ಕಳಪೆ ಅಡಿಪಾಯ ಕಟ್ಟಡ ಬಿರುಕಿಗೆ ಕಾರಣ; ಬೆಂಗಳೂರಿನಲ್ಲಿ ಪೊಲೀಸ್‌ ವಸತಿ ಗೃಹ ಕುಸಿದು ಬೀಳುವ ಆತಂಕ!

ಮಳೆ ಬಿದ್ದಂತೆಲ್ಲ ಕಟ್ಟಡದ ಬಿರುಕು ಹಿಗ್ಗುತ್ತಾ ಹೋಗುತ್ತಿದೆ. ಬಿರುಕು ಬಿಟ್ಟಿರುವ ಜಾಗದಲ್ಲಿ ಮಳೆ ನೀರು ಸೋರುತ್ತಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಟ್ಟಡದಲ್ಲಿ ಬಿಟ್ಟಿರುವ ಬಿರುಕನ್ನು ತೇಪೆ ಹಾಕಿ ಮುಚ್ಚುವ ಬಗ್ಗೆ ಚಿಂತಿಸಲಾಗುತ್ತಿದೆ. ತೇಪೆ ಹಾಕಿದರೆ ಈ ಕಟ್ಟಡದ ಜತೆಗೆ ಅಕ್ಕಪಕ್ಕವಿರುವ ಕಟ್ಟಡಗಳಿಗೂ ಅಪಾಯ ತಪ್ಪಿದ್ದಲ್ಲ.

ಕಳಪೆ ಅಡಿಪಾಯ ಕಟ್ಟಡ ಬಿರುಕಿಗೆ ಕಾರಣ; ಬೆಂಗಳೂರಿನಲ್ಲಿ ಪೊಲೀಸ್‌ ವಸತಿ ಗೃಹ ಕುಸಿದು ಬೀಳುವ ಆತಂಕ!
Linkup
ರವಿಕುಮಾರ ಬೆಟ್ಟದಪುರ ಬೆಂಗಳೂರು: ಬಿನ್ನಿಮಿಲ್‌ ವೃತ್ತದ ಬಳಿ ನಿರ್ಮಿಸಿರುವ ಪೊಲೀಸ್‌ ವಸತಿ ಗೃಹದ 'ಬಿ' ಬ್ಲಾಕ್‌ನ ಎಂಟು ಅಂತಸ್ತಿನ ಕಟ್ಟಡ ಬಿರುಕು ಬಿಡಲು ಕಳಪೆ ಗುಣಮಟ್ಟದ ಅಡಿಪಾಯ ನಿರ್ಮಾಣವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಕ ಸ್ಥಳ ಪರಿಶೀಲನೆ ನಡೆಸಿದ ವೇಳೆ ಬಿ ಬ್ಲಾಕ್‌ನ 32 ಮನೆ ಇರುವ ಒಂದು ಕಟ್ಟಡ ಇಬ್ಭಾಗವಾಗಿರುವುದು ಕಂಡು ಬಂದಿದೆ. ಕಟ್ಟಡದ ಎಂಟು ಅಂತಸ್ತಿನಿಂದಲೂ ಸುಮಾರು ಆರು ಇಂಚಿಗೂ ಹೆಚ್ಚು ಬಾಯಿ ತೆರೆದುಕೊಂಡಿದೆ. ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡದ ಪ್ರತಿ ಮೇಲಿನ ಮಹಡಿಗಳು ಬಿರುಕು ಬಿಟ್ಟ ಪರಿಣಾಮ ಕಟ್ಟಡ ಎಡ ಭಾಗಕ್ಕೆ ಎರಡು ಅಡಿ ವಾಲಿದೆ. ನಿರ್ಮಿಸಿರುವ ಜಾಗ ಈ ಹಿಂದೆ ಕುಂಟೆಯಂತಿತ್ತು. ಸುತ್ತಮುತ್ತ ಪ್ರದೇಶಗಳಿಂದ ಇಲ್ಲಿಗೆ ಕೊಳಚೆ ಸೇರುತ್ತಿತ್ತು. ಅಕ್ಕಪಕ್ಕದ ಮಾರುಕಟ್ಟೆಗಳಿಂದಲೂ ತ್ಯಾಜ್ಯ ತಂದು ಸುರಿಯಲಾಗುತ್ತಿತ್ತು. ತ್ಯಾಜ್ಯದಿಂದ ಅರ್ಧ ಕುಂಟೆ ಮುಚ್ಚಿ ಹೋಗಿತ್ತು. ಇದಕ್ಕೆ ಕಲ್ಲುಹಾಕಿ ಭದ್ರ ಮಾಡದೇ ಕೇವಲ ಇದರ ಮೇಲೆ ಮಣ್ಣು ಸುರಿದು ಸಮತಟ್ಟು ಮಾಡಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ. ಹಾಗಾಗಿ, ಬುನಾದಿ ಹಾಕಿರುವ ನೆಲ ಗಟ್ಟಿ ಇಲ್ಲದ ಕಾರಣ ಪಾಯವೇ ಬಿರುಕು ಬಿಟ್ಟಿದೆ. ಇದರಿಂದ ಕಟ್ಟಡ ಇಬ್ಭಾಗವಾಗಿದೆ. ಮುಂದಿನ ದಿನಗಳಲ್ಲಿಇಡೀ ಕಟ್ಟಡವೇ ಕುಸಿಯುವ ಸಾಧ್ಯತೆಗಳಿವೆ ಎಂಬುದು