ನನ್ನ ಗಂಡ ಒಪ್ಪಿದ್ರೆ ಮಾತ್ರ ನಟಿಸ್ತೀನಿ ಎಂದ ಖ್ಯಾತ ನಟಿ ಕಾಜಲ್ ಅಗರ್ವಾಲ್!

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಕಾಜಲ್ ಅಗರ್ವಾಲ್ ಅವರು ಮದುವೆ ನಂತರವೂ ನಟನೆ ಮುಂದುವರಿಸಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆ ಬಗ್ಗೆ ಕಾಜಲ್ ಹೇಳಿದ್ದೇನು? ಇಲ್ಲಿದೆ ಮಾಹಿತಿ

ನನ್ನ ಗಂಡ ಒಪ್ಪಿದ್ರೆ ಮಾತ್ರ ನಟಿಸ್ತೀನಿ ಎಂದ ಖ್ಯಾತ ನಟಿ ಕಾಜಲ್ ಅಗರ್ವಾಲ್!
Linkup
ಕಾಜಲ್ ಅಗರ್ವಾಲ್ ಅವರು ಕೆಲ ತಿಂಗಳುಗಳ ಹಿಂದೆ ಉದ್ಯಮಿ ಗೌತಮ್ ಎಂಬುವವರ ಜೊತೆ ಮದುವೆಯಾಗಿದ್ದರು. ಕೊರೊನಾ ವೈರಸ್ ಇರುವ ಕಾರಣಕ್ಕೆ ಈ ಮದುವೆಗೆ ಚಿತ್ರತಂಡದವರಾರೂ ಭಾಗಿಯಾಗಿರಲಿಲ್ಲ. ಮದುವೆ ನಂತರ ಕಾಜಲ್ ಅವರು ನಟಿಸುತ್ತಾರಾ? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಕಾಜಲ್ ಉತ್ತರ ನೀಡಿದ್ದಾರೆ. ಪತಿ ಮತ್ತು ಅವರ ಮನೆಯವರ ಸತತ ಪ್ರೋತ್ಸಾಹದಿಂದ ತಮಗೆ ಮದುವೆಯಾದ ನಂತರವೂ ಸಿನಿಮಾದಲ್ಲಿ ಗಮನ ಕೇಂದ್ರೀಕರಿಸಲು ಸುಲಭವಾಗಿದೆ ಎಂದಿರುವ ನಟಿ ಕಾಜಲ್‌ ಅಗರ್ವಾಲ್‌, 'ನಾನು ಎಷ್ಟು ಸಮಯ ನಟನೆಯಲ್ಲಿ ಮುಂದುವರಿಯುತ್ತೇನೋ ಗೊತ್ತಿಲ್ಲ. ಆದರೆ ನನ್ನ ಪತಿ ಗೌತಮ್‌ ನನಗೆ ನಟನೆ ಬಿಟ್ಟು ಬಿಡು ಎಂದು ಹೇಳಿದ ತಕ್ಷಣ ನಾನು ಅದನ್ನು ತೊರೆಯುತ್ತೇನೆ' ಎಂದಿದ್ದಾರೆ. ಆನ್‌ಲೈನ್‌ ಪೋರ್ಟಲ್‌ವೊಂದರ ಸಂದರ್ಶನದಲ್ಲಿಈ ರೀತಿ ಹೇಳಿರುವ ಅವರು, 'ಸದ್ಯಕ್ಕೆ ನನ್ನ ಕೈಯಲ್ಲಿರುವ ಸಿನಿಮಾಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತಿದ್ದೇನೆ. ಲಾಕ್‌ಡೌನ್‌ ಮುಗಿದ ನಂತರ ಅದರ ಶೂಟಿಂಗ್‌ ಮತ್ತೆ ಆರಂಭವಾಗಲಿದೆ' ಎಂದಿದ್ದಾರೆ. ಮದುವೆಯಾದ ನಂತರ ಕಾಜಲ್‌ ಅಗರ್ವಾಲ್‌ ನಟನೆಯನ್ನು ಬಿಟ್ಟು ಬಿಡುತ್ತಾರೆ ಎಂಬ ವದಂತಿ ಆಗಾಗ ಹರಡುತ್ತಲೇ ಇದೆ. ಇದೇ ಮೊದಲ ಬಾರಿಗೆ ಈ ಕುರಿತು ಮಾತನಾಡಿರುವ ಅವರು, ಪತಿ ಹೇಳಿದರೆ ಮಾತ್ರ ಈ ನಿರ್ಧಾರಕ್ಕೆ ಬರುವೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈನ ತಾಜ್ ಹೋಟೆಲ್‌ನಲ್ಲಿ ಕಾಜಲ್ ಹಾಗೂ ಗೌತಮ್‌ ಕಿಚಲು ಕಲ್ಯಾಣ ನೆರವೇರಿತ್ತು. ಕಾಜಲ್ ಕಲ್ಯಾಣದ ಫೋಟೋಗಳು ವೈರಲ್ ಆಗಿದ್ದವು. . ಗೌತಮ್‌ ಕಿಚಲು ಜೊತೆ ಕಾಜಲ್ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತಾದರೂ ಅದಕ್ಕೆ ಕಾಜಲ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತದನಂತರದಲ್ಲಿ ಮದುವೆ ಸುದ್ದಿಯನ್ನು ಹೇಳಿದ್ದರು.