ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸಬ್‌ಸ್ಕ್ರಿಪ್ಶನ್ ದರಗಳಲ್ಲಿ ಭಾರಿ ಕಡಿತ ಘೋಷಿಸಿದೆ. ಡಿಸ್ನಿ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಹಾಗೂ ಇತರ ಭಾರತೀಯ ವಿಡಿಯೋ ಆನ್ ಡಿಮ್ಯಾಂಡ್ (ಎಸ್‌ವಿಒಡಿ) ಪ್ಲೇಯರ್‌ಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ನೆಟ್‌ಫ್ಲಿಕ್ಸ್ ಈ ನಿರ್ಧಾರಕ್ಕೆ ಬಂದಿದೆ.
ಸಂಸ್ಥೆಯು ಜನಪ್ರಿಯ ಮಾಸಿಕ ಮೊಬೈಲ್ ಪ್ಲ್ಯಾನ್ ದರವನ್ನು 199 ರೂ.ಗಳಿಂದ 149 ರೂ.ಗೆ ಇಳಿಕೆ ಮಾಡಿದೆ. ಇನ್ನು ಮುಂದೆ ಬೇಸಿಕ್ ಪ್ಲ್ಯಾನ್ ದರ ತಿಂಗಳಿಗೆ 499 ರೂ. ಬದಲು 199 ರೂ. ಆಗಿರಲಿದೆ. ಸ್ಟ್ಯಾಂಡರ್ಡ್ ಪ್ಲ್ಯಾನ್ ದರವನ್ನು ತಿಂಗಳಿಗೆ 649 ರೂ.ನಿಂದ 499 ರೂ.ಗೆ ಇಳಿಕೆ ಮಾಡಲಾಗಿದೆ. ಪ್ರೀಮಿಯಂ ಪ್ಲ್ಯಾನ್ ದರವನ್ನು 799 ರೂ.ಗಳಿಂದ 649 ರೂ.ಗೆ ಇಳಿಸಲಾಗಿದೆ.
ಪ್ರತಿಸ್ಪರ್ಧಿಗಳ ದರವನ್ನು ನೋಡುವುದಾದರೆ ಅಮೆಜಾನ್ ಪ್ರೈಮ್‌ನ ಮಾಸಿಕ ಪ್ಲ್ಯಾನ್ ದರ 129 ರೂ. ಇದೆ. ಡಿಸ್ನಿ+ಹಾಟ್‌ಸ್ಟಾರ್ ವಾರ್ಷಿಕ ಪ್ರೀಮಿಯಂ ಸೇವೆಗೆ ಬಳಕೆದಾರರಿಂದ 1,499 ರೂ. ಸಂಗ್ರಹಿಸುತ್ತಿದೆ. ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್‌ಗೆ ವಾರ್ಷಿಕ 499 ರೂ. ದರವಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವಿಐಪಿ ಎಂಬ ಕಡಿಮೆ ಬೆಲೆಯ ಪ್ಲ್ಯಾನ್ ಕೂಡ ಇದೆ.
ಹೊಸ ಪ್ಲ್ಯಾನ್‌ಗಳನ್ನು 'ಹ್ಯಾಪಿ ನ್ಯೂ ಪ್ರೈಸಸ್' ಎಂದು ಕಂಪನಿ ಹೆಸರಿಟ್ಟಿದ್ದು, ಇದೇ ಡಿಸೆಂಬರ್ 14 ರಿಂದ ಜಾರಿಗೆ ಬರಲಿವೆ.
ಕಂಟೆಟ್ ಸ್ಟ್ರಾಟೆಜಿಯ ಅನ್ವಯ ಮತ್ತು ಹೊಸ ಕಂಟೆಂಟ್ ಬಿಡುಗಡೆಗೂ ಮುನ್ನ ದರ ಕಡಿತ ಮಾಡಲಾಗಿದೆ ಎಂದು ನೆಟ್‌ಫ್ಲಿಕ್ ಇಂಡಿಯಾದ ಕಂಟೆಂಟ್ ವಿಭಾಗದ ಉಪಾಧ್ಯಕ್ಷೆ ಮೋನಿಕಾ ಶೇರ್ಗಿಲ್ 'ಎಕನಾಮಿಕ್ ಟೈಮ್ಸ್'ಗೆ ತಿಳಿಸಿದ್ದಾರೆ.
