![](https://vijaykarnataka.com/photo/84866021/photo-84866021.jpg)
'ರಾಮಾ ರಾಮಾ ರೇ' ಮತ್ತು 'ಒಂದಲ್ಲಾ ಎರಡಲ್ಲಾ' ಸಿನಿಮಾಗಳಿಂದ ಗುರುತಿಸಿಕೊಂಡ ನಿರ್ದೇಶಕ ಡಿ. ಸತ್ಯಪ್ರಕಾಶ್. ಈ ಸಿನಿಮಾಗಳಿಗಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ. ಇದೀಗ ಅವರ 'ಮ್ಯಾನ್ ಆಫ್ ದಿ ಮ್ಯಾಚ್' ಎಂಬ ಮತ್ತೊಂದು ಸಿನಿಮಾವನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ತೆರೆಗೆ ಸಿದ್ಧವಾಗುತ್ತಿರುವ ಈ ಸಿನಿಮಾ ತಂಡದಿಂದ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ, 'ಮ್ಯಾನ್ ಆಫ್ ದಿ ಮ್ಯಾಚ್'ನಲ್ಲಿ ಸಂಗೀತ ನಿರ್ದೇಶಕ, ಗಾಯಕ ಕಾಣಿಸಿಕೊಂಡಿದ್ದಾರೆ.
ಶೂಟಿಂಗ್ ಮುಗಿಸಿರುವ ''ಧರ್ಮಣ್ಣ ಕಡೂರು ಮತ್ತು ನಟರಾಜ್ ಸೇರಿದಂತೆ ಬಹುತೇಕ ಹೊಸ ಕಲಾವಿದರು ನಟಿಸಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಸಿನಿಮಾದಲ್ಲಿ ವಾಸುಕಿ ವೈಭವ್ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಒಂದು ಹಾಡಿನಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ವಿಶೇಷವೆಂದರೆ, ಈ ಹಾಡನ್ನು ಸ್ವತಃ ಸತ್ಯಪ್ರಕಾಶ್ ಬರೆದಿದ್ದಾರೆ. ಅವರೊಂದಿಗೆ ಯೋಗರಾಜ್ ಭಟ್ ಕೂಡ ಕೈ ಜೋಡಿಸಿದ್ದಾರೆ. ಹೀಗೆ ನಿರ್ದೇಶಕರಿಬ್ಬರು ಜಂಟಿಯಾಗಿ ರಚಿಸಿದ ಗೀತೆಗೆ ಸಂಗೀತ ನಿರ್ದೇಶನ ಮಾಡಿವುರುವುದು ವಾಸುಕಿ ಅವರೇ. ಅಂದಹಾಗೆ, ಈ ಹಾಡು ಇಡೀ ಸಿನಿಮಾದ ಕಥಾವಸ್ತುವನ್ನು ತಿಳಿಸುವ ರೀತಿಯಲ್ಲಿದೆಯಂತೆ.
'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ, ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಚಲನಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ. ಈ ಸಿನಿಮಾಗೆ ಕೈ ಜೋಡಿಸಿದ್ದರ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಸತ್ಯಪ್ರಕಾಶ್, '2020ರಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ನಾನು ನಿರ್ದೇಶನ ಮಾಡುವ ಬಗ್ಗೆ ಸಿದ್ಧತೆ ನಡೆದಿತ್ತು. ಸ್ಕ್ರಿಪ್ಟ್ ಫೈನಲ್ ಆಗುವ ಹೊತ್ತಿಗೆ ಲಾಕ್ಡೌನ್ ಆಯಿತು. ಅದರಿಂದಾಗಿ ಅಪ್ಪು ಅವರ ಎಲ್ಲಾ ಪ್ರಾಜೆಕ್ಟ್ಗಳು ಮುಂದಕ್ಕೆ ಹೋದವು. ಆ ಸಮಯದಲ್ಲಿ ನಾನು 'ಮ್ಯಾನ್ ಆಫ್ ದಿ ಮ್ಯಾಚ್' ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದೆ. ಇದನ್ನು ಅವರಿಗೆ ಹೇಳಿದಾಗ ಅವರು ಖುಷಿಯಾಗಿ, ಈ ಸಿನಿಮಾ ಆರಂಭಿಸಿ. ನಾನು ಇರುತ್ತೇನೆ, ನಮ್ಮ ಬ್ಯಾನರ್ನಿಂದಲೇ ಮಾಡೋಣ ಎಂದು ಹೇಳಿದ್ದರು. ಅದರಂತೆ ಕೆಲಸ ಆರಂಭವಾಯಿತು. ನಮ್ಮ ಜತೆಗೆ ಮಂಜುನಾಥ್ ದಾಸೇಗೌಡರೂ ಇರುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ.
'ಸತ್ಯಪ್ರಕಾಶ್ ಜತೆಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಸಿನಿಮಾ ಆರಂಭವಾದಾಗಿನಿಂದಲೂ ನಾನು ಚಿತ್ರತಂಡದ ಜತೆ ಇದ್ದೇನೆ. ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಬಹಳ ಒಳ್ಳೆಯ ಕಾನ್ಸೆಪ್ಟ್. ಇದರ ಕಥೆಯಲ್ಲಿ ಹೊಸತನವಿದೆ. ಸತ್ಯಪ್ರಕಾಶ್ ಜತೆಗೆ ಕೆಲಸ ಮಾಡಬೇಕು ಎಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈಗ ಈ ಸಿನಿಮಾ ಮೂಲಕ ಅದು ಈಡೇರುತ್ತಿದೆ' ಎಂದು ಪುನೀತ್ ಈ ಹಿಂದೆಯೇ ಹೇಳಿಕೊಂಡಿದ್ದರು. 50ಕ್ಕೂ ಅಧಿಕ ಹೊಸ ಪ್ರತಿಭೆಗಳು 'ಮ್ಯಾನ್ ಆಫ್ ದಿ ಮ್ಯಾಚ್'ನಲ್ಲಿ ಬಣ್ಣ ಹಚ್ಚಿದ್ದಾರೆ. ಲವಿತ್ ಮತ್ತು ಮದನ್ ಛಾಯಾಗ್ರಹಣ ಮಾಡುತ್ತಿದ್ದು, ಪದ್ಮನಾಭ್ ಭಟ್, ಸತ್ಯಪ್ರಕಾಶ್, ನಾಗೇಂದ್ರ ಎಚ್.ಎಸ್., ಸುಂದರ್ ವೀಣಾ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಸ್ಕ್ರಿಪ್ಟ್ ಕೂಡ ಬರೆದಿದ್ದಾರೆ.