![](https://vijaykarnataka.com/photo/82475113/photo-82475113.jpg)
(ಲವಲವಿಕೆ ಸುದ್ದಿಲೋಕ)
ಕೊರೊನಾ ಕಷ್ಟದ ಈ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಕೆಲ ಸಿಲೆಬ್ರಿಟಿಗಳು ತಮ್ಮ ಕೈಲಾದ ಸೇವೆ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಚಂದನವನದ ಹಲವರು ಉದ್ಯೋಗವಿಲ್ಲದವರಿಗೆ ದಿನಸಿ ಕಿಟ್ ನೀಡುವುದು ಹಾಗೂ ಇತರೆ ನೆರವು ನೀಡುವಲ್ಲಿಮುಂಚೂಣಿಯಲ್ಲಿದ್ದರು. ಈ ಬಾರಿಯೂ ನಟಿ ರಾಗಿಣಿ, ಪ್ರಣಿತಾ ಸುಭಾಷ್, ಶ್ರುತಿ ಹರಿಹರನ್, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಮಂದಿ ಕೊರೊನಾ ವಾರಿಯರ್‌ಗಳ ರೀತಿ ಕೆಲಸ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ
ಪ್ರಣಿತಾ, ರಕ್ಷಿತ್ ಶೆಟ್ಟಿ , ರಘು ದೀಕ್ಷಿತ್ ಸೇರಿದಂತೆ ಸಾಕಷ್ಟು ಮಂದಿ ಎಲ್ಲೆಲ್ಲಿ ರೆಮ್‌ಡಿಸಿವಿರ್, ಆಕ್ಸಿಜನ್ ಮತ್ತು ಬೆಡ್‌ಗಳು ಸಿಗುತ್ತವೆ ಎಂಬುದರ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿಶೇರ್ ಮಾಡುತ್ತಿದ್ದಾರೆ. ಈ ಮೂಲಕ ಸೊಂಕಿತರಿಗೆ ಅವರು ನೆರವಾಗುತ್ತಿದ್ದಾರೆ. ರಘು ದೀಕ್ಷಿತ್ ಅವರು ತಮ್ಮ ರೆಕಾರ್ಡಿಂಗ್ ಸ್ಟುಡಿಯೋವನ್ನು ವಾರ್ ರೂಮ್ ಮಾಡಿಕೊಂಡಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು.
ರೋಡಿಗಿಳಿದ ರಾಗಿಣಿ
ಕಳೆದ ಬಾರಿಯಂತೆ ಈ ಬಾರಿಯೂ ನಟಿ ರಾಗಿಣಿ ರಸ್ತೆಗಿಳಿದು, ಕೋವಿಡ್ ವಾರಿಯರ್‌ಗಳಿಗೆ ಸಹಾಯ ಮಾಡುತ್ತಿದ್ದಾರೆ. ಸ್ಮಶಾನದ ಸಿಬ್ಬಂದಿಗೆ ಫುಡ್ ಕಿಟ್, ಪೊಲೀಸರು ಮತ್ತು ಸ್ವಯಂಸೇವಕರಿಗೆ, ರೈಲುಗಳಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಆಹಾರದ ಪೊಟ್ಟಣಗಳನ್ನು ತಮ್ಮ ಸ್ವಯಂ ಸೇವಾ ಸಂಸ್ಥೆ ಮೂಲಕ ವಿತರಣೆ ಮಾಡುತ್ತಿದ್ದಾರೆ.
ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಸೇರಿಕೊಂಡು 'ಭುವನಂ ಕೋವಿಡ್ ಹೆಲ್ಪ್ 24/7' ಎಂಬ ಟ್ರಸ್ಟ್ ಆರಂಭಿಸಿ ಆ ಮೂಲಕ ಸೋಂಕಿತರ ಸಹಾಯಕ್ಕೆ ನಿಂತಿದ್ದಾರೆ. ಇನ್ನು ಬಾಲಿವುಡ್ ನಟ ಸೋನು ಸೂದ್ ಯಲಹಂಕದ ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಕಳಿಸಿಕೊಟ್ಟಿದ್ದರು.
ಈ ಬಾರಿ ಹೊರಗೆ ಓಡಾಡುವುದು ಕಷ್ಟವಾಗಿರುವುದರಿಂದ ಸಾಕಷ್ಟು ಜನ ಸಿಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿಆಸ್ಪತ್ರೆಗಳ ವಿವರ, ಸೋಂಕಿತರು ಯಾವ ನಂಬರ್‌ಗಳನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಹಂಚಿಕೊಳ್ಳುವ ಮೂಲಕ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.