ಬೆಂಗಳೂರಿನಲ್ಲಿ ಪಟಾಕಿ ಸ್ಪೋಟ: 80 ಬಾಕ್ಸ್‌ ಪೈಕಿ 2 ಬಾಕ್ಸ್‌ ಮಾತ್ರ ಬ್ಲಾಸ್ಟ್, ತಪ್ಪಿದ ದೊಡ್ಡ ಅನಾಹುತ!

​ಪಟಾಕಿ ಗೋದಾಮಿನಲ್ಲಿ ಗುರುವಾರ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಲಾಗಿತ್ತು ಎಂದು ತಿಳಿದುಬಂದಿದೆ. 80 ಬಾಕ್ಸ್‌ ಪೈಕಿ 2 ಬಾಕ್ಸ್‌ ಮಾತ್ರ ಬ್ಲಾಸ್ಟ್ ಆಗಿದ್ದು ಎಲ್ಲವೂ ಸ್ಪೋಟಗೊಂಡಿದ್ದರೆ ತೀವ್ರ ತರಹದ ಸಮಸ್ಯೆ ಆಗುತ್ತಿತ್ತು ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ಪಟಾಕಿ ಸ್ಪೋಟ: 80 ಬಾಕ್ಸ್‌ ಪೈಕಿ 2 ಬಾಕ್ಸ್‌ ಮಾತ್ರ ಬ್ಲಾಸ್ಟ್, ತಪ್ಪಿದ ದೊಡ್ಡ ಅನಾಹುತ!
Linkup
ಬೆಂಗಳೂರು: ಜನವಸತಿ ಹಾಗೂ ವಾಣಿಜ್ಯ ಪ್ರದೇಶಗಳಿರುವ ಕಡೆ ಅಕ್ರಮವಾಗಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸುತ್ತಿದ್ದ ಮಾಲೀಕ ಗಣೇಶ್‌ ಬಾಬು ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಇದೇ ಪ್ರದೇಶದಲ್ಲಿ ಎರಡು ಗೋದಾಮುಗಳನ್ನು ಹೊಂದಿದ್ದು, ಎರಡನ್ನೂ ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಗೋದಾಮಿನಲ್ಲಿಇದ್ದ 80 ಪಟಾಕಿ ಬಾಕ್ಸ್‌ಗಳಲ್ಲಿ ಎರಡು ಬಾಕ್ಸ್‌ಗಳು ಮಾತ್ರ ಸ್ಫೋಟಿಸಿವೆ. ಉಳಿದ 78 ಬಾಕ್ಸ್‌ಗಳು ಸ್ಫೋಟಿಸಿದ್ದರೆ ಭಾರಿ ಪ್ರಮಾಣದ ಸಾವು ನೋವು ಆಗುವ ಸಂಭವವಿತ್ತು. ಸ್ಫೋಟ ಸಂಭವಿಸಿದ ನ್ಯೂ ತರಗುಪೇಟೆಯ ಸೀತಾಪತಿ ಅಗ್ರಹಾರದ ಶ್ರೀ ಮಾರುತಿ ರೋಡ್‌ಲೈನ್ಸ್‌ ರಸ್ತೆಯಲ್ಲಿ ಮನೆಗಳು ಇವೆ. ಪಕ್ಕದಲ್ಲೇ ರಾಘವೇಂದ್ರ ಮಠವಿದೆ. ಪಕ್ಕದಲ್ಲೇ ನ್ಯೂ ತರಗುಪೇಟೆಯಲ್ಲಿ ದಿನಸಿ ಮಾರಾಟ ಮಾಡುವ ನೂರಾರು ಅಂಗಡಿಗಳು ಇವೆ. ರೋಡ್‌ಲೈನ್ಸ್‌ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ದೇವಸ್ಥಾನ ಹಾಗೂ ಶಾಲೆ ಕೂಡ ಸಮೀಪದಲ್ಲೇ ಇದೆ. ಇಂಥ ಜನನಿಬಿಡ ಪ್ರದೇಶದಲ್ಲಿ ಗಣೇಶ್‌ ಬಾಬು ಎರಡು ಗೋದಾಮುಗಳಲ್ಲಿ ಪಟಾಕಿಗಳನ್ನು ಸಂಗ್ರಹಿಸಿ ಇಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಜನವಸತಿ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಪಟಾಕಿ ಸಂಗ್ರಹಿಸಲು ಹಾಗೂ ಮಾರಾಟ ಮಾಡಲು ಅವಕಾಶವಿಲ್ಲ. ಸುಲಭವಾಗಿ ಬೆಂಕಿ ಬೀಳುವ ಅಪಾಯ ಇರುವ ಕಾರಣಕ್ಕೆ ಮೈದಾನಗಳಲ್ಲಿ ಪಟಾಕಿ ಅಂಗಡಿ ಇಟ್ಟು ಮಾರಾಟ ಮಾಡಲಾಗುತ್ತದೆ. ಆದರೆ ಗಣೇಶ್‌ ಬಾಬು, ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದೆ ಜನನಿಬಿಡ ಪ್ರದೇಶದಲ್ಲೇ ಪಟಾಕಿ ವಹಿವಾಟನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಎಂಬುದು ಅಚ್ಚರಿಯ ಸಂಗತಿ. ಇದಕ್ಕೆ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಾಥ್‌ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗಣೇಶ್‌ ಬಾಬು ಮೊದಲಿಗೆ ಸ್ಫೋಟಗೊಂಡ ಸ್ಥಳದಿಂದ 200 ಮೀಟರ್‌ ದೂರದಲ್ಲಿ ಶ್ರೀ ಪತ್ರಕಾಳಿ ಅಮ್ಮನ ಲಾರಿ ಸವೀರ್‍ಸಸ್‌ ಗೋದಾಮು ತೆರೆದು ಅಲ್ಲಿ ಪಟಾಕಿ ದಾಸ್ತಾನು ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ನಿವೃತ್ತ ಪೊಲೀಸ್‌ ಅಧಿಕಾರಿ ಇಳಂಗೋವನ್‌ ಎಂಬುವರಿಗೆ ಸೇರಿದ ಶೆಡ್‌ ಪಡೆದು ಮತ್ತೊಂದು ಗೋದಾಮು ತೆರೆದು ಪಟಾಕಿ ದಾಸ್ತನು ಮಾಡಿದ್ದ. ಈಗ 2ನೇ ಗೋದಾಮಿನಲ್ಲೇ ಸ್ಫೋಟ ಸಂಭವಿಸಿದೆ. ಖಾಸಗಿ ಬಸ್‌ಗಳಲ್ಲಿ ರವಾನೆ : ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ಹಾಗೂ ಪಟಾಕಿ ತಯಾರಿಸಲು ಬಳಸುವ ಸಿಡಿಮದ್ದುಗಳನ್ನು ತರಿಸಿ ಇಲ್ಲಿ ಸಂಗ್ರಹ ಮಾಡುತ್ತಿದ್ದ. ನಂತರ ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಸರಕು ಸಾಗಣೆ ಲಾರಿಗಳಲ್ಲಿ ಪಾರ್ಸೆಲ್‌ ಕಳುಹಿಸುತ್ತಿದ್ದ. ಪಟಾಕಿಗಳನ್ನು ಖಾಸಗಿ ಟ್ರಾವೆಲ್‌ ಬಸ್‌ಗಳಲ್ಲಿ ಕಳುಹಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ರಾತ್ರಿ ವೇಳೆ ಕಾರ್ಯಾಚರಣೆ: ಪಟಾಕಿ ದಾಸ್ತಾನು ಮಾಡುತ್ತಿದ್ದ ವಿಷಯ ಅಕ್ಕಪಕ್ಕದ ನಿವಾಸಿಗಳಿಗೂ ತಿಳಿದಿರಲಿಲ್ಲ. ಶಿವಕಾಶಿಯಿಂದ ಪಟಾಕಿ ತುಂಬಿಕೊಂಡು ಬರುತ್ತಿದ್ದ ಲಾರಿಗಳು ಮಧ್ಯರಾತ್ರಿಯಲ್ಲಿ ಅನ್‌ಲೋಡ್‌ ಮಾಡುತ್ತಿದ್ದವು. ರಾತ್ರಿ 10ರ ಬಳಿಕ ಕಾರ್ಯ ಆರಂಭಿಸಿ ಬೆಳಗ್ಗೆ 4 ಗಂಟೆಯ ತನಕ ಕೆಲಸ ಮುಗಿಸುತ್ತಿದ್ದರು. ಮಾಲೀಕ ಗಣೇಶ್‌ ಬಾಬುವನ್ನು ಹಗಲಿನ ವೇಳೆ ನೋಡಿರುವುದೇ ಕಡಿಮೆ. ರಾತ್ರಿ ವೇಳೆ ಕೆಲಸ ಮಾಡುವುದು, ಕಾರ್ಮಿಕರು ಗಲಾಟೆ ಮಾಡುವುದಕ್ಕೆ ಸ್ಥಳೀಯ ನಿವಾಸಿಗಳು ಇತ್ತೀಚೆಗೆ ಆಕ್ಷೇಪ ಕೂಡ ಮಾಡಿದ್ದರು. ಹಗಲಿನಲ್ಲಿ ಈ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತದೆ. ಹೀಗಾಗಿ ರಾತ್ರಿ ವೇಳೆ ಲಾರಿ ಬಂದು ಸರಕು ಅನ್‌ಲೋಡ್‌ ಮಾಡಿ ಹೋಗುತ್ತದೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದರು. ನಮಗೆ ಇಲ್ಲಿ ಪಟಾಕಿ ಇಡುತ್ತಿದ್ದರು ಎಂಬ ಸಣ್ಣ ಸುಳಿವು ನೀಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು 'ವಿಕ'ಗೆ ತಿಳಿಸಿದರು. ಗೋದಾಮಿನಲ್ಲಿಇಟ್ಟಿರುವ ಪಟಾಕಿಗಳು ಸಿಡಿದಿದ್ದರೆ ಹೆಚ್ಚಿನ ಸಾವು, ನೋವು ಸಂಭವಿಸುತ್ತಿತ್ತು. ಅದರಲ್ಲಿಯೂ ರಾತ್ರಿ ವೇಳೆ ಈ ದುರಂತ ನಡೆದಿದ್ದರೆ ಹೆಚ್ಚಿನ ಹಾನಿ ಆಗುತ್ತಿತ್ತು ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 20 ದಿನದಲ್ಲಿ ಹಸೆಮಣೆ ಏರಬೇಕಿತ್ತು! ಸ್ಫೋಟದಲ್ಲಿ ಮೃತಪಟ್ಟಿರುವ ತಮಿಳುನಾಡು ಮೂಲದ ಟಾಟ ಏಸ್‌ ಚಾಲಕ ಮನೋಹರ್‌ ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದು ಗಣೇಶ್‌ ಬಾಬು ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ಪಟಾಕಿ ಬಾಕ್ಸ್‌ಗಳನ್ನು ಗೋದಾಮಿನಿಂದ ತನ್ನ ಟಾಟಾ ಏಸ್‌ ಲಗೇಜ್‌ ಆಟೊದಲ್ಲಿ ನಗರದ ನಾನಾ ಭಾಗಕ್ಕೆ ಸಾಗಿಸುವ ಕೆಲಸ ಮಾಡುತ್ತಿದ್ದ. ನಗರದಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದ ಈತನಿಗೆ ಮದುವೆ ನಿಶ್ಚಯವಾಗಿತ್ತು. ಇನ್ನು 20 ದಿನಗಳಲ್ಲಿ ಆತ ಹಸೆಮಣೆ ಏರಬೇಕಿತ್ತು. ಅಷ್ಟರೊಳಗೆ ದುರಂತ ಸಂಭವಿಸಿ ಪ್ರಾಣ ಬಿಟ್ಟಿದ್ದಾನೆ. 