'ಕಾಂಗ್ರೆಸ್ಸಿಗೆ ಚುನಾಯಿತ ಅಧ್ಯಕ್ಷರೇ ಇಲ್ಲ' ಎಂದಿದ್ದ ಸಿಬಲ್‌ ಕಾರು ಜಖಂಗೊಳಿಸಿದ ಯುವ ಕಾರ್ಯಕರ್ತರು!

ಪಂಜಾಬ್‌ನಲ್ಲಿ ಬೆಳವಣಿಗೆ ಬಳಿಕ 'ಜಿ-23' ಬಂಡಾಯ ಬಣದ ಕಪಿಲ್‌ ಸಿಬಲ್‌ 'ಕಾಂಗ್ರೆಸ್ಸಿನಲ್ಲಿ ಆಯ್ಕೆಯಾದ ಅಧ್ಯಕ್ಷರೇ ಇಲ್ಲ,' ಎಂದು ಆಕ್ರೋಶ ಹೊರಹಾಕಿದ್ದು, ಯುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆಗೆ ಗುರಿಯಾಗಿದ್ದಾರೆ.

'ಕಾಂಗ್ರೆಸ್ಸಿಗೆ ಚುನಾಯಿತ ಅಧ್ಯಕ್ಷರೇ ಇಲ್ಲ' ಎಂದಿದ್ದ ಸಿಬಲ್‌ ಕಾರು ಜಖಂಗೊಳಿಸಿದ ಯುವ ಕಾರ್ಯಕರ್ತರು!
Linkup
ಹೊಸದಿಲ್ಲಿ: ಪಂಜಾಬ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಬಳಿಕ ಉಲ್ಬಣಿಸಿರುವ ಪಕ್ಷದ ಅರಾಜಕತೆ ಕುರಿತು 'ಜಿ-23' ಬಂಡಾಯ ಬಣದ ಆಕ್ರೋಶ ಹೊರಹಾಕಿದ್ದು, ''ಕಾಂಗ್ರೆಸ್ಸಿನಲ್ಲಿ ಆಯ್ಕೆಯಾದ ಅಧ್ಯಕ್ಷರೇ ಇಲ್ಲ,'' ಎಂದಿದ್ದಾರೆ. ಆ ಮೂಲಕ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಯವರಿಗೆ ಮತ್ತೊಮ್ಮೆ ಪರೋಕ್ಷ ಟಾಂಗ್‌ ನೀಡಿದ್ದಾರೆ. ಈ ಬೆಳವಣಿಗೆ ಬನ್ನಲ್ಲೇ ಕಾರ್ಯಕರ್ತರ ಆಕ್ರೋಶಕ್ಕೆ ಅವರು ಗುರಿಯಾಗಿದ್ದಾರೆ. ಸಿಬಲ್‌ ಹೇಳಿಕೆ ಬೆನ್ನಲ್ಲೇ ಅವರ ಮನೆ ಹೊರಗೆ ಪ್ರತಿಭಟನೆ ಆರಂಭಿಸಿದ ಯುವ ಕಾಂಗ್ರೆಸ್‌ನ ಕಾಲಾಳುಗಳು ಟೊಮೆಟೋ ತೋರಿದ್ದಾರೆ. ಘಟನೆಯಲ್ಲಿ ಸಿಬಲ್‌ ಕಾರು ಜಖಂಗೊಂಡಿದೆ. ಗೆಟ್‌ ವೆಲ್‌ ಸೂನ್ (ಶೀಘ್ರ ಚೇತರಿಸಿಕೊಳ್ಳಿ) ಪ್ಲೇಕಾರ್ಡ್‌ಗಳನ್ನು ಹಿಡಿದಿದ್ದ ಕಾರ್ಯಕರ್ತರು, ಪಕ್ಷ ಬಿಡಿ, ರಾಹುಲ್‌ ಗಾಂಧಿ ಜಿಂದಾಬಾದ್‌ ಘೋಷಣೆಗಳನ್ನೂ ಕೂಗಿದ್ದಾರೆ. ಘಟನೆ ಬಳಿಕ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್‌ ಸಿಬಲ್‌, "ಈ ನಾಟಕದಿಂದ ನಾನು ಗಲಿಬಿಲಿಗೊಳ್ಳುವುದಿಲ್ಲ, ನಾನು ತುಂಬಾ ಜಾಗರೂಕನಾಗಿ ಈ ಮಾತುಗಳನ್ನು ಹೇಳಿದ್ದೇನೆ," ಎಂದು ಖಾರವಾಗಿ ಹೇಳಿದ್ದಾರೆ. ಕಪಿಲ್‌ ಸಿಬಲ್‌ ಹೇಳಿದ್ದೇನು? ''ಕಾಂಗ್ರೆಸ್ಸಿನಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಅಧ್ಯಕ್ಷರೇ ಇಲ್ಲ. ಬಿಕ್ಕಟ್ಟುಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಯಾರು? ಪಕ್ಷದಲ್ಲಿ ಯಾರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ,'' ಎಂದು