ಕೊರೊನಾದಿಂದ ತಮಗೆ ಬಂದ ಕರಾಳ ಸ್ಥಿತಿ ಬಗ್ಗೆ ಬಾಯ್ಬಿಟ್ಟ ನಟ ಸಾಧು ಕೋಕಿಲ

ಕೊರೊನಾದಿಂದ ತಮಗೆ ಉಂಟಾದ ಕರಾಳ ಸ್ಥಿತಿಯ ಬಗ್ಗೆ ಸಾಧು ಕೋಕಿಲ ಬಾಯ್ಬಿಟ್ಟಿದ್ದಾರೆ. ''ಒಬ್ಬ ಸೆಲೆಬ್ರಿಟಿಯಾಗಿ ಒಂದು ಆಕ್ಸಿಜನ್ ತೆಗೆದುಕೊಳ್ಳಲು ನಾನೇ ಪರದಾಡಿದ್ದೀನಿ. ಇನ್ನು ಬಡವರ ಕಥೆಯೇನು?'' ಎಂದು ಸಾಧು ಕೋಕಿಲ ಪ್ರಶ್ನಿಸಿದ್ದಾರೆ.

ಕೊರೊನಾದಿಂದ ತಮಗೆ ಬಂದ ಕರಾಳ ಸ್ಥಿತಿ ಬಗ್ಗೆ ಬಾಯ್ಬಿಟ್ಟ ನಟ ಸಾಧು ಕೋಕಿಲ
Linkup
ಭಾರತದಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ. ದಿನೇ ದಿನೇ ಹೊಸ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದ್ದು ಕಾಣುತ್ತಿದೆ. ಆಕ್ಸಿಜನ್‌ಗಾಗಿ ಜನ ಪರದಾಡುತ್ತಿದ್ದಾರೆ. ಸ್ಮಶಾನಗಳ ಮುಂದೆ ಮೃತದೇಹಗಳ ರಾಶಿ ಕಂಡುಬರುತ್ತಿದೆ. ಈ ಭೀಕರ ಸ್ಥಿತಿಯನ್ನ ಮಾಧ್ಯಮಗಳು ಪದೇ ಪದೇ ತೋರಿಸುತ್ತಿದ್ದಾರೆ ಅಂತ ಜನ ಮೂಗು ಮುರಿಯಬಹುದು. ಆದರೆ, ಪರಿಸ್ಥಿತಿ ಇರುವುದೇ ಹೀಗೆ ಎಂದು ಕನ್ನಡ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಹೇಳಿದ್ದಾರೆ. ಕೊರೊನಾದಿಂದ ತಮಗೆ ಉಂಟಾದ ಕರಾಳ ಸ್ಥಿತಿಯ ಬಗ್ಗೆ ಸಾಧು ಕೋಕಿಲ ಬಾಯ್ಬಿಟ್ಟಿದ್ದಾರೆ. ''ಒಬ್ಬ ಸೆಲೆಬ್ರಿಟಿಯಾಗಿ ಒಂದು ಆಕ್ಸಿಜನ್ ತೆಗೆದುಕೊಳ್ಳಲು ನಾನೇ ಪರದಾಡಿದ್ದೀನಿ. ಇನ್ನು ಬಡವರ ಕಥೆಯೇನು?'' ಎಂದು ಸಾಧು ಕೋಕಿಲ ಪ್ರಶ್ನಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಹರಿಪ್ರಿಯಾ ಅಭಿನಯದ ಕೆ.ಮಾದೇಶ್ ನಿರ್ದೇಶನದ 'ಲಗಾಮ್' ಚಿತ್ರದ ಮುಹೂರ್ತ ಸಮಾರಂಭ ನಿನ್ನೆ ನಡೆಯಿತು. ಮುಹೂರ್ತ ಸಮಾರಂಭದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಧು ಕೋಕಿಲ ಕೊರೊನಾದ ಭೀಕರತೆ ಬಗ್ಗೆ ವಿವರಿಸಿದರು. ಸಾಧು ಕೋಕಿಲ ಹೇಳಿದ್ದೇನು? ''ಜನ ಎಚ್ಚರವಾಗಿರಬೇಕು ಅಷ್ಟೇ. ಇನ್ನೇನೂ ಇಲ್ಲ. ಹಬ್ಬಗಳನ್ನ ಸ್ಥಗಿತಗೊಳಿಸಿ, ಜನ ತಮ್ಮ ಪಾಡಿಗೆ ತಾವು ಸ್ವಲ್ಪ ದಿನ ಇದ್ದರೆ, ಈ ಪರಿಸ್ಥಿತಿ ಸರಿ ಹೋಗುತ್ತದೆ. ನನ್ನ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈಗ ನೆಗೆಟಿವ್ ಬಂದಿದೆ. ಈಗಲೂ ಅವನಿಗೆ ಉಸಿರಾಟದ ಸಮಸ್ಯೆ ಇದೆ. ನಾನೇ ಸೆಲೆಬ್ರಿಟಿಯಾಗಿ ಇಡೀ ದಿನ ಓಡಾಡಿ ಒಂದೇ ಒಂದು ಆಕ್ಸಿಜನ್ ತೆಗೆದುಕೊಳ್ಳಲು ಒದ್ದಾಡಿದ್ದೇನೆ. ಹೀಗಿರುವಾಗ ಬಡವರ ಗತ್ತಿಯೇನು? ಟಿವಿಯಲ್ಲಿ ಏನೋ ಹೇಳ್ತಾರೆ ಅಂದುಕೊಳ್ಳಬೇಡಿ. ಖಂಡಿತ ಪರಿಸ್ಥಿತಿ ಹಾಗೇ ಇದೆ. ಆ ಪರಿಸ್ಥಿತಿಯವರೆಗೂ ಬಿಟ್ಟುಕೊಂಡಿದ್ದೇವೆ. ದಯವಿಟ್ಟು ಹುಷಾರಾಗಿರಿ'' ಎಂದಿದ್ದಾರೆ ಸಾಧು ಕೋಕಿಲ. ಇನ್ನೂ, ಲಸಿಕೆ ಹಾಕಿಸಿಕೊಳ್ಳುವಂತೆಯೂ ಜನರಲ್ಲಿ ಸಾಧು ಕೋಕಿಲ ಮನವಿ ಮಾಡಿದ್ದಾರೆ. ''ನನಗೆ ಅಲರ್ಜಿ ಇರುವ ಕಾರಣ ಲಸಿಕೆ ಹಾಕಿಸಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತೇನೆ'' ಎಂದು ಸಾಧು ಕೋಕಿಲ ತಿಳಿಸಿದ್ದಾರೆ. ಅಂದ್ಹಾಗೆ, 'ಲಗಾಮ್' ಚಿತ್ರದಲ್ಲಿ ಉಪೇಂದ್ರ ಜೊತೆಗೆ ಸಾಧು ಕೋಕಿಲ ಅಭಿನಯಿಸುತ್ತಿದ್ದಾರೆ. ಜೊತೆಗೆ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.