ಉಗ್ರನ ಗುಂಡೇಟಿಗೆ ಪೊಲೀಸ್ ಅಧಿಕಾರಿ ಹತ್ಯೆ: ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ

Srinagar Terrorist Attack: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರನ್ನು ಉಗ್ರನೊಬ್ಬ ಹಿಂದಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಧಿಕಾರಿಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಉಗ್ರನ ಗುಂಡೇಟಿಗೆ ಪೊಲೀಸ್ ಅಧಿಕಾರಿ ಹತ್ಯೆ: ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ
Linkup
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುವ ಉಗ್ರರ ಮೃತದೇಹದ ಮೆರವಣಿಗೆ, ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಸೇರುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಆದರೆ ಅಪರೂಪದ ನಿದರ್ಶನದಲ್ಲಿ, ಉಗ್ರರ ಗುಂಡಿಗೆ ಬಲಿಯಾದ ಪೊಲೀಸ್ ಅಧಿಕಾರಿಯ ಅಂತ್ಯಸಂಸ್ಕಾರ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಸೇರಿಕೊಂಡ ಘಟನೆ ಭಾನುವಾರ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಲ್ಮುನಾ ಗ್ರಾಮಕ್ಕೆ ಮೃತದೇಹವನ್ನು ತಂದಾಗ, ಹುತಾತ್ಮ ಸಬ್ ಇನ್‌ಸ್ಪೆಕ್ಟರ್ ಅರ್ಷಿದ್ ಅಹ್ಮದ್ ಮಿರ್ ಅವರ ಅಗಲುವಿಕೆಗೆ ಗ್ರಾಮಸ್ಥರು ಜತೆಗೂಡಿ ಶೋಕ ವ್ಯಕ್ತಪಡಿಸಿದರು. ಬಂಧಿಸಲಾಗಿದ್ದ ಆರೋಪಿಯೊಬ್ಬನನ್ನು ವೈದ್ಯಕೀಯ ತಪಾಸಣೆಗಾಗಿ ಶ್ರೀನಗರದ ಖನ್ಯಾರ್ ಎಂಬಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ 25 ವರ್ಷದ ಮಿರ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. 'ನಾವು ಧೈರ್ಯಶಾಲಿ ಯುವ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಆರೋಪಿ ವ್ಯಕ್ತಿಯೊಬ್ಬನನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವುದಕ್ಕಾಗಿ ಅವರನ್ನು ಆಸ್ಪತ್ರೆಯೊಂದಕ್ಕೆ ನಿಯೋಜಿಸಲಾಗಿತ್ತು. ಅವರು ಆಸ್ಪತ್ರೆಯಿಂದ ಹೊರಬರುವಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ' ಎಂದು ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗೆ ಸಬ್ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದ ಮಿರ್, ಒಂದು ವರ್ಷದ ತರಬೇತಿ ಬಳಿಕ ಖನ್ಯಾರ್ ಪೊಲೀಸ್ ಠಾಣೆಗೆ ಕೆಲವು ತಿಂಗಳ ಹಿಂದಷ್ಟೇ ಸೇರಿಕೊಂಡಿದ್ದರು. ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹಿಂದಿನಿಂದ ಬಂದ ಭಯೋತ್ಪಾದಕನೊಬ್ಬ ಹತ್ತಿರದಿಂದ ಅವರ ಮೇಲೆ ಗುಂಡು ಹಾರಿಸಿದ್ದ. ತಲೆಗೆ ಮೂರು ಗುಂಡುಗಳು ಹೊಕ್ಕಿದ್ದರಿಂದ ಅವರು ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅವರು ಆಗಲೇ ಮೃತಪಟ್ಟಿದ್ದರು. ಕಪ್ಪು ಉಡುಪು ಧರಿಸಿದ್ದ ದಾಳಿಕೋರ, ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅವನನ್ನು ಹಿಡಿಯಲು ಒಬ್ಬರು ಬೆನ್ನಟ್ಟಿದರೂ ಅದು ಸಾಧ್ಯವಾಗಲಿಲ್ಲ. ಅವರು ಗಾಯಗೊಂಡಿದ್ದ ಅಧಿಕಾರಿಯ ರಕ್ಷಣೆಗೆ ಹಿಂದಿರುಗಿದ್ದರು.