ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಸರ್ಕಾರಿ ಕಚೇರಿಗಳು ಮಾರ್ಕೆಟ್ ಆಗಿಬಿಡುತ್ತವೆ!: ಟಿಕಾಯತ್ ಎಚ್ಚರಿಕೆ

ಪ್ರತಿಭಟನಾ ನಿರತ ರೈತರನ್ನು ತೆರವುಗೊಳಿಸುವ ಸಂಬಂಧ ರಸ್ತೆಗಳಿಗೆ ಅಡ್ಡಲಾಗಿ ಹಾಕಿದ್ದ ಗೋಡೆಗಳು ಹಾಗೂ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಿದರೆ ಪರಿಣಾಮ ನೆಟ್ಟಗಿರೊಲ್ಲ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಸರ್ಕಾರಿ ಕಚೇರಿಗಳು ಮಾರ್ಕೆಟ್ ಆಗಿಬಿಡುತ್ತವೆ!: ಟಿಕಾಯತ್ ಎಚ್ಚರಿಕೆ
Linkup
ಹೊಸದಿಲ್ಲಿ: ಗಡಿ ಭಾಗದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿದರೆ ದೇಶದ ಎಲ್ಲೆಡೆ ಇರುವ ಸರ್ಕಾರಿ ಕಚೇರಿಗಳು ಮಾರುಕಟ್ಟೆಗಳಾಗಿ ಬದಲಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. 'ಗಡಿಗಳಲ್ಲಿರುವ ರೈತರನ್ನು ಬಲವಂತವಾಗಿ ತೆರವುಗೊಳಿಸಲು ಯಾವುದೇ ಪ್ರಯತ್ನ ನಡೆದರೆ, ಅವರು ದೇಶದಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಧಾನ್ಯ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲಿದ್ದಾರೆ' ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖ್ಯಸ್ಥರಾಗಿರುವ ರಾಕೇಶ್ ಟಿಕಾಯತ್, ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಘಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಬೇಲಿಗಳನ್ನು ದಿಲ್ಲಿ ಪೊಲೀಸರು ತೆರವುಗೊಳಿಸಿದ ಎರಡು ದಿನಗಳ ಬಳಿಕ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಈ ಮಾರ್ಗವನ್ನು ಕೃಷಿ ಕಾಯ್ದೆಗಳ ವಿರುದ್ಧ ಆರಂಭವಾದ ಬಳಿಕ ಕಳೆದ 11 ತಿಂಗಳಿನಿಂದಲೂ ಮುಚ್ಚಲಾಗಿದೆ. ಇದರಿಂದ ತಮ್ಮ ಪ್ರಯಾಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸುತ್ತಲೇ ಬಂದಿದ್ದಾರೆ. ವಾಹನ ಸವಾರರು ಹಾಗೂ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಲು ಅಧಿಕಾರಿಗಳೇ ಕಾರಣವೇ ಹೊರತು ಪ್ರತಿಭಟನಾ ನಿರತ ರೈತರಲ್ಲ ಎಂದು ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಟಿಕ್ರಿ ಗಡಿಯಲ್ಲಿನ ಈ ಮಾರ್ಗವನ್ನು ತೆರೆಯುವುದರಿಂದ ಬಹದುರ್ಗಾ ಮತ್ತು ದಿಲ್ಲಿಯ ನಡುವೆ ಓಡಾಡುವ ಸಾವಿರಾರು ಜನರಿಗೆ ಸಹಾಯವಾಗಲಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ದಿಲ್ಲಿ ಹಾಗೂ ಹರ್ಯಾಣದ ಮೂಲಕ ರಾಜಸ್ಥಾನಕ್ಕೆ ತೆರಳುವವರಿಗೆ ಕೂಡ ಅನುಕೂಲವಾಗಲಿದೆ. ಟಿಕ್ರಿ, ಸಿಂಘು ಹಾಗೂ ಘಾಜಿಪುರ- ಹೀಗೆ ದಿಲ್ಲಿ ಸುತ್ತಲಿನ ಮೂರು ಗಡಿಗಳಲ್ಲಿ ಸಾವಿರಾರು 2020ರ ನವೆಂಬರ್ 26ರಿಂದಲೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮೂರು ಕೃಷಿ ಕಾಯ್ದೆಗಳು ತಮ್ಮ ಹಿತಾಸಕ್ತಿಗಳಿಗೆ ಅಪಾಯಕಾರಿಯಾಗಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಇವುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇವು ರೈತರ ಪರವಾಗಿರುವ ಕಾಯ್ದೆಗಳಾಗಿವೆ ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಕಾಯ್ದೆಗಳನ್ನು ರದ್ದುಗೊಳಿಸಲು ನಿರಾಕರಿಸುತ್ತಲೇ ಬಂದಿದೆ. ರೈತ ಸಂಘಟನೆಗಳ ಒಕ್ಕೂಟಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು ಸಚಿವರೊಂದಿಗೆ ಈ ಸುಮಾರು ಒಂದು ವರ್ಷದಲ್ಲಿ ಅನೇಕ ಸುತ್ತಿನ ಪ್ರತಿಭಟನೆಗಳು ನಡೆದಿವೆ. ಆದರೆ ಯಾವ ಸಭೆಯಲ್ಲಿಯೂ ಒಮ್ಮತದ ನಿರ್ಣಯ ತೆಗೆದುಕೊಳ್ಳುವುದು ಈವರೆಗೂ ಸಾಧ್ಯವಾಗಿಲ್ಲ. ಈ ನಡುವೆ ರೈತ ಒಕ್ಕೂಟಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.