
ಮೀರತ್: 1997ರ ಏಪ್ರಿಲ್ 23, ಗ್ರೆಗೊರಿ ರೇಮಂಡ್ ರಾಫೆಲ್ ಅವರಿಗೆ ಬಹು ಸಂಭ್ರನದ ದಿನ. ಅವರ ಪತ್ನಿ ಸೋಜಾ ಅಂದು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಅವಳಿ ಗಂಡುಮಕ್ಕಳಿಬ್ಬರೂ ತದ್ರೂಪಿಗಳು. ಈ ಯುವ ದಂಪತಿ ತಮ್ಮ ಮುದ್ದಾದ ಮಕ್ಕಳಿಗೆ ಜೋಫ್ರೆಡ್ ವರ್ಗೀಸ್ ಗ್ರೆಗೊರಿ ಮತ್ತು ರಾಲ್ಫ್ರೆಡ್ ಜಾರ್ಜ್ ಗೆಗೊರಿ ಎಂದು ನಾಮಕರಣ ಮಾಡಿದ್ದರು.
ಅವರಿಬ್ಬರೂ ಮನೆಯಲ್ಲಿ ಪ್ರತಿಯೊಂದನ್ನೂ ಹಂಚಿಕೊಂಡು ಜತೆಯಾಗಿ ಬೆಳೆದರು. ಒಟ್ಟಿಗೆ ಓದಿದರು, ಒಟ್ಟಿಗೆ ಆಡಿದರು. ಇಬ್ಬರೂ ಕಂಪ್ಯೂಟರ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡರು. ಇಬ್ಬರೂ ಹೈದರಾಬಾದ್‌ನಲ್ಲಿ ಉದ್ಯೋಗ ಪಡೆದರು. ಅಷ್ಟೇ ಅಲ್ಲ, ಇಬ್ಬರಿಗೂ ಕೋವಿಡ್ ಎಂಬ ಮಹಾಮಾರಿ ತಗುಲಿದ್ದು ಒಂದೇ ದಿನ. ಏಪ್ರಿಲ್ 24ರಂದು ಇಬ್ಬರಲ್ಲಿಯೂ ಕೋವಿಡ್ ಇರುವುದು ದೃಢಪಟ್ಟಿತ್ತು. ಅಂದರೆ 24ಮೇ ಜನ್ಮದಿನ ಆಚರಿಸಿಕೊಂಡು ಮರುದಿನವೇ ವೈರಸ್ ಅವರನ್ನು ಕಾಡತೊಡಗಿತ್ತು. ಕಳೆದ ವಾರ ಈ ಅವಳಿಗಳು ಮೃತಪಟ್ಟರು. ಇಬ್ಬರ ಸಾವಿನ ನಡುವಿನ ಅಂತರ ಕೆಲವೇ ಗಂಟೆಗಳು!
ಈ ಮಕ್ಕಳು ಕೋವಿಡ್ ಗೆದ್ದರೆ ಇಬ್ಬರೂ ಒಟ್ಟಿಗೆ ಮನೆಗೆ ಬರುತ್ತಾರೆ, ಇಲ್ಲದಿದ್ದರೆ ಇಲ್ಲ ಎನ್ನುವುದು ತಮಗೆ ಆಗಲೇ ತಿಳಿದಿತ್ತು ಎಂದು ಭಾರವಾದ ಹೃದಯದೊಂದಿಗೆ ರಾಫೆಲ್ ಹೇಳಿದರು. 'ಈ ಮುಂಚೆಯಿಂದಲೂ ಒಬ್ಬನಿಗೆ ಏನೇ ಆದರೂ, ಅದು ಇನ್ನೊಬ್ಬನಿಗೂ ಆಗುತ್ತಿತ್ತು. ಇದು ಅವರ ಹುಟ್ಟಿನಿಂದಲೂ ಮುಂದುವರಿದಿತ್ತು. ಜೋಫ್ರೆಡ್ ಮೃತಪಟ್ಟ ಸುದ್ದಿ ಬಂದಾಗಲೇ, ರಾಲ್ಫ್ರೆಡ್ ಏಕಾಂಗಿಯಾಗಿ ಮನೆಗೆ ಬರಲಾರ ಎಂದು ನನ್ನ ಪತ್ನಿಗೆ ಹೇಳಿದ್ದೆ. ಇಬ್ಬರೂ ಮೇ 13 ಮತ್ತು 14ರಂದು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟರು' ಎಂದು ಅವರು ಕಣ್ಣೀರಿಟ್ಟರು.
