Sumanth: ಅಕ್ಕಿನೇನಿ ಕುಟುಂಬದ ನಟ ಸುಮಂತ್‌ಗೆ 2ನೇ ಮದುವೆ ವದಂತಿ? ಅಸಲಿ ಸತ್ಯ ಇಲ್ಲಿದೆ!

ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ನಟ ಸುಮಂತ್ ಅವರ ಎರಡನೇ ಮದುವೆ ಸುದ್ದಿ ಬಗ್ಗೆ ಟಾಲಿವುಡ್‌ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಸ್ವತಃ ಸುಮಂತ್ ಈಗ ಸ್ಪಷ್ಟನೆ ನೀಡಿದ್ದಾರೆ.

Sumanth: ಅಕ್ಕಿನೇನಿ ಕುಟುಂಬದ ನಟ ಸುಮಂತ್‌ಗೆ 2ನೇ ಮದುವೆ ವದಂತಿ? ಅಸಲಿ ಸತ್ಯ ಇಲ್ಲಿದೆ!
Linkup
ಲೆಜೆಂಡರಿ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ಅಕ್ಕಿನೇನಿ 2ನೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಅದರಲ್ಲೂ ಕಾಂಟ್ರವರ್ಸಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರು ಈ ವಿಚಾರದ ಬಗ್ಗೆ ಟ್ವೀಟ್ ಮಾಡಿದ ಮೇಲಂತೂ ಅದು ಇನ್ನಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ, ಸುಮಂತ್ 2ನೇ ಮದುವೆ ಆಗುತ್ತಿರುವುದು ನಿಜವೇ? ಆ ವಧು ಯಾರು? ಇಲ್ಲಿವೆ ಅದೆಲ್ಲದಕ್ಕೂ ಉತ್ತರ. ಇದು ಸಿನಿಮಾ ಮದುವೆ!ಯಾವಾಗ ತಮ್ಮ ಕುರಿತು ಇಂಥದ್ದೊಂದು ಸುದ್ದಿ ಹರಿದಾಡಲು ಆರಂಭವಾಯಿತೋ, ತಕ್ಷಣವೇ ಎಚ್ಚೆತ್ತುಕೊಂಡ ಸುಮಂತ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ಎಲ್ಲರಿಗೂ ಹಾಯ್.. ಈ ಮಧ್ಯೆ ನಾನು ಮತ್ತೊಮ್ಮೆ ಮದುವೆ ಆಗಲಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಾನು ಮತ್ತೆ ಮದುವೆ ಆಗುತ್ತಿಲ್ಲ. ಕಾಕತಾಳೀಯವೆಂದರೆ, ನನ್ನ ಮುಂದಿನ ಸಿನಿಮಾದ ಕಥೆ ವಿಚ್ಛೇದನ ಮತ್ತು ಮರುಮದುವೆ ಬಗ್ಗೆ ಇದೆ. ಆ ಸಿನಿಮಾದ ಶೂಟಿಂಗ್ ವೇಳೆ ಒಂದು ವೆಡ್ಡಿಂಗ್ ಕಾರ್ಡ್ ಫೋಟೋ ಲೀಕ್ ಆಗಿದೆ. ಬಹುಶಃ ಅದೇ ಈ ಎಲ್ಲ ಅಪಾರ್ಥಗಳಿಗೆ ಕಾರಣ ಇರಬಹುದು. ಆ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ಸಿನಿಮಾದ ಬಗ್ಗೆ ನಾನು ತುಂಬ ಎಕ್ಸೈಟ್ ಆಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ. 'ಸತ್ಯಂ', 'ಗೌರಿ', 'ಮಳ್ಳಿ ರಾವಾ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸುಮಂತ್‌ಗೆ 17 ವರ್ಷಗಳ ಹಿಂದೆಯೇ ನಟಿ ಕೀರ್ತಿ ರೆಡ್ಡಿ ಜೊತೆಗೆ ಮದುವೆ ಆಗಿತ್ತು. ಕನ್ನಡದಲ್ಲಿ 'ಸೂಪರ್ ಸ್ಟಾರ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇದೇ ಕೀರ್ತಿ ರೆಡ್ಡಿ. 2004ರಲ್ಲಿ ಸಪ್ತಪದಿ ತುಳಿದ ಈ ಜೋಡಿ, 2006ರಲ್ಲಿ ಬೇರೆ ಆಯಿತು. ಎರಡೇ ವರ್ಷಕ್ಕೆ ತಮ್ಮ ಮದುವೆ ಮುರಿದುಬಿದ್ದ ಮೇಲೆ ಸುಮಂತ್ ಮತ್ತೊಂದು ಮದುವೆ ಆಗಿಲ್ಲ. 15 ವರ್ಷಗಳಿಂದ ಅವರು ಒಂಟಿಯಾಗಿಯೇ ಇದ್ದಾರೆ. ಸುಮಂತ್‌ ಮದುವೆ ವದಂತಿಗೆ ಆರ್‌ಜಿವಿ ಹೇಳಿದ್ದೇನು?ಇನ್ನು, ಸುಮಂತ್ ಅವರ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ವದಂತಿ ಕೇಳಿಬಂದ ಕೂಡಲೇ ಆರ್‌ಜಿವಿ ಟ್ವೀಟ್ ಮಾಡಿದ್ದರು. 'ಒಂದು ಸಲ ಮದುವೆಯಾಗಿದ್ದರೂ ನಿನಗಿನ್ನೂ ಬುದ್ದಿ ಬಂದಿಲ್ವಾ ಸುಮಂತ್? ನಿನ್ನ ಕರ್ಮ. ಆ ಪವಿತ್ರ ಕರ್ಮ. ಅನುಭವಿಸಿ..' ಎಂದು ಹೇಳಿದ್ದರು . ಈಚೆಗಷ್ಟೇ ಆಮೀರ್ ಖಾನ್ ಮತ್ತು ಕಿರಣ್ ರಾವ್ ಬೇರೆಯಾದಾಗ, 'ಮದುವೆಗಿಂತ ವಿಚ್ಛೇದನವನ್ನು ಹೆಚ್ಚು ಸಂಭ್ರಮಿಸಬೇಕು' ಎಂದು ಹೇಳಿಕೆ ನೀಡಿದ್ದರು ಆರ್‌ಜಿವಿ!