ದೇಶಾದ್ಯಂತ 'ತೌಕ್ತೆ' ಆರ್ಭಟ: ತೀವ್ರ ಹಾನಿ ಎಚ್ಚರಿಕೆ, ಕೋವಿಡ್ ರೋಗಿಗಳ ಸ್ಥಳಾಂತರ

ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ತೌಕ್ತೆ ಚಂಡಮಾರುತದ ತೀವ್ರತೆ ಪರಿಣಾಮ ಉಂಟಾಗಿದೆ. ಚಂಡಮಾರುತ ಸೋಮವಾರ ಸಂಜೆ ಗುಜರಾತ್ ಕರಾವಳಿ ಅಪ್ಪಳಿಸುವ ನಿರೀಕ್ಷೆಯಿದೆ. ಕೋವಿಡ್ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ದೇಶಾದ್ಯಂತ 'ತೌಕ್ತೆ' ಆರ್ಭಟ: ತೀವ್ರ ಹಾನಿ ಎಚ್ಚರಿಕೆ, ಕೋವಿಡ್ ರೋಗಿಗಳ ಸ್ಥಳಾಂತರ
Linkup
ಮುಂಬಯಿ: ದೇಶದ ಬಹುತೇಕ ಭಾಗಗಳಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಮುಂದುವರಿದಿದೆ. ಲಕ್ಷಾಂತರ ಮಂದಿ ಸಿಡಿಲು-ಗುಡುಗು ಸಹಿತ , ಬಿರುಗಾಳಿಯಿಂದ ಕಂಗಾಲಾಗಿದ್ದಾರೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ರೋಗಿಗಳು ಸೇರಿದಂತೆ ಸಾವಿರಾರು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ತೌಕ್ತೆ ಚಂಡಮಾರುತವು ಗುಜರಾತ್ ಕರಾವಳಿಯನ್ನು ಸೋಮವಾರ ಸಂಜೆ ಅಪ್ಪಳಿಸಲಿದ್ದು, ಗಂಟೆಗೆ 175 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಪೂರ್ವ-ಕೇಂದ್ರ ಅರಬ್ಬಿ ಸಮುದ್ರದಲ್ಲಿ ತೀವ್ರ ಚಂಡಮಾರುತದ ಬಿರುಗಾಳಿ ತೌಕ್ತೆ ಈಗ ಅತಿ ಗಂಭೀರ ಚಂಡಮಾರುತದ ಸ್ವರೂಪವಾಗಿ ಬದಲಾಗಿದೆ ಎಂದು ಇಲಾಖೆ ಭಾನುವಾರ ಬೆಳಿಗ್ಗೆ ತಿಳಿಸಿತ್ತು. ಇದು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಮೇ 17ರ ಸಂಜೆ ಗುಜರಾಥ್ ಕರಾವಳಿಯನ್ನು ತಲುಪುವ ಸಾಧ್ಯತೆ ಇದೆ. ಮರುದಿನ ಬೆಳಿಗ್ಗೆ ಪೋರ್‌ಬಂದರ್ ಮತ್ತು ಭಾವ್ನಗರ್ ಜಿಲ್ಲೆಯ ಮಹುವಾಗಳ ನಡುವೆ ಅಪ್ಪಳಿಸಲಿದೆ. ಭಾನುವಾರ ಮತ್ತು ಸೋಮವಾರ ಮಹಾರಾಷ್ಟ್ರ ಹಾಗೂ ಗೋವಾ ಕರಾವಳಿಗಳಲ್ಲಿ 60-70 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಸಮುದ್ರ ತೀರಗಳಲ್ಲಿ 2-3 ಮೀಟರ್‌ ಎತ್ತರದವರೆಗೂ ಅಲೆಗಳು ಏಳುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತೌಕ್ತೆ ಚಂಡಮಾರುತವು ಮನೆಗಳಿಗೆ ಹಾನಿ ಮಾಡುವ ಸಂಭವವಿದೆ. ಪ್ರವಾಹ ಪರಿಸ್ಥಿತಿ ಹೆಚ್ಚಾಗಿ ರೈಲ್ವೆ ಸೇವೆಗಳಿಗೆ ತೀವ್ರ ಹಾನಿಯಾಗುವ ಅಪಾಯವಿದೆ. ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಇರುವುದರಿಂದ ಬಹುತೇಕ ಕಡೆ ವಿದ್ಯುತ್ ಅಭಾವ ಉಂಟಾಗಬಹುದು. ಇದರಿಂದ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಂಪರ್ಕದಲ್ಲಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ 73 ಜಿಲ್ಲೆಗಳಿಗೆ ಚಂಡಮಾರುತದಿಂದ ಹಾನಿಯಾಗಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ. ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿನ ರೋಗಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆಸ್ಪತ್ರೆಗಳಿಗೆ ವಿದ್ಯುತ್ ಮತ್ತು ಆಕ್ಸಿಜನ್ ಸಮಸ್ಯೆ ಉಂಟಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿ ತಿಳಿಸಿದೆ.