ಸ್ಥಳೀಯರು ತಿಳಿಸಿದ್ದಾರೆ. ಮಳೆ ನೀರು ಸೋರಿಕೆ ಮಳೆ ಬಿದ್ದಂತೆಲ್ಲ ಕಟ್ಟಡದ ಬಿರುಕು ಹಿಗ್ಗುತ್ತಾ ಹೋಗುತ್ತಿದೆ. ಬಿರುಕು ಬಿಟ್ಟಿರುವ ಜಾಗದಲ್ಲಿ ಮಳೆ ನೀರು ಸೋರುತ್ತಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಅವರು ಎಚ್ಚೆತ್ತುಕೊಂಡಿದ್ದಾರೆ. ಆದರೆ, ಈ ಕಟ್ಟಡದಲ್ಲಿ ಬಿಟ್ಟಿರುವ ಬಿರುಕನ್ನು ತೇಪೆ ಹಾಕಿ ಮುಚ್ಚುವ ಬಗ್ಗೆ ಚಿಂತಿಸಲಾಗುತ್ತಿದೆ. ತೇಪೆ ಹಾಕಿದರೆ ಈ ಕಟ್ಟಡದ ಜತೆಗೆ ಅಕ್ಕಪಕ್ಕವಿರುವ ಕಟ್ಟಡಗಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ವಿವರಿಸಿದರು. 2 ವರ್ಷದಿಂದ ಬಿರುಕು ಪೊಲೀಸ್‌ ವಸತಿ ಸಮುಚ್ಚಯ ಕಟ್ಟಡ ಕಾಮಗಾರಿಯನ್ನು 2018ರಲ್ಲಿ ಪೂರ್ಣಗೊಳಿಸಿ, ಕೆಲ ತಿಂಗಳ ಬಳಿಕ ವಾಸಕ್ಕೆ ನೀಡಲಾಗಿತ್ತು. 2019ರಿಂದ ಈ ಕಟ್ಟಡ ಬಿರುಕು ಬಿಡಲು ಪ್ರಾರಂಭವಾಗಿದೆ. ಸ್ವಲ್ಪ ಸ್ವಲ್ಪ ಬಿರುಕು ಬಿಟ್ಟಿರುವುದಕ್ಕೆ ಬೆಂಗಳೂರು ನಗರ ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದ ಎಂಜಿನಿಯರ್‌ಗಳು ಸಿಮೆಂಟ್‌ ತೇಪೆ ಹಾಕಿದ್ದಾರೆ. ಆದರೆ, ಈ ತೇಪೆಗೆ ನಿಲ್ಲದ ಬಿರುಕು, ಹೆಚ್ಚುತ್ತಾ ಹೋಗಿದೆ. ಹೀಗಾಗಿ, ಅದನ್ನು ಅಂಟಿಸಲು ಗಮ್‌ ಹಾಕಿದ್ದಾರೆ. ಅದನ್ನು ಕಿತ್ತುಕೊಂಡು ಕಟ್ಟಡ ಇಬ್ಭಾಗವಾಗಿದೆ. ಇದೀಗ ಕಟ್ಟಡ ಅರ್ಧ ಅಡಿಗೂ ಹೆಚ್ಚು ಬಿರುಕು ಬಿಟ್ಟ ಕಾರಣ ಮರದ ಪ್ಲೈವುಡ್‌ ಹಾಕಿ ಬಿರುಕು ಮುಚ್ಚಲು ಯತ್ನಿಸಿದ್ದಾರೆ. ಆದರೆ, ಬಿರುಕಿನ ಅಂತರ ಹೆಚ್ಚುತ್ತಿದ್ದಂತೆ ಈ ಪ್ಲೈವುಡ್‌ ಕಿತ್ತು ಬಂದಿದೆ. ಇಷ್ಟಾದರೂ ಈ ಕಟ್ಟಡದಲ್ಲಿಯೇ ನಿವಾಸಿಗಳು ವಾಸವಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಗೋಲ್‌ಮಾಲ್‌ ಕಟ್ಟಡ ನಿರ್ಮಾಣ ವೇಳೆ ಕಳಪೆ ಕಾಮಗಾರಿ ನಡೆಸಲಾಗಿದೆ. ಉತ್ತಮ ಗುಣಮಟ್ಟದ ಸಿಮೆಂಟ್‌ ಹಾಗೂ ಭೀಮ್‌ ಹಾಕಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಎರಡೇ ವರ್ಷಕ್ಕೆ ಕಟ್ಟಡ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಹೀಗಾಗಿ ಇದರಲ್ಲಿ ನೂರಾರು ಕೋಟಿ ರೂ. ಗೋಲ್‌ಮಾಲ್‌ ಮಾಡಿರುವ ಸಂದೇಹವಿದೆ ಎಂದು ಹೆಸರು ಹೇಳಲಿಚ್ಛಿಸದ ನಿವಾಸಿಯೊಬ್ಬರು ದೂರಿದರು. ಮೂರು ಬ್ಲಾಕ್‌ 92 ಮನೆಗಳು ಬಿನ್ನಿಮಿಲ್‌ ಪೊಲೀಸ್‌ ಸಮುಚ್ಚಯದಲ್ಲಿ'ಎ,ಬಿ,ಸಿ' ಎಂಬ ಮೂರು ಬ್ಲಾಕ್‌ಗಳಿವೆ. ಪ್ರತಿ ಬ್ಲಾಕ್‌ನಲ್ಲಿ 64 ಮನೆಗಳಿವೆ. ಮೂರು ಬ್ಲಾಕ್‌ನಿಂದ 192 ಮನೆಗಳಿವೆ. ಇದರಲ್ಲಿ ಬಿ ಬ್ಲಾಕ್‌ ಕಟ್ಟಡದ ಒಂದು ಭಾಗ ಬಿರುಕು ಬಿಟ್ಟಿದೆ. ಹೀಗಾಗಿ, ಬಿರುಕು ಬಿಟ್ಟಿರುವ ಕಟ್ಟಡದಲ್ಲಿರುವ 32 ಮನೆಗಳಲ್ಲಿರುವ ಕುಟುಂಬಗಳನ್ನು ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ನಿರ್ಮಿಸಿರುವ ಪೊಲೀಸ್‌ ಸಮುಚ್ಚಯಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಕೆಲವರು ಭಾನುವಾರವೇ ಸ್ಥಳಾಂತರವಾಗಿದ್ದಾರೆ. ಇನ್ನು ಕೆಲವರು ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ. ಹಲವು ಸಮಸ್ಯೆ ಬಿನ್ನಿಮಿಲ್‌ ವೃತ್ತದ ಬಳಿ ನಿರ್ಮಿಸಿರುವ ಪೊಲೀಸ್‌ ವಸತಿ ಗೃಹದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಕೆಲ ದಿನಗಳ ಹಿಂದಷ್ಟೇ ಕುಡಿಯುವ ನೀರು ಕಲ್ಪಿಸಿದರು. ಕೆಲವು ಕಡೆಗಳಲ್ಲಿ ಶೌಚಾಲಯದ ಪೈಪ್‌ಗಳು ಒಡೆದು ನೀರು ಸೋರುತ್ತಿದೆ. ಇದೇ ರೀತಿ ಇಲ್ಲಿ ನಾನಾ ಸಮಸ್ಯೆಗಳಿವೆ. ಈ ಬಗ್ಗೆ ನಗರ ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘದ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಅಳಲು. ತಜ್ಞರ ತಂಡದಿಂದ ಅಧ್ಯಯನ ಕಟ್ಟಡ ವಾಸಕ್ಕೆ ಯೋಗ್ಯವಾಗಿದೆಯೇ ಎಂಬ ಕುರಿತು ತಜ್ಞರ ತಂಡ ಅಧ್ಯಯನ ಮಾಡಿ ವರದಿ ನೀಡಲಿದೆ. ವರದಿಯಲ್ಲಿ ವಾಸಕ್ಕೆ ಯೋಗ್ಯವಿಲ್ಲ ಎಂದು ಕಂಡು ಬಂದರೆ ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಯಾವುದೇ ಅಪಾಯ ಇಲ್ಲ ಎಂದು ತಜ್ಞರು ತಿಳಿಸಿದರೆ ಬಿರುಕು ಬಿಟ್ಟಿರುವ ಜಾಗದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಎಂಜಿನಿಯರ್‌ಗಳಿಂದ ಪರಿಶೀಲನೆ ಕಟ್ಟಡ ವಾಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಎಂಜಿನಿಯರ್‌ಗಳು ಕ್ವಾರ್ಟರ್ಸ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡ ವಾಲಿದರೂ ಕುಸಿಯುವ ಹಂತಕ್ಕೆ ತಲುಪಿಲ್ಲ. ಹೀಗಾಗಿ, ವಾಸ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.