ಆಫ್ಘನ್ನರಿಗೆ ಭಾರತ ಪ್ರವೇಶಕ್ಕೆ ಎಮರ್ಜೆನ್ಸಿ ವೀಸಾ ಕಡ್ಡಾಯ - ಕೇಂದ್ರ ಗೃಹ ಸಚಿವಾಲಯ ಆದೇಶ

ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಅಲ್ಲಿಂದ ಭಾರತಕ್ಕೆ ಬರುವ ಆಫ್ಘನ್ನರು ಎಮರ್ಜೆನ್ಸಿ ವೀಸಾ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಆಫ್ಘನ್ನರಿಗೆ ಭಾರತ ಪ್ರವೇಶಕ್ಕೆ ಎಮರ್ಜೆನ್ಸಿ ವೀಸಾ ಕಡ್ಡಾಯ - ಕೇಂದ್ರ ಗೃಹ ಸಚಿವಾಲಯ ಆದೇಶ
Linkup
ಹೊಸದಿಲ್ಲಿ: ಉಗ್ರ ಪೀಡಿತ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಕಡ್ಡಾಯ ಎಂದು ಕೇಂದ್ರ ಸರಕಾರ ಘೋಷಿಸಿದೆ. ಅಲ್ಲದೆ, ಇದಕ್ಕೂ ಮೊದಲು ನೀಡಿದ್ದ ವೀಸಾಗಳನ್ನು ಸಹ ರದ್ದುಗೊಳಿಸಿದ್ದು, ಹೊಸ ವೀಸಾಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ''ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಆ ದೇಶದಿಂದ ಭಾರತಕ್ಕೆ ಬರುವ ಆಫ್ಘನ್ನರು ಎಮರ್ಜೆನ್ಸಿ ವೀಸಾ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ," ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈಗಾಗಲೇ ವೀಸಾ ನೀಡಲು 'ಇ-ಎಮರ್ಜೆನ್ಸಿ ಎಕ್ಸ್‌-ಮಿಸಲೇನಿಯಸ್‌ ವೀಸಾ' ಕೆಟಗರಿ ರಚಿಸಿದ್ದು, ಅರ್ಜಿ ಸಲ್ಲಿಸಬಹುದಾಗಿದೆ. ಇ-ವೀಸಾ ಪಡೆದವರು ಭಾರತದಲ್ಲಿ ಆರು ತಿಂಗಳು ನೆಲೆಸಬಹುದಾಗಿದೆ. ''ತಾಲಿಬಾನಿಗಳು ದೇಶವನ್ನೇ ಆಕ್ರಮಿಸಿಕೊಂಡಿರುವುದರಿಂದ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಇ-ವೀಸಾ ಪರಿಚಯಿಸಲಾಗಿದ್ದು, ದಿಲ್ಲಿಯಿಂದಲೇ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ದಾಖಲೆ ಆಧಾರದ ಮೇಲೆ ವೀಸಾ ನೀಡಲಾಗುತ್ತದೆ,'' ಎಂದು ಮಾಹಿತಿ ನೀಡಿದೆ. ಉಗ್ರರ ಹಿಂಸಾಚಾರದಿಂದ ಬೇಸತ್ತ ಆಫ್ಘನ್ನರು ದೇಶ ತೊರೆಯಲು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ನುಗ್ಗುತ್ತಿದ್ದು, ಸಿಕ್ಕ ಸಿಕ್ಕ ವಿಮಾನ ಹತ್ತುತ್ತಿದ್ದಾರೆ. ಈ ವೇಳೆ ಉಂಟಾದ ಕಾಲ್ತುಳಿತದಿಂದ ಇದುವರೆಗೆ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹಾಗಾಗಿ, ಉಗ್ರ ಪೀಡಿತ ದೇಶದ ಜನರಿಗೆ ಭಾರತ ನೆರವು ನೀಡುವ ದಿಸೆಯಲ್ಲಿ ತುರ್ತು ಇ-ವೀಸಾ ನೀಡಲು ಮುಂದಾಗಿದೆ. ಇದರಿಂದ ಆಫ್ಘನ್‌ ಹಿಂದೂಗಳು ಹಾಗೂ ಸಿಖ್ಖರಿಗೆ ಸಹ ನೆರವಾಗಲಿದೆ. ಇದುವರೆಗೆ ಭಾರತೀಯರು ಸೇರಿ ಆಫ್ಘನ್‌ನಿಂದ 800ಕ್ಕೂ ಅಧಿಕ ಜನರನ್ನು ಕರೆತರಲಾಗಿದೆ. ಜತೆಗೆ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಆಫ್ಘನ್‌ನಿಂದ ಭಾರತಕ್ಕೆ ಬರುವವರಿಗೆ ದಿಲ್ಲಿಯ ಚಾವ್ಲಾದಲ್ಲಿರುವ ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಕ್ವಾರಂಟೈನ್‌ ಕೇಂದ್ರದಲ್ಲಿ 14 ದಿನ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯವಾಗಿದೆ.