ದಿಲ್ಲಿ ಲಾಕ್‌ಡೌನ್‌: ರಾತ್ರೋ ರಾತ್ರಿ ರಾಷ್ಟ್ರ ರಾಜಧಾನಿ ಬಿಟ್ಟು ಊರಿನತ್ತ ಹೊರಟ ವಲಸೆ ಕಾರ್ಮಿಕರು!

ದಿಲ್ಲಿಯಲ್ಲಿ ಲಾಕ್‌ಡೌನ್‌ ಹೇರಿದ ಹಿನ್ನೆಲೆ ಸೋಮವಾರ ರಾತ್ರಿ ತುಂಬೆಲ್ಲ ಘಾಜಿಯಾಬಾದ್‌ನ ಆನಂದ್‌ ವಿಹಾರ್‌ ಬಸ್ ಟರ್ಮಿನಲ್‌ನಲ್ಲಿ ವಲಸೆ ಕಾರ್ಮಿಕರು ತುಂಬಿ ಹೋಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಸ್‌ ಟರ್ಮಿನಲ್‌ಗೆ ಬಂದ ವಲಸೆ ಕಾರ್ಮಿಕರು ಊರಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಇನ್ನೊಂದು ಕಡೆ ಬಸ್‌ ದರ ಕೂಡ ಮಾಲೀಕರು ಏರಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ.

ದಿಲ್ಲಿ ಲಾಕ್‌ಡೌನ್‌: ರಾತ್ರೋ ರಾತ್ರಿ ರಾಷ್ಟ್ರ ರಾಜಧಾನಿ ಬಿಟ್ಟು ಊರಿನತ್ತ ಹೊರಟ ವಲಸೆ ಕಾರ್ಮಿಕರು!
Linkup
ಹೊಸದಿಲ್ಲಿ: ದಿಲ್ಲಿಯಲ್ಲಿ ಆರು ದಿನಗಳ ಕಾಲ ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಪರಿಣಾಮ ಸೋಮವಾರ ರಾತ್ರಿ ತುಂಬೆಲ್ಲ ಘಾಜಿಯಾಬಾದ್‌ನ ಆನಂದ್‌ ವಿಹಾರ್‌ ಬಸ್ ಟರ್ಮಿನಲ್‌ನಲ್ಲಿ ವಲಸೆ ಕಾರ್ಮಿಕರು ತುಂಬಿ ಹೋಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಸ್‌ ಟರ್ಮಿನಲ್‌ಗೆ ಬಂದ ವಲಸೆ ಕಾರ್ಮಿಕರು ಊರಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಲಗೇಜ್‌ಗಳನ್ನು ಹಿಡಿದುಕೊಂಡು ಬಸ್‌ ಹತ್ತುತ್ತಿದ್ದರು. ಕಳೆದ ವರ್ಷದಂತೆ ಕೆಲ ವಲಸೆ ಕಾರ್ಮಿಕರು ಬಸ್‌ನಲ್ಲಿ ತೆರಳಿದರೆ, ಇನ್ನು ಕೆಲವರು ದಿಲ್ಲಿ ಗಡಿಯತ್ತ ನಡೆಯುತ್ತಲೇ ಹೋಗುತ್ತಿದ್ದುದು ಕಂಡು ಬಂತು. ವಿಹಾರ್‌ ಬಸ್‌ ಟರ್ಮಿನಲ್ಲಿ ಕಳೆದ ವರ್ಷದಂತೆ ಜನಜಂಗುಳಿ ಕಂಡುಬಂತು. ಇನ್ನು ಲಾಕ್‌ಡೌನ್‌ ಘೋಷಣೆ ಮಾಡಿದ ಬೆನ್ನಲ್ಲೇ ವಲಸೆ ಕಾರ್ಮಿಕರಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡಿದ್ದರು. ''ಇದು ಕೇವಲ ಸಣ್ಣ ಲಾಕ್‌ಡೌನ್‌. ಹಾಗಾಗಿ ವಲಸೆ ಕಾರ್ಮಿಕರು ದಿಲ್ಲಿ ಬಿಟ್ಟು ಹೊರಹೋಗುವ ಅವಶ್ಯಕತೆ ಇಲ್ಲ. ಅವರ ಅಗತ್ಯಗಳಿಗೆ ಸರಕಾರ ಸ್ಪಂದಿಸಲಿದೆ. ಸೋಂಕು ನಿಯಂತ್ರಣಕ್ಕೆ ಸಹಕರಿಸಿ,'' ಎಂದು ಮನವಿ ಮಾಡಿದ್ದರು. 'ಎಂದಿನಂತೆ ಅಗತ್ಯ ಸೇವೆಗಳು ಎರಲಿವೆ. ಕಿರಾಣಿ ಅಂಗಡಿಗಳು, ಮೆಡಿಸಿನ್‌, ದಿನ ಪತ್ರಿಕೆ ಮಾರಾಟ ಇರಲಿದೆ. ಬ್ಯಾಂಕ್‌, ಎಟಿಎಂ, ವಿಮಾ ಕಂಪನಿಗಳು ಕಾರ್ಯನಿರ್ವಹಿಸಲಿವೆ. ಖಾಸಗಿ ಕಚೇರಿಗಳು ವರ್ಕ್ ಫ್ರಮ್‌ ಹೋಮ್‌ ನೀತಿ ಪಾಲಿಸಲಿವೆ. ಸರಕಾರಿ ಕಚೇರಿಗಳು ತೆರೆದಿರಲಿವೆ' ಎಂದೂ ತಿಳಿಸಿದ್ದರು. ಆದರೂ ಸಿಎಂ ಮಾತು ಲೆಕ್ಕಿಸದೆ ವಲಸೆ ಕಾರ್ಮಿಕರು ತಮ್ಮ ಊರಿನತ್ತ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್‌ ವಿಸ್ತರಿಸುವ ಸಾಧ್ಯತೆ ಇರುವ ಹಿನ್ನೆಲೆ ಊರಿಗೆ ತೆರಳುತ್ತಿದ್ದೇವೆ ಎಂದು ವಲಸೆ ಕಾರ್ಮಿಕರೊಬ್ಬರು ತಿಳಿಸಿದ್ದಾರೆ. ಇನ್ನು ವಲೆ ಕಾರ್ಮಿಕರು ಊರಿಗೆ ಹೊರಟಿರುವುದನ್ನೇ ಬಸ್‌ ಮಾಲೀಕರು ಲಾಭವನ್ನಾಗಿಸಿದ್ದಾರೆ. 200 ರೂ. ಇದ್ದ ಬಸ್‌ ಟಿಕೆಟ್‌ ದರ ಇದೀಗ 2000 ದಿಂದ 3000 ಆಗಿದೆ ಎಂದು ಆರೋಪಿಸಿರುವ ವಲಸೆ ಕಾರ್ಮಿಕರೊಬ್ಬರು, ಲಾಕ್‌ಡೌನ್‌ ಏಕಾಏಕಿ ಘೋಷಣೆ ಮಾಡಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ದಿಲ್ಲಿಯಲ್ಲಿ ಒಂದು ವಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಬೇರೆ ಕೆಲ ರಾಜ್ಯಗಳಲ್ಲಿ ವಾರಾಂತ್ಯ ಲಾಕ್‌ಡೌನ್, ನೈಟ್‌ ಕರ್ಫ್ಯೂ ಜಾರಿಯಲ್ಲಿದೆ.