ಆಸ್ಪತ್ರೆಗಳು, ರಾಜ್ಯಗಳು ಕೊರೊನಾ ಸಾವಿನ ಆಡಿಟ್‌ ನಡೆಸಬೇಕು ಎಂದ ಏಮ್ಸ್‌ ಮುಖ್ಯಸ್ಥರು

ರಾಜ್ಯಗಳು ಸಾವಿನ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿವೆ ಎಂಬ ಆರೋಪಗಳ ನಡುವೆ, ಸಾವಿನ ಸಂಖ್ಯೆಯ ನಿಖರ ಲೆಕ್ಕಕ್ಕಾಗಿ ಆಸ್ಪತ್ರೆಗಳು ಮತ್ತು ರಾಜ್ಯಗಳು ಸಾವಿನ ಆಡಿಟ್‌ ನಡೆಸಬೇಕು ಎಂದು ಏಮ್ಸ್‌ ನಿರ್ದೇಶಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಗಳು, ರಾಜ್ಯಗಳು ಕೊರೊನಾ ಸಾವಿನ ಆಡಿಟ್‌ ನಡೆಸಬೇಕು ಎಂದ ಏಮ್ಸ್‌ ಮುಖ್ಯಸ್ಥರು
Linkup
ಹೊಸದಿಲ್ಲಿ: ಕೊರೊನಾ ಸಾವಿಗೆ ಸಂಬಂಧಿಸಿದಂತೆ ಆಸ್ಪತ್ರೆಗಳಿಂದ ಮತ್ತು ಸರಕಾರಗಳಿಂದ ವರದಿಯಾದ ತಪ್ಪು ಮಾಹಿತಿಗಳು ಸೋಂಕಿನ ವಿರುದ್ಧದ ತಂತ್ರಗಾರಿಕೆಯಲ್ಲಿ ಋಣಾತ್ಮಕವಾಗಿ ಪರಿಣಮಿಸಲಿದೆ ಎಂದು ದಿಲ್ಲಿಯ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಸಾವಿನ ಸಂಖ್ಯೆಯ ನಿಖರ ಲೆಕ್ಕಕ್ಕಾಗಿ ಆಸ್ಪತ್ರೆಗಳು ಮತ್ತು ರಾಜ್ಯಗಳು ಸಾವಿನ ಆಡಿಟ್‌ ನಡೆಸಬೇಕು ಎಂದು ಆವರು ಆಗ್ರಹಿಸಿದ್ದಾರೆ. ರಾಜ್ಯಗಳು ಸಾವಿನ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿವೆ ಎಂಬ ಆರೋಪಗಳ ನಡುವೆ ದೇಶದ ಉನ್ನತ ವೈದ್ಯರೊಬ್ಬರು ಈ ಅಭಿಪ್ರಾಯ ಹೊರಹಾಕಿದ್ದಾರೆ. "ಒಬ್ಬ ವ್ಯಕ್ತಿಯು ಹೃದಯಾಘಾತದಿಂದ ಸಾಯುತ್ತಾನೆ ಎಂದುಕೊಳ್ಳೋಣ. ಅವನಿಗೆ ಕೋವಿಡ್ ಇದ್ದರೆ, ಕೋವಿಡ್ ಹೃದಯಾಘಾತಕ್ಕೆ ಕಾರಣವಾಗಿರಬಹುದು. ಆದ್ದರಿಂದ, ನೀವು ಇದನ್ನು ನೇರವಾಗಿ ಕೋವಿಡ್‌ಗೆ ಲಿಂಕ್ ಮಾಡುವ ಬದಲು ಹೃದಯದ ಸಮಸ್ಯೆಯೆಂದು ಹೇಳಿ ಕೋವಿಡ್ ಅಲ್ಲದ ಸಾವು ಎಂದು ತಪ್ಪಾಗಿ ವರ್ಗೀಕರಿಸಿರಬಹುದು,” ಎಂದು ಗುಲೇರಿಯಾ ವಿವರಿಸಿದ್ದಾರೆ. "ಎಲ್ಲಾ ಆಸ್ಪತ್ರೆಗಳು ಮತ್ತು ರಾಜ್ಯಗಳು ಡೆತ್ ಆಡಿಟ್ ಮಾಡುವ ಅವಶ್ಯಕತೆಯಿದೆ. ಏಕೆಂದರೆ ಮರಣದ ಕಾರಣಗಳು ಯಾವುವು? ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸಲು ಏನು ಮಾಡಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮಲ್ಲಿ ಸ್ಪಷ್ಟವಾದ ದತ್ತಾಂಶವಿಲ್ಲದಿದ್ದರೆ, ಮರಣ ಪ್ರಮಾಣವನ್ನು ಕಡಿಮೆ ಮಾಡುವ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಲು ನಮಗೆ ಸಾಧ್ಯವಾಗುವುದಿಲ್ಲ," ಎಂದು ಅವರು ಮಾಹಿತಿ ನೀಡಿದ್ದಾರೆ. "ನೀವು ಸೋಂಕಿಗೆ ಒಳಗಾಗಬಹುದು. ಆದರೆ ನೀವು ತೀವ್ರವಾದ ಕಾಯಿಲೆಗೆ ಒಳಗಾಗಬಾರದು ಎಂಬುದು ನಮ್ಮ ಕಾಳಜಿಯಾಗಿದೆ. ಲಸಿಕೆ ನಿಮ್ಮನ್ನು ಸೋಂಕಿನ ವಿರುದ್ಧ ರಕ್ಷಿಸಬೇಕು. ಕನಿಷ್ಠ ರೋಗ ತೀವ್ರಗೊಳ್ಳದಂತೆ ತಡೆಗಟ್ಟುತ್ತದೆ," ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.