15 ವರ್ಷಗಳಿಂದ ಪಂಕ್ಚರ್‌ ಶಾಪ್‌ ನಡೆಸುತ್ತಿದ್ದರು. 35 ವರ್ಷದ ಈ ವ್ಯಕ್ತಿ 15 ವರ್ಷಗಳಿಂದಲೂ ಪಂಕ್ಚರ್‌ ಶಾಪ್‌ ಇಟ್ಟುಕೊಂಡಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗು, ಪತ್ನಿ ಇದ್ದಾರೆ. ಈ ಕುಟುಂಬಕ್ಕೆ ಅಸ್ಲಾಂ ಪಾಷ ಅವರೇ ಆಧಾರ ಸ್ತಂಭವಾಗಿದ್ದರು. ಈಗ ದುಡಿಯುವ ಮನೆ ಸದಸ್ಯನನ್ನು ಕಳೆದುಕೊಂಡ ಕುಟುಂಬದ ಸದಸ್ಯರ ಗೋಳಾಟ ಮನಕಲಕುತ್ತಿತ್ತು. ಮುಖಕ್ಕೆ ಗಾಯ ನಿವೃತ್ತ ಪೊಲೀಸ್‌ ಅಧಿಕಾರಿ ಪುತ್ರ ಮಂಜುನಾಥ್‌ ಅವರ ಮುಖಕ್ಕೆ ತೀವ್ರ ಗಾಯಗಳಾಗಿವೆ. ಗೋದಾಮಿನ ಪಕ್ಕದಲ್ಲೇ ಮಂಜುನಾಥ್‌ ಮನೆ ಇದೆ. ಮೊದಲ ಮಹಡಿಯಲ್ಲಿದ್ದ ಮನೆಯಿಂದ ಕೆಳಗಿಳಿದು ಕಾಂಪೌಂಡ್‌ನೊಳಗಿದ್ದ ಬೈಕ್‌ ತೆಗೆದುಕೊಂಡು ಹೋಗಲು ಬಂದಿದ್ದಾರೆ. ಕೊನೆಯ ಮೆಟ್ಟಿಲು ಇಳಿಯುವ ಸಮಯದಲ್ಲಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ. ಇವರಿಗೆ ಇದೇ ಭಾನುವಾರ ಹುಡುಗಿ ನೋಡಲು ಕುಟುಂಬದವರು ನಿರ್ಧರಿಸಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ. ಅಂಬಸ್ವಾಮಿ : ಇವರು ಟೈರ್‌ ವ್ಯಾಪಾರಿಯಾಗಿದ್ದು, ಪಂಕ್ಚರ್‌ ಶಾಪ್‌ನಲ್ಲಿ ಟೈರ್‌ ಖರೀದಿಸಲು ಬಂದಿದ್ದರು ಎನ್ನಲಾಗಿದೆ. ಇದೇ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ ಇವರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಟೀ ಕುಡಿದು ಗೋದಾಮಿನ ಬಳಿ ನಿಂತಿದ್ದಾಗ ಸ್ಫೋಟ ಇವರು ಕಾಟನ್‌ ಪೇಟೆ ಭಾಗದವರು ಎನ್ನಲಾಗಿದೆ. ಇವರು ಪಕ್ಕದಲ್ಲಿದ್ದ ಮಧು ಟೀ ಸ್ಟಾಲ್‌ನಲ್ಲಿ ಟೀ ಕುಡಿದು ಗೋದಾಮಿನಿಂದ ಸ್ವಲ್ಪ ದೂರದಲ್ಲಿ ನಿಂತು ಮಾತಾಡುತ್ತಿದ್ದರು. ಸ್ಫೋಟದಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಠಡಿಯೊಳಗೆ ಸಿಲುಕಿದ್ದ ವೃದ್ಧೆಗೋದಾಮಿಗೆ ಹೊಂದಿಕೊಂಡಿರುವ ಮನೆಯ ಮಹಡಿಯಲ್ಲಿ 70 ವರ್ಷದ ವಿಜಯ ಎಂಬ ಮಹಿಳೆ ವಾಸವಾಗಿದ್ದರು. ಸ್ಫೋಟದ ಪರಿಣಾಮ ಮನೆಯಲ್ಲಿ ಭಯದಿಂದ ಅಳುತ್ತಾ ಕುಳಿತಿದ್ದರು. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಅವರ ಅಳಿಯ ಫಣಿರಾಜ್‌ ಆಗಮಿಸಿ ಅತ್ತೆಯನ್ನು ಸುರಕ್ಷಿತವಾಗಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಸ್ಫೋಟದ ತೀವ್ರತೆಗೆ ಇವರ ಮನೆಯ ಕಿಟಕಿ ಗಾಜುಗಳು, ಕನ್ನಡಿ ಒಡೆದಿವೆ. ಕೊಠಡಿಯೊಂದರ ಬೀಗ ಛಿದ್ರವಾಗಿ ಕಬ್ಬಿಣದ ಚಿಲಕ ಹಾಗೂ ಬಾಗಿಲು ಮುರಿದು ಹೋಗಿದೆ. ಬಾಲ್‌ನಂತೆ ತೂರಿ ಬಂದ ಟೀ ಸ್ಟಾಲ್‌ ಮಾಲೀಕ : ಗೋದಾಮಿಗೆ ಹೊಂದಿಕೊಂಡಂತೆ ಇರುವ ಟೀ ಸ್ಟಾಲ್‌ ಮಾಲೀಕ ಮಣಿ ಎಂಬುವರು ಸ್ಫೋಟದ ತೀವ್ರತೆಗೆ ಸ್ಟಾಲ್‌ನಿಂದ ಬಾಲ್‌ನಂತೆ ತೂರಿ ಹೊರಬಿದ್ದಿದ್ದಾರೆ. ಟೀ ಸ್ಟಾಲ್‌ನಲ್ಲಿರುವ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಣಿ ಅವರಿಗೆ ಸಣ್ಣಪುಟ ಗಾಯಗಳಾಗಿವೆ. ಇನ್ನು ರಾಘವೇಂದ್ರ ಸ್ವಾಮಿ ಮಠದ ಕಿಟಕಿ ಗಾಜುಗಳು ಒಡೆದಿವೆ. ಗೋದಾಮಿನ ಅಕ್ಕ ಪಕ್ಕವಿರುವ ಸುಮಾರು 10 ಮನೆಗಳ ಕಿಟಕಿ ಗಾಜು ಗೋಡೆಗಳಿಗೆ ಹಾನಿಯಾಗಿದೆ. ಅನುಮತಿ ಪಡೆದಿರಲಿಲ್ಲ: ಪಟಾಕಿ ಗೋದಾಮಿಗೆ ಮಾಲೀಕರು ಬಿಬಿಎಂಪಿಯಿಂದ ಅನುಮತಿ ಪಡೆದಿರಲಿಲ್ಲ. ಇಂಥ ಪ್ರದೇಶದಲ್ಲಿ ಪಟಾಕಿ ದಾಸ್ತಾನು ಮಾಡಲು ಅವಕಾಶವೇ ಇಲ್ಲ. ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. - ಮನೋರಂಜನ್‌ ಹೆಗ್ಡೆ , ಆರೋಗ್ಯಾಧಿಕಾರಿ, ಬಿಬಿಎಂಪಿ ಪಶ್ಚಿಮ ವಲಯ ಏನಿದು ಪ್ರಕರಣ? ಪಟಾಕಿ ಗೋದಾಮಿನಲ್ಲಿ ಗುರುವಾರ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿ ವಿ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನ್ಯೂ ತರಗುಪೇಟೆ ಸಮೀಪದ ಸೀತಾಪತಿ ಅಗ್ರಹಾರದಲ್ಲಿಈ ಘಟನೆ ನಡೆದಿತ್ತು.