ಏರ್‌ ಇಂಡಿಯಾ ಖಾಸಗೀಕರಣ ಶೀಘ್ರ? ಅ. 15ಕ್ಕೆ ಹೊಸ ಮಾಲಿಕರ ಘೋಷಣೆ ಸಾಧ್ಯತೆ

​​ಹಣಕಾಸು ಬಿಡ್‌ನಲ್ಲಿ ಅತಿ ಹೆಚ್ಚು ಮೊತ್ತವನ್ನು ಪ್ರಸ್ತಾಪಿಸುವವರಿಗೆ ಏರ್‌ ಇಂಡಿಯಾ ಮಾರಾಟವಾಗುವ ಸಾಧ್ಯತೆ ಇದ್ದು, ಕೇಂದ್ರ ಸರಕಾರ ಏರ್‌ ಇಂಡಿಯಾದ ಬಿಡ್‌ ವಿಜೇತರ ಹೆಸರನ್ನು ಅಕ್ಟೋಬರ್‌ 15ಕ್ಕೆ ಘೋಷಿಸುವ ಸಾಧ್ಯತೆ ಇದೆ.

ಏರ್‌ ಇಂಡಿಯಾ ಖಾಸಗೀಕರಣ ಶೀಘ್ರ? ಅ. 15ಕ್ಕೆ ಹೊಸ ಮಾಲಿಕರ ಘೋಷಣೆ ಸಾಧ್ಯತೆ
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಏರ್‌ ಇಂಡಿಯಾದ ಬಿಡ್‌ ವಿಜೇತರ ಹೆಸರನ್ನು ಅಕ್ಟೋಬರ್‌ 15ಕ್ಕೆ ಘೋಷಿಸುವ ಸಾಧ್ಯತೆ ಇದೆ. ಏರ್‌ಇಂಡಿಯಾದ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ತಾಂತ್ರಿಕ ವಿಶ್ಲೇ­ಷಣೆ ನಡೆಯುತ್ತಿದೆ. ನಂತರ ಹಣಕಾಸು ಬಿಡ್‌ಗಳ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಇತ್ತೀಚೆಗೆ ಹೇಳಿದ್ದಾರೆ. ಇಂದು ಅಂದರೆ ಬುಧವಾರ ಅಥವಾ ಗುರುವಾರ ಹಣಕಾಸು ಬಿಡ್‌ ಆರಂಭವಾಗುವ ಸಾಧ್ಯತೆ ಇದೆ. ಹಣಕಾಸು ಬಿಡ್‌ನಲ್ಲಿ ಅತಿ ಹೆಚ್ಚು ಮೊತ್ತವನ್ನು ಪ್ರಸ್ತಾಪಿಸುವವರಿಗೆ ಮಾರಾಟವಾಗುವ ಸಾಧ್ಯತೆ ಇದೆ. ವರದಿಯ ಪ್ರಕಾರ ಬಿಡ್‌ ದರದಲ್ಲಿ ಶೇ. 85 ಮೊತ್ತ ಏರ್‌ ಇಂಡಿಯಾದ ಸಾಲದ ಬಾಬ್ತಿಗೆ ನಿಗದಿಯಾಗಲಿದ್ದು, ಶೇ. 15 ನಗದು ರೂಪದಲ್ಲಿ ಕೊಡಬೇಕಾಗುತ್ತದೆ. ಸರಕಾರವು ಏರ್‌ ಇಂಡಿಯಾದಲ್ಲಿನ ಶೇ. 100 ಷೇರುಗಳನ್ನು ಮಾರಾಟ ಮಾಡಲಿದೆ. ಇದರ ಜತೆಗೆ ಏರ್‌ ಇಂಡಿಯಾದ ಅಧೀನದಲ್ಲಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇ. 50 ಷೇರುಗಳನ್ನು ಮಾರಾಟ ಮಾಡಲಿದೆ. ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾದ ಟಾಟಾ ಸನ್ಸ್‌ನ ಅಧೀನ ಕಂಪನಿಯಾದ ಟಲಾಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಸ್ಪೈಸ್‌ಜೆಟ್‌ನ ಪ್ರವರ್ತಕ, ಉದ್ಯಮಿ ಅಜಯ್‌ ಸಿಂಗ್‌ ಅವರು ಏರ್‌ ಇಂಡಿಯಾಗೆ ಬಿಡ್‌ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಟಾಟಾ ಸಂಸ್ಥೆಯು ಏರ್‌ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಯ ಮೌಲ್ಯವನ್ನು 15,000-20,000 ಕೋಟಿ ರೂ. ಎಂದು ಅಂದಾಜಿಸಿದೆ. ಏರ್ ಇಂಡಿಯಾ ಮಾರಾಟವು ಮೋದಿ ಸರ್ಕಾರದ ಖಾಸಗೀಕರಣ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು, ಇದನ್ನು ಅಮಿತ್ ಶಾ ನೇತೃತ್ವದ ಸಚಿವರ ಸಮಿತಿಯು ಮೇಲ್ವಿಚಾರಣೆ ಮಾಡುತ್ತಿದೆ. ಏರ್ ಇಂಡಿಯಾದಲ್ಲಿನ ಪಾಲನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಡೆಸುತ್ತಿರುವ ಎರಡನೇ ಪ್ರಯತ್ನ ಇದಾಗಿದೆ. 2018ರಲ್ಲಿ ವಿಮಾನಯಾನ ಸಂಸ್ಥೆಯಲ್ಲಿರುವ ಶೇ. 76ರಷ್ಟು ಷೇರನ್ನು ಮಾರಾಟ ಮಾಡುವ ಸರಕಾರದ ಪ್ರಸ್ತಾವನೆಗೆ ಯಾವುದೇ ಹೂಡಿಕೆದಾರರು ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಕಾರಣ ಏರ್‌ ಇಂಡಿಯಾ ಖಾಸಗೀಕರಣಗೊಳಿಸಿದ ನಂತರವೂ ಸರ್ಕಾರ ಇದರಲ್ಲಿ ಶೇ. 26ರಷ್ಟು ಪಾಲನ್ನು ಉಳಿಸಿಕೊಳ್ಳಲು ಯೋಜಿಸಿತ್ತು. ಪ್ರಸ್ತುತ ಪ್ರಸ್ತಾವನೆಯ ಭಾಗವಾಗಿ, ಏರ್ ಇಂಡಿಯಾದ ಮಾಲಿಕತ್ವವನ್ನು 23,000 ಕೋಟಿ ರೂ. ಸಾಲದೊಂದಿಗೆ ಖಾಸಗಿ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಸ್ತಾವನೆಯಲ್ಲಿ, ಉಳಿದಿರುವ ಸಾಲವನ್ನು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಐಎಎಚ್‌ಎಲ್‌) ಗೆ ವರ್ಗಾಯಿಸಲು ಯೋಜಿಸಲಾಗಿದೆ. ಈ ನೂತನ ಸಂಸ್ಥೆಯು ಮುಂಬೈನ ಏರ್ ಇಂಡಿಯಾ ಕಟ್ಟಡ, ದೆಹಲಿಯ ಏರ್ಲೈನ್ಸ್ ಹೌಸ್, ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ 4 ಎಕರೆ ಜಾಗ ಸೇರಿ ದೆಹಲಿ, ಮುಂಬೈ ಮತ್ತು ಇತರ ನಗರಗಳಲ್ಲಿನ ಹೌಸಿಂಗ್ ಸೊಸೈಟಿಗಳಲ್ಲಿನ ಆಸ್ತಿಗಳನ್ನು ಹೊಂದಲಿದೆ. ಏರ್‌ ಇಂಡಿಯಾ ಹಿಂದೆ ಟಾಟಾ ಸಮೂಹದ ಒಡೆತನದಲ್ಲಿತ್ತು. ಇದನ್ನು 1953ರಲ್ಲಿ ರಾಷ್ಟ್ರೀಕರಣ ಮಾಡಲಾಗಿತ್ತು. ಹೀಗೆ ಸರಕಾರದ ಒಡೆತನಕ್ಕೆ ಸೇರಿದ ಸಂಸ್ಥೆಯನ್ನು ಮತ್ತೆ ಖರೀದಿಸಲು ಮುಂದೆ ಬಂದಿದೆ.