ಬಂಗಾಳ ಮುಖ್ಯ ಕಾರ್ಯದರ್ಶಿ ರಾಜೀನಾಮೆ, ಮಮತಾ ಸಲಹೆಗಾರನಾಗಿ ಸೇರಿಕೊಂಡ ಬಂಡೋಪಧ್ಯಾಯ

ಮುಖ್ಯ ಕಾರ್ಯದರ್ಶಿ ಅಲಾಪನ್‌ ಬಂಡೋಪಧ್ಯಾಯ ಅವರನ್ನು ಕೇಂದ್ರ ಸೇವೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ಇದಾದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.

ಬಂಗಾಳ ಮುಖ್ಯ ಕಾರ್ಯದರ್ಶಿ ರಾಜೀನಾಮೆ, ಮಮತಾ ಸಲಹೆಗಾರನಾಗಿ ಸೇರಿಕೊಂಡ ಬಂಡೋಪಧ್ಯಾಯ
Linkup
ಕೋಲ್ಕೊತ್ತಾ: ಕೇಂದ್ರದ ಆದೇಶಕ್ಕೆ ಸಡ್ಡು ಹೊಡೆದಿರುವ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂಡೋಪಧ್ಯಾಯ ತಮ್ಮ ಹುದ್ದೆಗೆ ರಾಜೀನಾಮೆ ಬಿಸಾಕಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಅವರ ಮುಖ್ಯ ಸಲಹೆಗಾರರಾಗಿ ಅವರು ಹೊಸ ಹುದ್ದೆ ಸೇರಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಯನ್ನು ಕೇಂದ್ರ ಸೇವೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು, ಬೆನ್ನಿಗೆ ಈ ಬೆಳವಣಿಗೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದು, ಅವರೀಗ ತಮ್ಮ ಸರಕಾರದ ಮುಖ್ಯ ಸಲಹೆಗಾರರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಬಂಡೋಪಾಧ್ಯಾಯ ನಿವೃತ್ತರಾದ ಹಿನ್ನೆಲೆಯಲ್ಲಿ ಎಚ್‌ಕೆ ದ್ವಿವೇದಿ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮುಖ್ಯ ಕಾರ್ಯದರ್ಶಿಯನ್ನು ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಕಳುಹಿಸಿಕೊಡುವುದಿಲ್ಲ ಎಂಬ ಸಂದೇಶವನ್ನು ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ರವಾನಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯನ್ನು ವಾಪಸ್‌ ಕರೆಸಿಕೊಳ್ಳುವಾಗ “ಅವರು ಯಾವುದೇ ಕಾರಣ ನೀಡಲಿಲ್ಲ. ನಾನು ಆಘಾತಗೊಂಡೆ. ಕೋವಿಡ್ ಸಾಂಕ್ರಾಮಿಕಕ್ಕೆ ಅವರ ಸೇವೆ ನಮಗೆ ಬೇಕು ಎಂದು ನಾನು ನಿರ್ಧರಿಸಿದ್ದೇನೆ. ಕೋವಿಡ್ ಮತ್ತು ಯಾಸ್ ಚಂಡಮಾರುತಕ್ಕಾಗಿ, ಬಡವರಿಗೆ, ರಾಜ್ಯಕ್ಕೆ, ದೇಶಕ್ಕೆ, ತೊಂದರೆಯಲ್ಲಿರುವ ಜನರಿಗಾಗಿ ಅವರು ತಮ್ಮ ಸೇವೆಯನ್ನು ಮುಂದುವರಿಸಬೇಕು …" ಎಂದು ಸಿಎಂ ಹೇಳಿದ್ದಾರೆ. 'ಮಿಸ್ಟರ್‌ ಪ್ರೈಮ್‌ ಮಿನಿಸ್ಟರ್‌' ಇದೇ ವೇಳೆ ಕೇಂದ್ರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ದೀದಿ, "ತನ್ನ ಜೀವನವನ್ನೇ ಕೆಲಸಕ್ಕೆ ಅರ್ಪಿಸಿಕೊಂಡ ನಂತರವೂ ಒಬ್ಬ ಅಧಿಕಾರಿಯನ್ನು ಅವಮಾನಿಸುವ ಮೂಲಕ ಸರಕಾರ ಮತ್ತು ಪ್ರಧಾನಿ ಯಾವ ಸಂದೇಶವನ್ನು ರವಾನಿಸುತ್ತಿದ್ದಾರೆ? ಅವರೇನು ಬಂಧಿತ ಕಾರ್ಮಿಕರೇ (ಬಾಂಡೆಡ್‌ ಲೇಬರ್‌)? ಕೇಂದ್ರದಲ್ಲಿ ಅನೇಕ ಬಂಗಾಳ ಕೇಡರ್‌ನ ಅಧಿಕಾರಿಗಳು ಇದ್ದಾರೆ. ಸಮಾಲೋಚನೆಯಿಲ್ಲದೆ ನಾನು ಅವರನ್ನು ವಾಪಸ್‌ ಕರೆಸಿಕೊಳ್ಳಬಹುದೇ? ಮಿಸ್ಟರ್‌ ಪ್ರೈಮ್‌ ಮಿನಿಸ್ಟರ್‌? ಮಿಸ್ಟರ್‌ ಬ್ಯುಸಿ ಪ್ರಧಾನಿ? ಮಿಸ್ಟರ್‌ ಮನ್-ಕಿ-ಬಾತ್ ಪ್ರಧಾನಿ?” ಎಂದು ಕುಟುಕಿದ್ದಾರೆ. ಆಲಾಪನ್‌ ಬಂಡೋಪಾಧ್ಯಾಯ ಅವರಿಗೆ ಸೋಮವಾರ 10 ಗಂಟೆಗೆ ದಿಲ್ಲಿಗೆ ಬಂದು ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಯಾಸ್‌ ಚಂಡಮಾರುತದ ಪರಿಶೀಲನೆಗೆ ಆಗಮಿಸಿದ್ದ ಪ್ರಧಾನಿ ಸಭೆಗೆ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಗೈರಾದ ಬಳಿಕ ಈ ಆದೇಶ ಹೊರಬಿದ್ದಿತ್ತು.