“ಕಳೆದ ಮೂರು ವಾರಗಳಲ್ಲಿ, ನಾವು ದೊಡ್ಡ ಶೀರ್ಷಿಕೆಯ ಸೀರೀಸ್, ಸಿನಿಮಾಗಳನ್ನು ಹೊರತರುತ್ತಿದ್ದೇವೆ. ಮತ್ತು ನೆಟ್‌ಫ್ಲಿಕ್ಸ್ ಕ್ಯಾಲೆಂಡರ್‌ನ ಪ್ರಕಾರ, ನಾವು ಈ ರೀತಿಯ ಹಲವು ಸೀರೀಸ್, ಸಿನಿಮಾಗಳನ್ನು ಹೊಂದಿದ್ದೇವೆ. ಇದು ಹೆಚ್ಚಿನ ಪ್ರೇಕ್ಷಕರಿಗಾಗಿ ಪ್ರೋಗ್ರಾಮ್ ಮಾಡಲಾದ ವಿಷಯವಾಗಿದೆ. ಮತ್ತು ಈಗ ಈ ಕಂಟೆಂಟ್‌ಗಳು ದೊಡ್ಡ ಪ್ರೇಕ್ಷಕರಿಗಾಗಿ ಸಿದ್ಧವಾಗಿದ್ದು, ವಿಶಾಲ ನೆಲೆಗೆ ಕೊಂಡೊಯ್ಯಲು ಸರಿಯಾದ ಸಮಯವಾಗಿದೆ. ಮನರಂಜನೆಯ ಮೂಲಕ ಮೌಲ್ಯವನ್ನು ಸೃಷ್ಟಿಸುವುದು, ಮಾತ್ರವಲ್ಲದೆ ಉತ್ತಮ ಬೆಲೆಯಲ್ಲಿ ಇವುಗಳನ್ನು ನೀಡುವುದು ಸಹ ನಮ್ಮ ಗುರಿಯಾಗಿದೆ," ಎಂದು ಅವರು ತಿಳಿಸಿದ್ದಾರೆ.
ರೆಡ್ ನೋಟಿಸ್, ದಿ ಹಾರ್ಡರ್ ದೆ ಫಾಲ್ ಮತ್ತು ದಿ ಪ್ರಿನ್ಸೆಸ್ ಸ್ವಿಚ್‌ನಂತಹ ಅಂತರಾಷ್ಟ್ರೀಯ ಆಕ್ಷನ್ ಥ್ರಿಲ್ಲರ್‌ಗಳ ಜೊತೆಗೆ, ನೆಟ್‌ಫ್ಲಿಕ್ಸ್ ನವೆಂಬರ್‌ನಲ್ಲಿ ಭಾರತದಿಂದ ಎರಡು ಮೂಲ ಸಿನಿಮಾಗಳನ್ನು ಘೋಷಿಸಿದೆ. ರಾಮ್ ಮಾಧ್ವನಿಯ ಧಮಾಕಾ ಮತ್ತು ಮೀನಾಕ್ಷಿ ಸುಂದರೇಶ್ವರ್ ಇವಾಗಿವೆ. ಇದರ ಜತೆಗೆ ಆರ್. ಮಾಧವನ್ ಮತ್ತು ಸುರ್ವೀನ್ ಚಾವ್ಲಾ ನಟನೆಯ ಡಿಕಪಲ್ಡ್ ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಲಾಭದ ಬದಲು ನೆಟ್‌ಫ್ಲಿಕ್ಸ್ ಬೆಳವಣಿಗೆಗೆ ಒತ್ತು ನೀಡುತ್ತಿದೆಯಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. “ಬೆಳವಣಿಗೆ ಇದ್ದಾಗ ಅಪಾರ ಲಾಭದಾಯಕತೆ ಇದ್ದೇ ಇರುತ್ತದೆ. ಏಕೆಂದರೆ ನಾವು ಯೋಜನೆ ಮಾಡಿರುವ ಮನರಂಜನೆಯು ಹೆಚ್ಚಿನ ಜನರನ್ನು ಸೇವೆಯತ್ತ ಸೆಳೆಯುತ್ತದೆ ಎಂದು ನಮಗೆ ತಿಳಿದಿದೆ,” ಎನ್ನುತ್ತಾರೆ ಶೇರ್ಗಿಲ್.
ಲಾಕ್‌ಡೌನ್ ಮತ್ತು ಅನ್‌ಲಾಕ್ ನಡುವೆಯೂ ನಾವು ಉತ್ತಮ ಕಂಟೆಂಟ್ ರಚಿಸುತ್ತಿದ್ದೆವು. ಈಗ ನಾವು ನಮ್ಮಲ್ಲಿರುವ ಕಂಟೆಂಟ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮುನ್ನುಗ್ಗಲು ನಿರ್ಧರಿಸಿದ್ದು ಬೆಲೆ ಬದಲಾವಣೆಯನ್ನು ತರಲು ಇದು ಸರಿಯಾದ ಸಮಯ ಎಂದು ಅವರು ವಿಶ್ಲೇಷಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಭಾರತೀಯ ಬಳಕೆದಾರರು ವೀಕ್ಷಿಸಿದ ಸಿನಿಮಾ, ಸೀರೀಸ್, ಅವುಗಳ ಭಾಷೆಗಳ ಆಧಾರದ ಮೇಲೆ ಇಲ್ಲಿ ಬಹಳಷ್ಟು ಪ್ರಯೋಗಗಳಿಗೆ ಪ್ರೇಕ್ಷಕರು ಸಿದ್ಧರಾಗಿದ್ದಾರೆ ಎಂಬ ಸುಳಿವು ನಮಗೆ ಸಿಕ್ಕಿತು ಎಂದು ಅವರು ವಿವರಿಸಿದ್ದಾರೆ.
