ಚಿತ್ರಾ ಸಂತೋಷ್
ಪಂಡಿತ್ ಭೀಮಸೇನ ಜೋಷಿ ಅವರ ಕಂಠದಿಂದ ಹಾಡು ಕೇಳಬೇಕೆಂಬ ಉತ್ಕಟ ಆಸೆ ಯಾರಿಗಿಲ್ಲ ಹೇಳಿ? ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರು ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಅದೊಂದು ಬಾರಿ ಅವರಿಬ್ಬರ ಮುಖಾಮುಖಿಯಾದಾಗ ನಡೆದ ವಿದ್ಯಮಾನ ಅತ್ಯಂತ ಕುತೂಹಲಕಾರಿಯಾಗಿದೆ.
‘ಸಂಧ್ಯಾರಾಗ’ ಚಿತ್ರಕ್ಕೆ ರಾಗ ಸಂಯೋಜನೆ ನಡೆಯುತ್ತಿದ್ದ ಸಮಯ ಅದು. ಡಾ.ರಾಜ್ ನಾಯಕ. ಎ.ಸಿ. ನರಸಿಂಹ ಮೂರ್ತಿ ಮತ್ತು ಎಸ್.ಕೆ.ಭಗವಾನ್ ಚಿತ್ರದ ನಿರ್ದೇಶಕರು. ಬಾಲಮುರಳೀಕೃಷ್ಣ ಮತ್ತು ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜನೆ. ಪಂ. ಭೀಮಸೇನ ಜೋಷಿ, ಬಾಲಮುರಳೀಕೃಷ್ಣ, ಎಸ್.ಜಾನಕಿ, ಬೀಚಿ, ಅನಕೃ (ಸಂಧ್ಯಾರಾಗ ಕಾದಂಬರಿಯ ಕರ್ತೃ) ಎಲ್ಲರೂ ಜೊತೆಗಿದ್ದರು. ಆಗಲೇ ಡಾ.ರಾಜ್ ಅವರ ಪ್ರವೇಶ. ಬಂದವರೇ ಜೋಷಿ ಮತ್ತು ಬಾಲಮುರಳಿ ಕೃಷ್ಣ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಜೋಷಿಯವರಿಗೂ ರಾಜ್ ಅವರನ್ನು ನೋಡಿ ಸಂಭ್ರಮ. ತಕ್ಷಣ ರಾಜ್ ಅವರು, ‘ಜೋಷಿಯವರೇ, ನನ್ನದೊಂದು ಪುಟ್ಟ ಆಸೆಯಿದೆ, ನೆರವೇರಿಸಬಹುದೇ?’ ಎಂದು ಕೇಳಿದರು. ಆಗ ಜೋಷಿಯವರು, ‘ನಿಮ್ಮ ಆಸೆ ಪೂರೈಸುವುದು ನನ್ನ ಕರ್ತವ್ಯ, ಹೇಳಿ ಅದೇನೆಂದು’ ಎಂದರು. ‘ಆ ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡನ್ನು ಒಂದು ಬಾರಿ ಹಾಡ್ತೀರಾ? ಬಹಳ ದಿನಗಳಿಂದ ನಿಮ್ಮೆದುರು ಕುಳಿತು ಕೇಳಬೇಕೆಂಬ ಆಸೆ ನನ್ನದು’ ಎಂದರು. ತಕ್ಷಣ ಬಿಭಾಸ್ ರಾಗದಲ್ಲಿ ಜೋಷಿ ಹಾಡಲು ಶುರುಮಾಡಿದರೆ, ಡಾ. ರಾಜ್ ಕಣ್ಮುಚ್ಚಿ ಧ್ಯಾನಸ್ಥರಂತೆ ಹಾಡನ್ನು ಆನಂದಿಸಿದರು. ಮತ್ತೆ ಜೋಷಿಯವರು ‘ತೃಪ್ತಿಯಾಯಿತಾ? ಬೇರೆ ಏನಾದರೂ ಹಾಡಬೇಕಾ?’ ಎಂದು ಕೇಳಿದಾಗ ರಾಜ್, ‘ಇಷ್ಟೇ ಸಾಕು. ಇದು ಬಹಳ ದಿನದ ಆಸೆಯಾಗಿತ್ತು. ಜೀವನ ಸಾರ್ಥಕವಾಯಿತು’ ಎನ್ನುತ್ತಾ ಮತ್ತೊಮ್ಮೆ ಜೋಷಿ ಕಾಲಿಗೆರಗಿದರಂತೆ. ಈ ಘಟನೆಯನ್ನು ಭಗವಾನ್ ಚಿತ್ರಕಥೆಯಂತೆ ವಿವರಿಸುತ್ತಾರೆ.
