಗಂಡು ನೋಡಿ ಅನಿತಾ ಅವರ ವಿವಾಹ ನೆರವೇರಿಸಲಾಗಿತ್ತು. ಆದ್ರೆ, ಆತ ಮಹಾ ಕುಡುಕ. ರಾಜಕಾರಣಿಯೊಬ್ಬರ ಬಳಿ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಆತ ದಿನವೂ ಕುಡಿದು ಮನೆಗೆ ಬಂದು ಹೆಂಡತಿಗೆ ಹೊಡೆಯುತ್ತಿದ್ದ. ಆತನ ಹೊಡೆತ ತಾಳಲಾರದೆ ಅನಿತಾ ಅವರು ಎಷ್ಟೋ ದಿನ ನಡೆದಾಡಲೂ ಸಾಧ್ಯವಾಗದೆ ಗೋಳಾಡುತ್ತಿದ್ದರು.
2006ರಲ್ಲಿ ಅದೊಂದು ದುರ್ದಿನ ಎಂದಿನಂತೆ ಕುಡಿದು ಬಂದ ಪತಿರಾಯ ಮನಬಂದಂತೆ ಪತ್ನಿಯನ್ನು ಥಳಿಸಿದ. ಮನೆಯಲ್ಲಿದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ತಲೆಗೆ ಬಲವಾದ ಬೀಸಿದ. ಈ ವೇಳೆ, ಅನಿತಾ ಅವರ ತಲೆಗೆ ಗಾಯವಾಯ್ತು. ಅಷ್ಟೇ ಅಲ್ಲ, ಎಡಗಣ್ಣು ಮಂದವಾಗಿ ಹೋಯ್ತು.
ವೈದ್ಯರ ಬಳಿ ಅಲ್ಪಸ್ವಲ್ಪ ಚಿಕಿತ್ಸೆ ಪಡೆದ ಬಳಿಕವೂ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅನಿತಾ ಅವರು ಸಂಸಾರ ಸಾಗಿಸುತ್ತಿದ್ದರು. ಆದ್ರೆ, ಪತಿರಾಯ ಹುಚ್ಚಾಟವೇನೂ ಕಡಿಮೆ ಆಗಲಿಲ್ಲ. 2007, ಮೇ 25ರಂದು ಆತ ತನ್ನ ಪತ್ನಿಗೆ ಮತ್ತೆ ಮಾರಣಾಂತಿಕವಾಗಿ ಥಳಿಸಿದ. ಈ ವೇಳೆ, ಅನಿತಾ ಅವರ ಕಾಲಿನ ಮೂಳೆಯೇ ಮುರಿದುಹೋಗಿತ್ತು.
ಇಷ್ಟಾದ ಬಳಿಕವೂ ಸುಮ್ಮನಿದ್ದರೆ ಆಗದು ಎಂದು ಸಿಡಿದೆದ್ದ ಅನಿತಾ, ಕುಟುಂಬಸ್ಥರ ವಿರೋಧದ ನಡುವೆಯೂ ಪೊಲೀಸರಿಗೆ ದೂರು ನೀಡಿದರು. ಆದ್ರೆ, ತನ್ನ ಪತ್ನಿಯ ಕಾಲಿಡಿದು ಬೇಡಿಕೊಂಡ ಪತಿರಾಯ, ಮುಂದೆ ಈ ರೀತಿ ಆಗೋದಿಲ್ಲ ಎಂದು ಭರವಸೆ ನೀಡಿದ. ಸಂಸಾರ ಸುಗಮವಾಗಿ ನಡೆಯುತ್ತಿದೆ ಎಂಬುದಕ್ಕೆ ಸಂಕೇತವಾಗಿ 2010ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಅನಿತಾ ಜನ್ಮ ನೀಡಿದರು.
ಆದ್ರೆ, ಸಮಸ್ಯೆ ಇಲ್ಲಿಂದ ಬಿಗಡಾಯಿಸಲು ಆರಂಭವಾಯ್ತು. ಏಕೆಂದರೆ, ಮಗುವಿಗೆ ಹುಟ್ಟಿನಿಂದಲೇ ಹೃದಯದ ಸಮಸ್ಯೆ ಇತ್ತು. ಜೊತೆಯಲ್ಲೇ ಗಂಡ ಕೊಟ್ಟಿದ್ದ ಹಳೇ ಏಟು ಅನಿತಾ ಅವರ ದೃಷ್ಟಿಯನ್ನೇ ಕಿತ್ತುಕೊಂಡಿತ್ತು. ಮೊದಲಿಗೆ ಎಡಗಣ್ಣು ಕಳೆದುಕೊಂಡ ಅನಿತಾ ಅವರಿಗೆ ಬಲಗಣ್ಣು ಕೂಡಾ ಮಂದವಾಗತೊಡಗಿತು. ಇಷ್ಟೆಲ್ಲಾ ಆಗಿದ್ದೇ ತಡ, ಪತಿರಾಯ ಹೆಂಡತಿಗೆ ಕೈಕೊಟ್ಟು ಪರಾರಿಯಾದ.
ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಪತ್ನಿಯನ್ನು ಚನ್ನಾಗಿ ನೋಡಿಕೊಳ್ತೇನೆ ಎಂದು ಭರವಸೆ ನೀಡಿ ಶಿಕ್ಷೆಯಿಂದ ತಪ್ಪಿಸಿಕೊಂಡ ಪತಿರಾಯ, ಕೆಲವೇ ದಿನಕ್ಕೆ ಹೆಂಡತಿ, ಮಗಳನ್ನು ಮನೆಯಿಂದ ಹೊರಗೆ ಹಾಕಿ ಮತ್ತೊಬ್ಬಳನ್ನು ವಿವಾಹವಾದ.
2012ರ ವೇಳೆಗೆ ಅನಿತಾ ಅವರಿಗೆ ಎರಡೂ ಕಣ್ಣುಗಳೂ ಕಾಣದಾದವು. ಈ ನಡುವೆ, ಗಮನ ಮಹಿಳಾ ಸಮೂಹ ಎಂಬ ಎನ್‌ಜಿಒ ನೆರವಿನಿಂದ ಟೈಲರಿಂಗ್ ಕಲಿತ ಅನಿತಾ, ಬದುಕು ಸಾಗಿಸಲು ಮುಂದಾದರು. ಜೊತೆಗೆ ಮಗಳು ಹಾಗೂ ತಾಯಿಯನ್ನು ಸಾಕಬೇಕಾದ ಅನಿವಾರ್ಯತೆಯೂ ಇತ್ತು. ತಾಯಿಗೆ ಸರ್ಕಾರದಿಂದ ಮಾಸಾಶನ ಸಿಗುತ್ತಿತ್ತಾದ್ರೂ, 600 ರೂ. ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ.
ಹೂ ಕಟ್ಟಿ ಮಾರೋದು, ಟೈಲರಿಂಗ್ ಕೆಲಸ ಹೀಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಆಕೆ ಜೀವ ಸಾಗಿಸುತ್ತಿದ್ದರು. ಆದ್ರೆ, 2020ರಲ್ಲಿ ಎದುರಾದ ಕೋವಿಡ್ ಮಹಾಮಾರಿ, ಅವರನ್ನು ಸಂಪೂರ್ಣ ನೆಲ ಕಚ್ಚಿಸಿತು. ಒಂದೆಡೆ ಕೆಲಸವೂ ಇಲ್ಲ, ಅಮ್ಮನಿಗೆ ಬರಬೇಕಾದ ಪಿಂಚಣಿಯೂ ಕೈಗೆ ಸಿಗುತ್ತಿಲ್ಲ. ಹೀಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು ಸ್ವಯಂ ಸೇವಕರು ಕೊಡುವ ಕಿಟ್‌ಗಾಗಿ ಕೈಚಾಚುವ ಪರಿಸ್ಥಿತಿ ಎದುರಾಗಿತ್ತು.
ಕಣ್ಣೇ ಕಾಣದಿದ್ದರೂ ಕೂಡಾ ದುಡಿಮೆ ಮಾಡಲು ಅನಿತಾ ಅವರು ಸದಾ ಸಿದ್ಧರಾಗಿದ್ದಾರೆ ಎನ್ನುತ್ತಾರೆ, ಗಮನ ಮಹಿಳಾ ಸಮೂಹದ ಮಮತಾ ಯಜಮಾನ್. ಆದ್ರೆ, ಕೊರೊನಾ ಮಹಾಮಾರಿ ಅನಿತಾ ಅವರ ಈ ಛಲಕ್ಕೆ ತಣ್ಣೀರು ಸುರಿದಿದೆ.
ಅನಿತಾ ಅವರಿಗೆ ಕಣ್ಣಿನ ಆಪರೇಷನ್ ಆಗಬೇಕು, ಆದ್ರೆ ಬಡವರಾದ ಕಾರಣ ಅವರಿಗೆ ಅದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ, ವನಿತಾ ಸಹಾಯವಾಣಿಯ ರಾಣಿ ಶೆಟ್ಟಿ.
ಒಂದೆಡೆ ಹೃದಯ ಸಮಸ್ಯೆ ಇರುವ ಮಗಳ ಚಿಕಿತ್ಸೆ, ಆಕೆಯ ಶಿಕ್ಷಣ, ಮತ್ತೊಂದೆಡೆ ವೃದ್ಧ ತಾಯಿ.. ಇವೆರಡರ ನಡುವೆ, ಕಣ್ಣಿಲ್ಲದ ಪಡುತ್ತಿರುವ ಕಷ್ಟ ನಿಜಕ್ಕೂ ಕರುಣಾಜನಕ. ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದ ಇಂಥಾ ಸಾವಿರಾರು ಮಹಿಳೆಯರು ಸಮಾಜದಲ್ಲಿದ್ದಾರೆ. ಇಂಥವರಿಗಾಗಿ ಐಪಿಎಸ್ ಕಮಲ್ ಪಂಥ್ ಅವರು ಕೌಶಲ್ಯಾಭಿವೃದ್ಧಿ ಶಿಬಿರಗಳನ್ನು ಏರ್ಪಡಿಸಿದ್ದರು. ಒಟ್ಟಿನಲ್ಲಿ ಶೋಷಿತ ಮಹಿಳೆಯರು ಅನ್ನದ ಮಾರ್ಗ ಕಂಡುಕೊಳ್ಳಬೇಕು, ಸ್ವಾವಲಂಬಿಗಳಾಗಬೇಕು ಅನ್ನೋದಷ್ಟೇ ಎಲ್ಲರ ಆಶಯ.