'ಅವಳಿಗಳು ನಮ್ಮಿಬ್ಬರಿಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದರು. ನಮಗೆ ಉತ್ತಮ ಜೀವನ ಒದಗಿಸಲು ಬಯಸಿದ್ದರು. ಶಿಕ್ಷಕರಾಗಿ ನಾವು ಇಬ್ಬರು ಮಕ್ಕಳನ್ನೂ ಚೆನ್ನಾಗಿ ಬೆಳೆಸಲು ಕಷ್ಟಪಟ್ಟಿದ್ದೆವು. ದುಡ್ಡಿನಿಂದ ಸಂತೋಷದವರೆಗೆ, ಅವರು ನಾವು ಕೊಟ್ಟಿದ್ದೆಲ್ಲವನ್ನೂ ಮರಳಿ ನೀಡಲು ಬಯಸಿದ್ದರು. ಸಾಯುವ ಮುನ್ನ ಇಬ್ಬರೂ ಮೊದಲು ಕೊರಿಯಾಗೆ ತೆರಳಿ, ನಂತರಹ ಬಹುಶಃ ಜರ್ಮನಿಗೆ ತೆರಳಿ ಕೆಲಸ ಮಾಡಲು ಆಲೋಚಿಸಿದ್ದರು. ಆದರೆ ದೇವರು ನಮಗೆ ಏಕೆ ಈ ರೀತಿ ಶಿಕ್ಷೆ ನೀಡಿದ್ದಾನೆ ಎನ್ನುವುದು ನನಗೆ ಗೊತ್ತಾಗಲಿಲ್ಲ' ಎಂದು ಅವರು ಗದ್ಗದಿತರಾದರು. ಅಂದಹಾಗೆ ಈ ದಂಪತಿಗೆ ನೆಲ್ಫ್ರೆಡ್ ಎಂಬ ಹಿರಿಯ ಮಗನಿದ್ದಾನೆ.
ಮೀರತ್‌ನ ದಂಡುಪ್ರದೇಶದಲ್ಲಿ ನೆಲೆಸಿರುವ ಈ ಕುಟುಂಬ, ಆರಂಭದಲ್ಲಿ ಅವಳಿ ಮಕ್ಕಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿತ್ತು. ಆದರೆ ಅವರ ಜ್ವರ ಕಡಿಮೆಯಾಗಲಿಲ್ಲ. ಆಕ್ಸಿಮೀಟರ್‌ನಲ್ಲಿ ಪರೀಕ್ಷಿಸಿದಾಗ ಆಕ್ಸಿಜನ್ ಮಟ್ಟ 90ಕ್ಕಿಂತ ಕಡಿಮೆಯಾಗಿತ್ತು. ವೈದ್ಯರ ಸಲಹೆಯಂತೆ ಮೇ 1ರಂದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.
'ಅವರ ಮೊದಲ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಆದರೆ ಕೆಲವು ದಿನಗಳ ನಂತರ ಮತ್ತೊಂದು ವರದಿಯಲ್ಲಿ ಕೋವಿಡ್ ನೆಗೆಟಿವ್ ಬಂದಿತ್ತು. ಹೀಗಾಗಿ ವೈದ್ಯರು ಅವರನ್ನು ಕೋವಿಡ್ ವಾರ್ಡ್‌ನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲು ಬಯಸಿದ್ದರು. ಇನ್ನೂ ಎರಡು ದಿನ ಕೋವಿಡ್ ವಾರ್ಡ್‌ನಲ್ಲಿರಿಸಿಕೊಂಡು ಅವರ ಆರೋಗ್ಯ ಪರಿಶೀಲನೆ ನಡೆಸುವಂತೆ ನಾನು ಆಸ್ಪತ್ರೆಗೆ ಮನವಿ ಮಾಡಿದ್ದೆ. ಮೇ 13ರ ಸಂಜೆ ಇದ್ದಕ್ಕಿದ್ದಂತೆ ನನ್ನ ಪತ್ನಿಗೆ ಫೋನ್ ಕರೆ ಬಂತು. ನಮ್ಮ ಜಗತ್ತು ಛಿದ್ರವಾಯಿತು' ಎಂದು ರಾಫೆಲ್ ಹೇಳಿದರು.
ರಾಲ್ಫ್ರೆಡ್ ಆಸ್ಪತ್ರೆ ಹಾಸಿಗೆ ಮೇಲಿಂದ ತನ್ನ ತಾಯಿಗೆ ತನ್ನ ಕೊನೆಯ ಕರೆ ಮಾಡಿದ್ದ. ತಾನು ಚೇತರಿಸಿಕೊಳ್ಳುತ್ತಿದ್ದು, ಜೋಫ್ರೆಡ್ ಹೇಗಿದ್ದಾನೆ ಎಂದು ವಿಚಾರಿಸಿದ್ದ. 'ಆ ವೇಳೆಗಾಗಲೇ ಜೋಫ್ರೆಡ್ ಮೃತಪಟ್ಟಿದ್ದ. ಹೀಗಾಗಿ ನಾವೇ ಕಥೆ ಹೆಣೆದೆವು. ಜೋಫ್ರೆಡ್‌ನನ್ನು ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು ಎಂದು ಹೇಳಿದೆವು. ಆದರೆ ರಾಲ್ಫ್ರೆಡ್‌ಗೆ ಸಹಜವಾಗಿಯೇ ತಿಳಿದಿತ್ತು ಎನಿಸುತ್ತದೆ. ನೀನು ಸುಳ್ಳು ಹೇಳುತ್ತಿದ್ದೀಯ ಎಂದು ಅಮ್ಮನಿಗೆ ನಡುಗುವ ದನಿಯಲ್ಲಿ ಹೇಳಿದ್ದ' ಎಂದು ಮಾತು ಮುಗಿಸಿ ನೋವಿನ ನಿಟ್ಟುಸಿರುಬಿಟ್ಟರು ರಾಫೆಲ್.