ಜೋಷಿ ಅವರು ‘ಸಂಧ್ಯಾರಾಗ’ ಚಿತ್ರದ ಜನಪ್ರಿಯ ಗೀತೆ ‘ನಂಬಿದೆ ನಿನ್ನ ನಾದ ದೇವತೆ’ ಸೇರಿದಂತೆ ಐದು ಗೀತೆಗಳನ್ನು ಹಾಡಿದ್ದಾರೆ. ನಂತರ ಶಂಕರ್‌ನಾಗ್ ನಿರ್ದೇಶನದ ‘ನೋಡಿ ಸ್ವಾಮೀ ನಾವಿರೋದೇ ಹೀಗೆ’ (1983) ಚಿತ್ರದಲ್ಲಿನ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಮತ್ತು ಅನಂತ್‌ನಾಗ್ ನಟನೆಯ ಟಿ.ಎಸ್.ನಾಗಾಭರಣ ನಿರ್ದೇಶನದ ‘ಮಕ್ಕಳಿರಲವ್ವ ಮನೆತುಂಬಾ’ (1984) ಚಿತ್ರದಲ್ಲಿ ‘ಯಾದವ ನೀ ಬಾ’ ಗೀತೆ ಹಾಡಿದ್ದರು. ಭಾಗ್ಯದ ಲಕ್ಷ್ಮೀ ಬಾರಮ್ಮಾ ರೆಕಾರ್ಡಿಂಗ್ ನಡೆಯುತ್ತಿದ್ದಾಗ ಸ್ವತಃ ಶಂಕರ್‌ನಾಗ್ ಕಣ್ಣೀರಾಗಿದ್ದರಂತೆ! ಜೋಷಿ ಅವರಿಗೆ ಚಿತ್ರರಂಗದಲಿಯ್ಲೂ ದೊಡ್ಡ ಹೆಸರಿತ್ತು. 'ಬಸಂತ್ ಬಹಾರ್’ (1956) ಚಿತ್ರದಲ್ಲಿನ ‘ಕೇತಕಿ ಗುಲಾಬ್ ಜುಹೀ’ ಹಾಡಿನ ಮೂಲಕ ಹಿಂದಿಯಲ್ಲಿ ಅವರ ಸಿನಿಗಾಯನ ಯಾನ ಶುರುವಾಗಿತ್ತು. ತರಾಸು ಅವರ ‘ಹಂಸಗೀತೆ’ ಕಾದಂಬರಿಯನ್ನಾಧರಿಸಿದ ಚಿತ್ರವದು. ರಾಜನ ಆಸ್ಥಾನದಲ್ಲಿ ಗವಾಯಿ-ನಾಯಕನ ಪಾತ್ರಗಳಿಗೆ ಕ್ರಮವಾಗಿ ಜೋಷಿ-ಮನ್ನಾ ಡೇ ಜುಗಲಬಂದಿ. ಗವಾಯಿಯನ್ನು ಸೋಲಿಸಿ ನಾಯಕ ಗೆಲ್ಲುವ ದೃಶ್ಯ. ಇದನ್ನು ತಿಳಿದ ಮನ್ನಾ ಡೇ, ‘ಜೋಷಿಯವರನ್ನು ಚಿತ್ರದಲ್ಲಿಯೂ ಸೋಲಿಸುವುದು ನನ್ನ ಮನೋಧರ್ಮಕ್ಕೆ ಒಪ್ಪದು’ ಎಂದು ಹೇಳಿ ತಿಂಗಳುಗಟ್ಟಲೆ ನಾಪತ್ತೆಯಾದರಂತೆ. ಕೊನೆಗೆ ಜೋಷಿಯವರೇ, ‘ನೋಡಿ, ಇದು ಸಿನಿಮಾ, ನಾವಿಬ್ಬರೂ ರಿಯಾಜ್ ಮಾಡುತ್ತಿದ್ದೇವೆಂದುಕೊಂಡು ಹಾಡೋಣ’ ಎಂದು ಹೇಳಿ ಒಪ್ಪಿಸಿದ್ದರು! ‘ಬೀರ್‌ಬಲ್ ಮೈ ಬ್ರದರ್’ ಚಿತ್ರಕ್ಕೆ ಪಂ. ಜಸ್‌ರಾಜ್ ಜೊತೆಗೂಡಿ ಹಾಡಿದ್ದರು