ಪಕ್ಷದ ಹಿರಿಯ ನಾಯಕರೂ ಆಗಿರುವ ಸಿಬಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಯಾಕೆ ನಾಯಕರು ಪಕ್ಷ ತೊರೆಯುತ್ತಿದ್ದಾರೆ? ನಾವು ಎಲ್ಲಿ ಎಡವಿದ್ದೇವೆ? ಮೊದಲು ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ. ಆತ್ಮ ವಿಮರ್ಶೆ ಜತೆಗೆ ಬದಲಾವಣೆ ತರುವ ಅನಿವಾರ್ಯವಿದೆ. ಇದಕ್ಕಾಗಿ ಮೊದಲು ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ನಡೆಯಬೇಕು. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳಿಗೂ ಇತಿಶ್ರೀ ಹಾಡಬೇಕು,'' ಎಂದು ಒತ್ತಾಯಿಸಿದ್ದಾರೆ. ಸೋನಿಯಾ ಗಾಂಧಿ, ಪಕ್ಷದ ನಾಯಕ ರಾಹುಲ್‌ ಗಾಂಧಿ ಹೆಸರು ಉಲ್ಲೇಖಿಸದೆಯೇ ಕುಟುಕಿದ ಸಿಬಲ್‌, ''ಯಾರು ಪಕ್ಷದ ನಾಯಕರಿಗೆ ಆಪ್ತರಾಗಿದ್ದಾರೋ, ಅವರೇ ಪಕ್ಷ ತೊರೆಯುತ್ತಿದ್ದಾರೆ. ಯಾರು ಆಪ್ತರಾಗಿ ಇಲ್ಲವೋ ಅವರೇ ಉಳಿಯುತ್ತಿದ್ದಾರೆ. ಹಾಗಾಗಿ ಪಕ್ಷದಲ್ಲಿಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ,'' ಎಂದು ಹೇಳಿದ್ದಾರೆ. ಕಾಂಗ್ರೆಸ್‌ ನಾಯಕತ್ವ ಕುರಿತು ಬೇಸರಗೊಂಡಿರುವ ನಾಯಕರೆಲ್ಲರೂ ಸೇರಿ 'ಗ್ರೂಪ್‌-23' ಎಂಬ ತಂಡ ಕಟ್ಟಿದ್ದು, ಈಗಾಗಲೇ ನಾಯಕತ್ವ ಕುರಿತು ಇದರ ಹಲವು ನಾಯಕರು ಆಕ್ರೋಶ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಪಂಜಾಬ್‌ನಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಆಂತರಿಕ ಭಿನ್ನಮತವೇ ಶಾಪವಾಗುತ್ತಿರುವ ಕಾರಣ ಕಪಿಲ್‌ ಸಿಬಲ್‌ ಆಕ್ರೋಶ ಹೊರಹಾಕಿದ್ದಾರೆ. ಜಿ ಹುಜೂರ್‌ ಸಂಸ್ಕೃತಿ ನಮ್ಮದಲ್ಲ ನಾಯಕರು ಹೇಳಿದ್ದೆಲ್ಲ ಸರಿ ಎನ್ನುವ, ಅವರ ಮಾತಿಗೆ ಮರು ಮಾತಾಡದೆ ಮಗುಮ್ಮಾಗಿ ಇರುವ 'ಜಿ ಹುಜೂರ್‌' ಸಂಸ್ಕೃತಿ ಜಿ-23 ನಾಯಕರದ್ದಲ್ಲ ಎಂದು ಸಿಬಲ್‌ ಹೇಳಿದ್ದಾರೆ. ''ಜಿ-23 ನಾಯಕರು ಪಕ್ಷ ತೊರೆಯುವುದಿಲ್ಲ. ನಾವು ಯಾವಾಗಲೂ ಪಕ್ಷದ ಒಳಿತನ್ನೇ ಯೋಚಿಸುತ್ತೇವೆ. ಹಾಗಂತ ಜಿ ಹುಜೂರ್‌ ಎಂದುಕೊಂಡು ಕೂರುವವರಲ್ಲ. ಪಕ್ಷದ ಹುಳುಕುಗಳನ್ನು ನಾವು ಪ್ರಶ್ನಿಸುತ್ತಲೇ ಇರುತ್ತೇವೆ. ಪಕ್ಷದ ಹಿತಕ್ಕಾಗಿ ದುಡಿಯುವುದೇ ನಮ್ಮ ಧ್ಯೇಯ,'' ಎಂದು ತಿಳಿಸಿದ್ದಾರೆ.