ಕಳೆದ 4 ದಶಕಗಳಲ್ಲಿಯೇ ಅತ್ಯಂತ ಕರಾಳ ಆರ್ಥಿಕ ಸ್ಥಿತಿ: ಜಿಡಿಪಿ ಕುಸಿತದ ಬಗ್ಗೆ ಚಿದಂಬರಂ ಟೀಕೆ

ದೇಶದ ಜಿಡಿಪಿ ಕುಸಿತದ ಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಪಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿಯೇ 2020/21ನೇ ಹಣಕಾಸು ವರ್ಷ ಅತ್ಯಂತ ಕರಾಳ ವರ್ಷವಾಗಿದೆ ಎಂದು ಟೀಕಿಸಿದ್ದಾರೆ.

ಕಳೆದ 4 ದಶಕಗಳಲ್ಲಿಯೇ ಅತ್ಯಂತ ಕರಾಳ ಆರ್ಥಿಕ ಸ್ಥಿತಿ: ಜಿಡಿಪಿ ಕುಸಿತದ ಬಗ್ಗೆ ಚಿದಂಬರಂ ಟೀಕೆ
Linkup
ಹೊಸದಿಲ್ಲಿ: ಭಾರತದ ಕಳೆದ ನಾಲ್ಕು ದಶಕಗಳ ಇತಿಹಾಸದಲ್ಲಿಯೇ 2020-21ನೇ ಅತ್ಯಂತ ಕರಾಳ ವರ್ಷವಾಗಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ದೇಶವು ನಕಾರಾತ್ಮಕ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಕಳೆದ ಎರಡು ವರ್ಷದ ಹಿಂದಿನಕ್ಕಿಂತಲೂ ಹೆಚ್ಚಿನ ಜನರು ಬಡವರಾಗಿದ್ದಾರೆ ಎಂದು ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. '2020/21 ನಾಲ್ಕು ದಶಕಗಳಲ್ಲಿಯೇ ಆರ್ಥಿಕತೆಯ ಕರಾಳ ವರ್ಷವಾಗಿದೆ. ನಾಲ್ಕು ತ್ರೈಮಾಸಿಕಗಳಲ್ಲಿನ ಸಾಧನೆಯೇ ಕಥೆ ಹೇಳುತ್ತವೆ... ಮೊದಲ ಎರಡು ಆರ್ಥಿಕ ಹಿಂಜರಿತಕ್ಕೆ (ಶೇ -24.4 ಮತ್ತು ಶೇ -7.4) ಸಾಕ್ಷಿಯಾಗಿದ್ದವು. ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಗಳಲ್ಲಿಯೂ ಯಾವುದೇ ಚೇತರಿಕೆ ಕಾಣಲಿಲ್ಲ' ಎಂದು ಚಿದಂಬರಂ ಹೇಳಿದ್ದಾರೆ. 'ಮೂರು ಹಾಗೂ ನಾಲ್ಕನೇ ತ್ರೈಮಾಸಿಕ ಅವಧಿಗಳಲ್ಲಿನ ಶೇ 0.5 ಮತ್ತು ಶೇ 1.6 ಸಕಾರಾತ್ಮಕ ಬೆಳವಣಿಗೆಯನ್ನು ಕಳೆದ ವರ್ಷದ ಇದೇ ಅವಧಿಯಲ್ಲಿನ ಅತ್ಯಂತ ಕಡಿಮೆ ಮಟ್ಟದ ಶೇ 3.3 ಮತ್ತು ಶೇ 3.0ಯ ನೆಲೆಯಲ್ಲಿ ನೋಡಬೇಕಾಗುತ್ತದೆ' ಎಂದಿದ್ದಾರೆ. 'ಕಳೆದ ವರ್ಷ ಸಾಂಕ್ರಾಮಿಕದ ಮೊದಲ ಅಲೆ ಆರಂಭವಾದಾಗ ಹಣಕಾಸು ಸಚಿವೆ ಹಾಗೂ ಅವರ ಮುಖ್ಯ ಆರ್ಥಿಕ ಸಲಹೆಗಾರ (ಕೆ. ಸುಬ್ರಮಣಿಯನ್) ಚೇತರಿಕೆಯ ಕಥೆಯನ್ನು ಹೆಣೆಯತೊಡಗಿದ್ದರು. ಯಾರಿಗೂ ಕಾಣಿಸದಿದ್ದರೂ ಅವರಿಗೆ ಮಾತ್ರ 'ಹಸಿರು ಬಾಣ' (ಚೇತರಿಕೆಯ ಗ್ರಾಫ್) ಕಾಣಿಸಿತ್ತು. 'ವಿ' ಆಕಾರದ ಚೇತರಿಕೆಯ ಬಗ್ಗೆ ಅವರು ಭವಿಷ್ಯ ನುಡಿದಿದ್ದರು' ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ. 'ಅದು ಸುಳ್ಳು ಕಥೆ. ಇದಕ್ಕೆ ನಮ್ಮ ಪ್ರಬಲ ಆಕ್ಷೇಪಣೆಗಳನ್ನು ಸಲ್ಲಿಸಿದ್ದೆವು. ಜತೆಗೆ, ಚೇತರಿಕೆಯ ಯಾವ ಸಂಕೇತವೂ ಇಲ್ಲ ಎಂಬ ಎಚ್ಚರಿಕೆ ನೀಡಿದ್ದೆವು. ಸರ್ಕಾರದ ವೆಚ್ಚ ಹೆಚ್ಚಳ, ಬಡವರಿಗೆ ನೇರ ನಗದು ವರ್ಗಾವಣೆ ಮತ್ತು ಉಚಿತ ಪಡಿತರಗಳ ಮುಕ್ತ ವಿತರಣೆ ಸೇರಿದಂತೆ ಆರ್ಥಿಕತೆಗೆ ಉತ್ತೇಜನದ ಡೋಸ್‌ಗಳನ್ನು ನೀಡಬೇಕಿದೆ ಎಂದು ತಿಳಿಸಿದ್ದೆವು. ಆದರೆ, ನಮ್ಮ ಮನವಿಗಳು ಸರ್ಕಾರದ ಕಿವುಡು ಕಿವಿಗಳಿಗೆ ಕೇಳಿಸಲೇ ಇಲ್ಲ. ಅದರ ಫಲಿತಾಂಶವೇ ನಕಾರಾತ್ಮಕ ಬೆಳವಣಿಗೆ' ಎಂದು ಅವರು ಹೇಳಿದ್ದಾರೆ. 'ಆರ್ಥಿಕತೆಯ ಈ ಸ್ಥಿತಿಗೆ ಸಾಂಕ್ರಾಮಿಕವು ಬಹುದೊಡ್ಡ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅನರ್ಹ ಮತ್ತು ಅದಕ್ಷ ಆರ್ಥಿಕ ನಿರ್ವಹಣೆಯೂ ಕಾರಣವಾಗಿದೆ. 2020/21ರಂದು 2021/22 ನಡೆಯಬಾರದು ಎಂದರೆ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕು. ತನ್ನ ನೀತಿಗಳನ್ನು ಬದಲಿಸಬೇಕು ಮತ್ತು ಅರ್ಥಶಾಸ್ತ್ರಜ್ಞರು ಹಾಗೂ ವಿರೋಧಪಕ್ಷಗಳ ಸಲಹೆಗಳನ್ನು ಆಲಿಸಬೇಕು' ಎಂದು ಸಲಹೆ ನೀಡಿದ್ದಾರೆ.