ಜೋಷಿ. ‘ಆಂಖೆ’ ಚಿತ್ರದಲ್ಲಿನ ಗಾಯನಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಪುರಸ್ಕಾರವೂ ಬಂದಿತ್ತು. ಬಂಗಾಳಿಯ ‘ತಾನ್‌ಸೇನ್’ ಚಿತ್ರದಲ್ಲಿ ಜೋಷಿ ದನಿ ಜನಪ್ರಿಯ. ಆವಾಗಲೇ ಪುಣೆಯಲ್ಲಿದ್ದ ಜೋಷಿಯವರಿಗೆ ಮರಾಠಿ ಚಿತ್ರರಂಗವು ಅಗಾಧ ಅವಕಾಶಗಳನ್ನು ನೀಡಿತ್ತು.
‘ನಂಬಿದೆ ನಿನ್ನ ನಾದದೇವತೆ’ ಗೀತೆಯನ್ನು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಮತ್ತು ಸಿನಿಮಾ ಶೈಲಿಯಲ್ಲಿ ಹಾಡಿಸಬೇಕೆಂಬ ಆಸೆಯಿತ್ತು. ಹಾಗಾಗಿ, ಕರ್ನಾಟಕ ಸಂಗೀತದಲ್ಲಿ ಬಾಲಮುರಳೀಕೃಷ್ಣ, ಹಿಂದೂಸ್ತಾನಿಗೆ ಜೋಷಿಯವರು ಮತ್ತು ಸಿನಿಮಾ ಶೈಲಿಗೆ ಜಾನಕಮ್ಮನಿಂದ ಹಾಡಿಸಲು ನಿರ್ಧರಿಸಲಾಯಿತು. ಜೋಷಿಯವರಿಗೆ ಹೇಳಿದ ತಕ್ಷಣ ‘ನಮ್ಮ ಕನ್ನಡಕ್ಕೆ ಹಾಡುವುದು ಹೆಮ್ಮೆಯ ವಿಷಯ’ ಎಂದು ಬಂದೇಬಿಟ್ಟರು. ಒಂದು ಹಾಡೆಂದು ಬಂದವರಿಗೆ ಐದು ಗೀತೆ ನೀಡಿದರೂ ಬೇಸರಿಸಿಕೊಳ್ಳಲಿಲ್ಲ' ಎಂದು ನಿರ್ದೇಶಕ ಎಸ್.ಕೆ.ಭಗವಾನ್ ಹೇಳಿದರು.
'ಶಾಸ್ತ್ರೀಯ ಸಂಗೀತ ತಂದೆಯವರ ಉಸಿರಾಗಿತ್ತು. ಆದರೆ, ಸಿನಿಮಾದಲ್ಲಿ ಹಾಡಲೂ ಬಹಳ ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದರು. ಸಿನಿರಂಗದ ಜನಪ್ರಿಯರು, ಚಿತ್ರಸಾಹಿತಿಗಳು ಅವರ ಬಳಗದಲ್ಲಿದ್ದರು. ಮರಾಠಿಯ ಗುಲಾಚ ಗಣಪತಿ, ಬೋಲೆ ಬಾಬಡಿ, ಪಂಢರಿಚಿ ವಾರಿ, ಸ್ವಯಂವರ ಝಾಲೆ ಸೀತೆ, ಪತಿವ್ರತ, ಶೇರಾ ಸವ್ವಾಸೇರ್ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಹಾಡಿದ್ದಾರೆ' ಎಂದು ಭೀಮಸೇನ ಜೋಷಿಯವರ ಪುತ್ರಿ ಶುಭದಾ ಮುಳಗುಂದ ಪುಣೆ ತಿಳಿಸಿದರು.