ಅಪ್ಪನ ಜನ್ಮದಿನದಂದು ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪಿಸಿದ ವೈಎಸ್‌ಆರ್ ರೆಡ್ಡಿ ಪುತ್ರಿ ಶರ್ಮಿಳಾ

ತಮ್ಮ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರ ಜನ್ಮದಿನದಂದು ಪುತ್ರಿ ವೈಎಸ್ ಶರ್ಮಿಳಾ ಅವರು ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಗುರುವಾರ ಹೈದರಾಬಾದ್‌ನಲ್ಲಿ ಸ್ಥಾಪಿಸಿದ್ದಾರೆ.

ಅಪ್ಪನ ಜನ್ಮದಿನದಂದು ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪಿಸಿದ ವೈಎಸ್‌ಆರ್ ರೆಡ್ಡಿ ಪುತ್ರಿ ಶರ್ಮಿಳಾ
Linkup
ಹೈದರಾಬಾದ್: ತಮ್ಮ ತಂದೆ ಹಾಗೂ ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಅವರ ಜನ್ಮದಿನಾಚರಣೆಯಂದು ಅವರು (ವೈಎಸ್‌ಆರ್‌ಟಿಪಿ) ಸ್ಥಾಪಿಸಿದ್ದಾರೆ. ಹೈದರಾಬಾದ್‌ನಲ್ಲಿ ಗುರುವಾರ ಖಾಸಗಿ ಸಮಾರಂಭದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅವರು ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ಕಲ್ಯಾಣ, ಸ್ವಾವಲಂಬನೆ ಮತ್ತು ಸಮಾನತೆ- ಇವು ತಮ್ಮ ನೂತನ ಪಕ್ಷದ ಮೂರು ಮುಖ್ಯ ಸ್ತಂಭಗಳಾಗಿರಲಿವೆ ಎಂದು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಸೀಟುಗಳನ್ನು ನೀಡುವುದಾಗಿ ಭರವಸೆ ನೀಡಿದ ಅವರು, ಒಬಿಸಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ನಿಜವಾದ ಅಭಿವೃದ್ಧಿ ಎಂದರೆ ಏನು ಎನ್ನುವುದೇ ತಿಳಿದಿಲ್ಲ. ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿದೆ ಆದರೆ ಜಾರಿಗೆ ತಂದಿಲ್ಲ ಎಂದು ಟೀಕಿಸಿದ್ದಾರೆ. ತೆಲಂಗಾಣದಲ್ಲಿ ಪ್ರತಿ ಕುಟುಂಬವೂ ಸಾಲದ ಹೊರೆ ಅನುಭವಿಸುತ್ತಿವೆ. ರಾಜ್ಯವೇ ಸಾಲದಲ್ಲಿ ಮುಳುಗಿದೆ. ರೈತ ಬಂಧು ಅನುಷ್ಠಾನಗೊಳ್ಳುವಾಗ 6,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ? ತೆಲಂಗಾಣದ ಹುತಾತ್ಮರನ್ನು ಟಿಆರ್‌ಎಸ್ ಮರೆತಿದೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಹುತಾತ್ಮರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ಪರಿಗಣಿಸಲಾಗುವುದು. ಅವರ ಕುಟುಂಬದವರಿಗೆ ಗೌರವ ಮತ್ತು ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ತಮ್ಮ ಪತಿಯ ಬದ್ಧತೆ ಹಾಗೂ ಛಲ ತಮ್ಮ ಇಬ್ಬರೂ ಮಕ್ಕಳಲ್ಲಿದೆ (ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಶರ್ಮಿಳಾ). ಅವರಿಬ್ಬರೂ ಕಳ್ಳರಲ್ಲ. ಮಗಳು ತಂದೆಯಂತೆಯೇ ಜನರ ಕಲ್ಯಾಣಕ್ಕಾಗಿ ಚಿಂತಿಸುವವಳು. ಹೀಗಾಗಿ ಆಕೆಗೆ ಬೆಂಬಲ ನೀಡಿ ಎಂದು ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪತ್ನಿ ವೈಎಸ್ ವಿಜಯಮ್ಮ ಹೇಳಿದ್ದಾರೆ.