ಆರ್ಥಿಕ ಬಿಕ್ಕಟ್ಟಿಗೆ ಹೊಸ ಕರೆನ್ಸಿ ನೋಟು ಮುದ್ರಣ ಪರಿಹಾರವಲ್ಲ: ನಿರ್ಮಲಾ ಸೀತಾರಾಮನ್‌

ಕೋವಿಡ್-19 ಸೋಂಕಿನಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೊಸ ಕರೆನ್ಸಿ ನೋಟುಗಳ ಮುದ್ರಣ ಕುರಿತ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಹೊಸ ಕರೆನ್ಸಿ ನೋಟು ಮುದ್ರಣ ಪರಿಹಾರವಲ್ಲ: ನಿರ್ಮಲಾ ಸೀತಾರಾಮನ್‌
Linkup
ನವದೆಹಲಿ: ಕೋವಿಡ್-19 ಸೋಂಕಿನಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೊಸ ಕರೆನ್ಸಿ ನೋಟುಗಳ ಮುದ್ರಣ ಕುರಿತ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ. ಮುದ್ರಣ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು. ಕೋವಿಡ್-19 ನಿಂದ ಉಂಟಾಗಿರುವ ಉದ್ಯೋಗ ನಷ್ಟ ತಪ್ಪಿಸಲು ಹಾಗೂ ಆರ್ಥಿಕ ಚೇತರಿಕೆ ನೀಡಲು ಕರೆನ್ಸಿ ನೋಟುಗಳ ಮುದ್ರಣದ ಆಯ್ಕೆಯನ್ನು ಪರಿಗಣಿಸುವಂತೆ ಹಲವು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಲಹೆ ನೀಡಿದ್ದರು. 2020-21 ರ ಅವಧಿಯಲ್ಲಿ ಭಾರತದ ನೈಜ ಜಿಡಿಪಿ ಶೇ.7.3 ರಷ್ಟು ಕುಸಿತ ಕಂಡಿರುವ ಅಂದಾಜಿದೆ ಎಂದು ಲೋಕಸಭೆಗೆ ವಿತ್ತ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದರು. ಈ ಕುಸಿತ ಸಾಂಕ್ರಾಮಿಕದ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳನ್ನು ಸೂಚಿಸುತ್ತವೆ ಎಂದೂ ನಿರ್ಮಲಾ ಸೀತಾರಾಮ್‌ ಅಭಿಪ್ರಾಯಪಟ್ಟರು. "ಆದರೆ, ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದೆ. ಆತ್ಮ ನಿರ್ಭರ ಭಾರತ ಮಿಷನ್ 2020- 21ರ ಉತ್ತರಾರ್ಧದಲ್ಲಿ ಆರ್ಥಿಕತೆಯನ್ನು ಚೇತರಿಕೆಯ ಹಾದಿಯಲ್ಲಿಟ್ಟಿದೆ." ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸಾಂಕ್ರಾಮಿಕದ ಪರಿಣಾಮವನ್ನು ತಡೆಗಟ್ಟಲು, 2020-21ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪುನರುಜ್ಜೀವನ ನೀಡುವುದಕ್ಕಾಗಿ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸರ್ಕಾರ 29.87 ಲಕ್ಷ ಕೋಟಿ ರೂ. ಮೊತ್ತದ ಸಮಗ್ರ ಪ್ಯಾಕೇಜ್ ಘೋಷಿಸಿತ್ತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.