ಇಂದಲ್ಲ ನಾಳೆ ಸೆಣೆಸಲೇಬೇಕು: ಚುನಾವಣೆಗೆ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರವಿದು!

ಮುಂಬರುವ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಒಂದಲ್ಲ ಒಂದು ದಿನ ಸ್ಪರ್ಧೆ ಮಾಡಲೇಬೇಕಲ್ಲ ಎಂದು ಹೇಳಿದ್ದಾರೆ.

ಇಂದಲ್ಲ ನಾಳೆ ಸೆಣೆಸಲೇಬೇಕು: ಚುನಾವಣೆಗೆ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರವಿದು!
Linkup
ಲಕ್ನೋ: ಮುಂಬರುವ 2022ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ , ಒಂದಲ್ಲ ಒಂದು ದಿನ ಸ್ಪರ್ಧೆ ಮಾಡಲೇಬೇಕಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೀವೂ ಕೂಡ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಇಂದಲ್ಲ ನಾಳೆ ಸೆಣೆಸಲೇಬೇಕು ಎಂದು ಪ್ರಿಯಾಂಕಾ ಚುಟುಕಾಗಿ ಉತ್ತರಿಸಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನವಾಗಿಲ್ಲ. ಈ ಕುರಿತು ಭವಿಷ್ಯದಲ್ಲಿ ಚಿಂತನೆ ನಡೆಸಲಾಗುವುದು. ಚುನಾವನೆಯಲ್ಲಿ ಸ್ಪರ್ಧಿಸುವುದು ನನ್ನೊಬ್ಬಳ ತೀರ್ಮಾನವಾಗಲಾರದು. ಈ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಸದ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಯಾವುದೇ ಚಿಂತನೆ ಇಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದರು. ಪ್ರಿಯಾಂಕಾ ಗಾಂಧಿ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಅಥವಾ ಅಮೇಥಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ, ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದೆ. ಇದೇ ಕಾರಣಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ. ನವೆಂಬರ್ 15ರವರೆಗೂ ವಿವಿಧ ಕ್ಷೇತ್ರಗಳ ಸೀಟುಗಳಿಗೆ ಅರ್ಜಿ ಸಲ್ಲಿಸುವಂತೆ ಮಹಿಳೆಯರಿಗೆ ಆಹ್ವಾನ ನೀಡಿರುವ ಪ್ರಿಯಾಂಕಾ ಗಾಂಧಿ, ಮಹಿಳಾ ಅಭ್ಯರ್ಥಿಗಳ ಆಯ್ಕೆಗಳು ಸಂಪೂರ್ಣವಾಗಿ ಅರ್ಹತೆ ಆಧಾರದ ಮೇಲೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬದಲಾವಣೆ ಬಯಸಿರುವ, ಏಕತೆಯಲ್ಲಿ ನಂಬಿಕೆ ಇರಿಸಿರುವ ಮತ್ತು ನ್ಯಾಯದ ಪರ ನಿಂತಿರುವ ಪ್ರತಿಯೊಬ್ಬ ಮಹಿಳೆಯರಿಗೆ ಕಾಂಗ್ರೆಸ್ ಧ್ವನಿಯಾಗಲಿದೆ ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ಆದರೆ ತಮ್ಮ ಸ್ಪರ್ಧೆ ಬಗ್ಗೆ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ಮುಂದೆ ನೋಡೋಣ ಎಂದಷ್ಟೇ ಹೇಳಿ ಪತ್ರಕರ್ತರ ಪ್ರಶ್ನೆಯಿಂದ ಜಾರಿಗೊಂಡಿದ್ದಾರೆ.