ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ನಿರಾಶೆ: ಡಿಎ, ಡಿಆರ್ ಮರು ಆರಂಭ ಇಲ್ಲ

ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈ 1ರಿಂದ ಡಿಎ ಮತ್ತು ಡಿಆರ್ ಮರು ಆರಂಭ ಮಾಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಇದರಿಂದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರಗಳನ್ನು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.

ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ನಿರಾಶೆ: ಡಿಎ, ಡಿಆರ್ ಮರು ಆರಂಭ ಇಲ್ಲ
Linkup
ಹೊಸದಿಲ್ಲಿ: ತಡೆಹಿಡಿಯಲಾಗಿದ್ದ (ಡಿಎ) ಹಾಗೂ ತುಟ್ಟಿಭತ್ಯೆ ಪರಿಹಾರಗಳ (ಡಿಆರ್) ಹೆಚ್ಚಳದ ನಿರೀಕ್ಷೆಯಲ್ಲಿದ್ದ ಮತ್ತು ಕೇಂದ್ರ ಸರಕಾರಿ ಪಿಂಚಣಿದಾರರಿಗೆ ಕೇಂದ್ರ ನಿರಾಶೆ ಮೂಡಿಸಿದೆ. ಜುಲೈ 1ರಿಂದ ಡಿಎ ಮತ್ತು ಡಿಆರ್‌ಗಳನ್ನು ಮರಳಿ ಆರಂಭಿಸುತ್ತಿಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಶನಿವಾರ ನಡೆಯಲಿರುವ ಸಭೆಯಲ್ಲಿ ಕೇಂದ್ರ ಸರಕಾರಿ ನೌಕರರು ಹಾಗೂ ಪಿಂಚಣಿದಾರರು ಡಿಎ ಮತ್ತು ಡಿಆರ್‌ನಲ್ಲಿ ಏರಿಕೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು. ಅದರ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರ ಹೆಸರಿನಲ್ಲಿ ಪ್ರಕಟಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೋವಿಡ್ 19 ಕಾರಣದಿಂದ ತಡೆಹಿಡಿಯಲಾಗಿದ್ದ ಡಿಎ ಹಾಗೂ ಡಿಆರ್‌ಗಳನ್ನು ಜುಲೈ 1ರಿಂದ ಮರು ಆರಂಭಿಸಲಾಗುತ್ತದೆ ಎಂಬ ಹೇಳಿಕೆಯೊಂದು ಹರಿದಾಡುತ್ತಿತ್ತು. ಬಾಕಿ ಉಳಿದಿರುವ ಡಿಆರ್ ಮತ್ತು ಡಿಎ ಕಂತುಗಳನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ಈ ಪ್ರಕಟಣೆಯು ಸರಕಾರದ ಅಧಿಕೃತ ಹೇಳಿಕೆಯಲ್ಲ ಮತ್ತು ಇದು ನಕಲಿ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 'ಕೇಂದ್ರ ಸರಕಾರಿ ನೌಕರರ ಡಿಎ ಮತ್ತು ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್‌ಗಳನ್ನು ಜುಲೈ 1ರಿಂದ ಮರು ಆರಂಭಿಸುವ ಕುರಿತಾದ ದಾಖಲೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಕಚೇರಿ ಟಿಪ್ಪಣಿಯು ನಕಲಿ. ಇಂತಹ ಯಾವುದೇ ಒಎಂಅನ್ನು ಭಾರತ ಸರಕಾರ ಹೊರಡಿಸಿಲ್ಲ' ಎಂದು ಅದು ತಿಳಿಸಿದೆ. 2020ರಲ್ಲಿ ಘೋಷಣೆ ಮಾಡಿದ್ದ ಹಣಕಾಸು ಸಚಿವಾಲಯ, 2021ರ ಜುಲೈವರೆಗೂ ಡಿಎ ಮತ್ತು ಡಿಆರ್ ಹೆಚ್ಚಳವನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿತ್ತು. 2020ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಆದೇಶದಲ್ಲಿ, 2021ರ ಜನವರಿಯಿಂದ 2021ರ ಜೂನ್ 30ರವರೆಗೂ ಯಾವುದೇ ಅರಿಯರ್ಸ್ ನೀಡುವುದಿಲ್ಲ ಎಂದು ತಿಳಿಸಲಾಗಿತ್ತು. ನಿವೃತ್ತಿ ಮೇಲಿನ ಪ್ರಯಾಣ ಭತ್ಯೆ (ಟಿಎ) ಸಲ್ಲಿಸುವ ಸಮಯದ ಮಿತಿಯನ್ನು ಪ್ರಯಾಣ ಪೂರ್ಣಗೊಳಿಸಿದ ದಿನಾಂಕದ 60-180 ದಿನಗಳವರೆಗೆ ವಿಸ್ತರಿಸಲಾಗಿತ್ತು. ಆದರೆ ಪ್ರವಾಸ, ವರ್ಗಾವಣೆ ಹಾಗೂ ತರಬೇತಿಗೆ ಸಂಬಂಧಿಸಿದ ಟಿಎ ಸಲ್ಲಿಸುವ ಸಮಯದ ಮಿತಿಯನ್ನು 60 ದಿನಗಳಿಗೆ ಉಳಿಸಿಕೊಳ್ಳಲಾಗಿತ್ತು. 7ನೇ ವೇತನ ಆಯೋಗದ ಅಡಿಯಲ್ಲಿ ಅರಿಯರ್ಸ್ ಹೆಚ್ಚಳದ ಕ್ರಮವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದರ ಜತೆಗೆ ತಡೆಹಿಡಿಯಲಾಗಿದ್ದ ಡಿಎ ಮತ್ತು ಡಿಆರ್‌ಗಳನ್ನು ಮರು ಆರಂಭಿಸುವ ಹಾಗೂ ಬಾಕಿ ಮೊತ್ತವನ್ನು ಕಂತುಗಳಲ್ಲಿ ಪಾವತಿಸುವ ಬಗ್ಗೆಯೂ ನಿರೀಕ್ಷೆ ಮೂಡಿತ್ತು. ಆದರೆ ಈ ನಿರೀಕ್ಷೆಗಳು ಹುಸಿಯಾಗಿವೆ.