ಓಲ್ಡ್‌ ಏರ್‌ಪೋರ್ಟ್‌ ರೋಡ್‌ನಲ್ಲಿ ಮರ ಕಡಿಯಲು ಬಿಬಿಎಂಪಿ ಪ್ಲಾನ್: ಬ್ರೇಕ್ ಹಾಕಿದೆ ಹೈಕೋರ್ಟ್‌

ಎಚ್‌ಎಎಲ್‌ ರಸ್ತೆ ಮತ್ತು ಸುರಂಜನ್‌ದಾಸ್‌ ರಸ್ತೆಯಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಬೃಹತ್‌ ಮರಗಳ ಮಾರಣಹೋಮ ವಿರೋಧಿಸಿ ಪರಿಸರ ಪ್ರೇಮಿಗಳು, ಹೋರಾಟಗಾರರು ಮತ್ತು ಸ್ಥಳೀಯರು ಮಾರ್ಚ್‌ನಲ್ಲಿ ಮರಗಳ ಅಪ್ಪಿಕೋ ಚಳವಳಿ ನಡೆಸಿದ್ದರು.

ಓಲ್ಡ್‌ ಏರ್‌ಪೋರ್ಟ್‌ ರೋಡ್‌ನಲ್ಲಿ ಮರ ಕಡಿಯಲು ಬಿಬಿಎಂಪಿ ಪ್ಲಾನ್: ಬ್ರೇಕ್ ಹಾಕಿದೆ ಹೈಕೋರ್ಟ್‌
Linkup
: ಸಿಗ್ನಲ್‌ ಮುಕ್ತ ಕಾರಿಡಾರ್‌ಗಾಗಿ ಸುರಂಜನ್‌ ದಾಸ್‌ ರಸ್ತೆ ಮತ್ತು ಎಚ್‌ಎಎಲ್‌ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ 25 ಬೃಹತ್‌ ಮರಗಳನ್ನು ಕಡಿಯುವುದಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆವರೆಗೆ ಈ ಆದೇಶ ಮುಂದುವರಿಯಲಿದೆ. ಸಿಗ್ನಲ್‌ ಮುಕ್ತ ಕಾರಿಡಾರ್‌ಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ವಿನಾಯಕ ನಗರದ ನಿವಾಸಿ, ಪರಿಸರ ಹೋರಾಟಗಾರ್ತಿ ಸ್ವಾತಿ ದಾಮೋದರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾತನಾಡಿದ ಸ್ವಾತಿ ದಾಮೋದರ್‌, 'ಎಚ್‌ಎಎಲ್‌ ಜಂಕ್ಷನ್‌ ಬಳಿ ಮರಗಳಿಗೆ ಕೊಡಲಿ ಹಾಕದೇ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಗಾಗಿ ಕಾಮಗಾರಿ ಮುಂದುವರಿಸಬಹುದು. ಕಾರಿಡಾರ್‌ಗಾಗಿ ಬೃಹತ್‌ ಮರಗಳನ್ನು ಕಡಿಯಲು ತೀರ್ಮಾನಿಸಲಾಗಿದೆ. ಆದರೆ ಮರಗಳ ಮಾರಣಹೋಮ ಮಾಡುವ ಬದಲು ಪರ್ಯಾಯವಾಗಿ ಈ ಹಿಂದೆ ಇದ್ದ ಪಾರ್ಕಿಂಗ್‌ ಜಾಗವನ್ನು ಬಿಬಿಎಂಪಿ ಸ್ವಾಧೀನ ಪಡಿಸಿಕೊಂಡು ಯೋಜನೆ ಪೂರ್ಣಗೊಳಿಸಬಹುದು' ಎಂದು ಹೇಳಿದರು. 'ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ ಮಾಡಲಾಗುತ್ತಿದೆ. ಜತೆಗೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಕೂಡ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ನಮಗೆ ಉಚಿತವಾಗಿ ಆಮ್ಲಜನಕ ಪೂರೈಸುವ ಮರಗಳ ಬೆಲೆಯನ್ನು ನಾವು ಅರಿಯಬೇಕಿದೆ. ಮರಗಳನ್ನು ಉಳಿಸಲು ಬಿಬಿಎಂಪಿ ಅಧಿಕಾರಿಗಳು ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಯಲ್ಲಿ ತುಸು ಮಾರ್ಪಾಟು ಮಾಡಿಕೊಳ್ಳಬೇಕು' ಎಂದು ವಿನಾಯಕ ನಗರ ನಿವಾಸಿ ಸ್ವಾತಿ ಮಣಿ ಹೇಳಿದರು. ಒಂದು ತಿಂಗಳ ಹಿಂದೆ, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಯೋಜನೆಯ ಪರಿಶೀಲನೆ ನಡೆಸಿದ್ದರು. ಅಲ್ಲದೇ ತಜ್ಞ ಸಮಿತಿಯ ಅನುಮೋದನೆಯ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ 25 ಮರಗಳನ್ನು ಕಡಿಯುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದರು. ಎಚ್‌ಎಎಲ್‌ ರಸ್ತೆ ಮತ್ತು ಸುರಂಜನ್‌ದಾಸ್‌ ರಸ್ತೆಯಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಬೃಹತ್‌ ಮರಗಳ ಮಾರಣಹೋಮ ವಿರೋಧಿಸಿ ಪರಿಸರ ಪ್ರೇಮಿಗಳು, ಹೋರಾಟಗಾರರು ಮತ್ತು ಸ್ಥಳೀಯರು ಮಾರ್ಚ್‌ನಲ್ಲಿ ಮರಗಳ ಅಪ್ಪಿಕೋ ಚಳವಳಿ ನಡೆಸಿದ್ದರು. ಅಲ್ಲದೇ ರಾತ್ರೋರಾತ್ರಿ ಬಿಬಿಎಂಪಿ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಮರಗಳ ಕಾವಲು ಕಾದಿದ್ದರು.