2019ರ ಜುಲೈನಲ್ಲಿ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್ ಮಾಸಿಕ 199 ರೂ.ಗಳ ಮೊಬೈಲ್ ಪ್ಲ್ಯಾನ್‌ನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ ದೊಡ್ಡ ಸಂಖ್ಯೆಯ ಬಳಕೆದಾರರು ಸ್ಟ್ರೀಮಿಂಟ್ ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು.
ಕಂಪನಿ ರಿಜಿಸ್ಟಾರ್‌ಗೆ ನೆಟ್‌ಫ್ಲಿಕ್ ಇಂಡಿಯಾ ಸಲ್ಲಿಸಿರುವ ದಾಖಲೆಗಳ ಪ್ರಕಾರ 2021ನೇ ಆರ್ಥಿಕ ವರ್ಷದಲ್ಲಿ ಕಂಪನಿ ಆದಾಯ 1526.36 ಕೋಟಿ ರೂ.ಗೆ ಏರಿಕೆಯಾಗಿದೆ. ಅದಕ್ಕೂ ಹಿಂದಿನ ವರ್ಷ ಆದಾಯ 923.33 ಕೋಟಿ ರೂ.ಗಳಾಗಿತ್ತು.
ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನೆಟ್‌ಫ್ಲಿಕ್ಸ್ ಸಹ-ಸಂಸ್ಥಾಪಕ, ಅಧ್ಯಕ್ಷ ಮತ್ತು ಸಹ-ಸಿಇಒ ರೀಡ್ ಹೇಸ್ಟಿಂಗ್ಸ್ ಅವರು ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ, ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ಸುಮಾರು 3,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಹೂಡಿಕೆ ಮಾಡಲು ಯೋಜಿಸಿದೆ ಎಂದು ಹೇಳಿದ್ದರು.
ಭಾರತದಲ್ಲಿ ನೆಟ್‌ಫ್ಲಿಕ್ ಒಟ್ಟು 70 ಒರಿಜಿನಲ್‌ಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದ್ದರು ಮತ್ತು ಮುಂದಿನ ದಿನಗಳಲ್ಲಿ ಇನ್ನೂ 90 ಒರಿಜಿನಲ್‌ಗಳನ್ನು ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ದರು.
'ಮೀಡಿಯಾ ಪಾರ್ಟ್‌ನರ್ಸ್ ಏಷಿಯಾ'ದ ಲೆಕ್ಕಾಚಾರಗಳ ಪ್ರಕಾರ 2026ರ ಹೊತ್ತಿಗೆ ವಿಡಿಯೋ ಆನ್ ಡಿಮ್ಯಾಂಡ್ ಚಂದಾದಾರರ ಸಂಖ್ಯೆ 20 ಕೋಟಿಗೆ ಏರಿಕೆಯಾಗಲಿದೆ. ಅಥವಾ ನಾಲ್ಕು ಬ್ರ್ಯಾಡ್‌ಬ್ಯಾಂಡ್ ಚಂದಾದಾರರಲ್ಲಿ ಒಬ್ಬರು ಆನ್‌ಲೈನ್ ಮನರಂಜನೆ ಮತ್ತು ಕ್ರೀಡಾ ಸರಕುಗಳಿಗೆ ಚಂದಾದಾರರಾಗಲಿದ್ದಾರೆ ಎಂದು ಹೇಳಿದೆ.
ಭಾರತದ ಒಟ್ಟಾರೆ ವಿಡಿಯೋ ಆನ್ ಡಿಮ್ಯಾಂಡ್ ಕ್ಷೇತ್ರದ ಆದಾಯದಲ್ಲಿ ಡಿಸ್ನಿ+ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವೀಡಿಯೋ ಮತ್ತು ನೆಟ್‌ಫ್ಲಿಕ್ಸ್ ಒಟ್ಟಾಗಿ ಶೇ. 75ರಷ್ಟು ಪಾಲು ಹೊಂದಿವೆ. ಹೀಗಿದ್ದೂ ಸ್ಥಳೀಯ ಒರಿಜಿನಲ್ ಕಂಟೆಂಟ್‌ಗಳಿಗಾಗಿ ಮೂರೂ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.