ಇನ್ಮುಂದೆ ಕೊರೊನಾ ಸೋಂಕಿತರ ಕೈಗೆ ಬೀಳಲಿದೆ ಸೀಲ್, ಮುದ್ರೆ ಹಾಕಲು ಬಿಬಿಎಂಪಿ ಅಧಿಕಾರಿಗಳು ರೆಡಿ!

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಈಗ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್‌ ಆದವರ ಕೈಗೆ ಮುದ್ರೆ ಹಾಕಲು ಮನೆ ಮನೆಗೆ ತೆರಳಲಿದ್ದಾರೆ.

ಇನ್ಮುಂದೆ ಕೊರೊನಾ ಸೋಂಕಿತರ ಕೈಗೆ ಬೀಳಲಿದೆ ಸೀಲ್, ಮುದ್ರೆ ಹಾಕಲು ಬಿಬಿಎಂಪಿ ಅಧಿಕಾರಿಗಳು ರೆಡಿ!
Linkup
ಬೆಂಗಳೂರು: ನಗರದಲ್ಲಿ ಕೋವಿಡ್‌ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ ಇಂದಿನಿಂದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್‌ ಆದವರ ಕೈಗೆ ಮುದ್ರೆ ಹಾಕಲು ಮುಂದಾಗಿದೆ. ಸೋಂಕು ದೃಢಪಟ್ಟ ಬಳಿಕ ಸಾಕಷ್ಟು ಮಂದಿ ಮಾಲ್‌, ಹೋಟೆಲ್‌ ಎಂದು ತಿರುಗಾಡುತ್ತಿದ್ದುಅವರೇ ವೈರಸ್‌ ವಾಹಕಗಳಾಗುತ್ತಿದ್ದಾರೆ. ಅಂಥವರ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಸೀಲ್‌ ತಂತ್ರ ಪ್ರಯೋಗಿಸಲಿದೆ. ಸ್ವಲ್ಪ ಪ್ರಮಾಣದ ಕೊರೊನಾ ಲಕ್ಷಣ ಹೊಂದಿರುವ ಮಂದಿ ಮನೆಯಲ್ಲಿಯೇ (ಹೋಮ್‌ ಐಸೋಲೇಷನ್‌) ಚಿಕಿತ್ಸೆ ಪಡೆಯುವುದಾಗಿ ತಿಳಿಸುತ್ತಾರೆ. ಇಂಥವರಲ್ಲಿ ಕೆಲವರು ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು ಕಂಡಕಂಡಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಇದು ಕೂಡ ಸೋಂಕು ಹರಡಲು ಕಾರಣವಾಗುತ್ತಿದೆ. ಇಂಥ ಬೇಜವಾಬ್ದಾರಿತನಕ್ಕೆ ಬ್ರೇಕ್‌ ಹಾಕಲು ಸೀಲ್‌ ಹಾಕುವುದೇ ಉತ್ತಮ ಎಂದು ಕಂಡುಕೊಂಡಿರುವ ಬಿಬಿಎಂಪಿ ಅದಕ್ಕೆ ಸಿದ್ಧತೆ ನಡೆಸಲಿದೆ. ಹೋಮ್‌ ಕ್ವಾರಂಟೈನ್‌ನಲ್ಲಿಇರುತ್ತೇನೆ ಎಂದು ಹೇಳಿದವರ ಮನೆಗೆ ಬಿಬಿಎಂಪಿ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಸೀಲ್‌ ಹಾಕಲಿದ್ದಾರೆ. ಆರೋಗ್ಯಾಧಿಕಾರಿಗಳಿಗೆ ಸೂಚನೆ ಬಿಬಿಎಂಪಿ 8 ವಲಯಗಳ ಮಟ್ಟದಲ್ಲಿ ಕೋವಿಡ್‌ ಸೋಂಕಿಗೆ ಸಂಬಂಧಿಸಿದಂತೆ ಶುಕ್ರವಾರ ವರ್ಚುಯಲ್‌ ಸಭೆಯಲ್ಲಿ ಮಾತನಾಡಿದ ಆಯುಕ್ತ ಗೌರವ್‌ ಗುಪ್ತಾ ಅವರು, ''ನಗರದಲ್ಲಿಕೋವಿಡ್‌ ಸೋಂಕು ಹರಡುವುದನ್ನು ತಡೆಯಬೇಕು. ಕೋವಿಡ್‌ ಸೋಂಕು ದೃಢಪಟ್ಟವರಿಗೆ ಸೀಲ್‌ ಹಾಕಬೇಕು. ಅದಕ್ಕೆ ಬೇಕಾದ ಶಾಯಿ(ಇಂಕ್‌)ಯನ್ನು ಎಲ್ಲಾ ವಲಯಗಳಿಗೂ ಕೂಡಲೆ ವ್ಯವಸ್ಥೆ ಮಾಡಬೇಕು'' ಎಂದು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು. ''ಸರಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಬೇಕಿರುವ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲು ಕ್ರಮ ವಹಿಸಬೇಕು. ಬೂತ್‌ ಮಟ್ಟದ ತಂಡಗಳ ಕಾರ್ಯನಿರ್ವಹಣೆಯನ್ನು ಸಕ್ರಿಯವಾಗಿಸಿ ಕಾಂಟ್ಯಾಕ್ಟ್ ಟ್ರೇಸಿಂಗ್‌ ಸರಿಯಾಗಿ ಮಾಡಬೇಕು. ಎಲ್ಲಾ ವಲಯಗಳಲ್ಲಿಯೂ ಕಂಟೈನ್ಮೆಂಟ್‌ ಜೋನ್‌ ಒಂದೇ ಮಾದರಿಯಲ್ಲಿರಬೇಕು. ಆಂಬ್ಯುಲೆನ್ಸ್‌ಗಳ ವ್ಯವಸ್ಥೆ, ಟೆಸ್ಟಿಂಗ್‌ ಹಾಗೂ ವ್ಯಾಕ್ಸಿನೇಷನ್‌ ಹೆಚ್ಚಳ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು,'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಐಸೋಲೇಷನ್‌ನಲ್ಲಿದ್ದವರ ಮನೆಗೆ ಸಿಬ್ಬಂದಿ ಭೇಟಿ ಕೋವಿಡ್‌ ಸೋಂಕು ದೃಢಪಟ್ಟು ಹೋಮ್‌ ಐಸೋಲೇಷನ್‌ನಲ್ಲಿದ್ದವರ ಮನೆಗೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಅವರ ಮೇಲೆ ನಿಗಾ ವಹಿಸಬೇಕು. ಕೋವಿಡ್‌ ಸಲುವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೋವಿಡ್‌ ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೋಂಕು ನಿವಾರಕ ಸಿಂಪಡಣೆಗೆ ಸೂಚನೆ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡುವ ವಿಚಾರವಾಗಿ ಈಗಾಗಲೇ ಜಲಮಂಡಳಿ ಅಧ್ಯಕ್ಷರ ಜತೆ ಚರ್ಚೆ ನಡೆಸಿದ್ದು, ಆಯಾ ವಲಯಗಳಲ್ಲಿ ಜೆಟ್ಟಿಂಗ್‌ ಯಂತ್ರಗಳನ್ನು ಬಳಸಿಕೊಂಡು ಸೋಂಕು ನಿವಾರಕ ಸಿಂಪಡಣೆ ಮಾಡಲು ಸೂಚನೆ ನೀಡಲಾಗಿದೆ ಎಂದರು.