Omicron Variant: ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಈ ಸಂದರ್ಭದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು, ಏನೆಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

Omicron Variant: ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ
Linkup
ಬೆಂಗಳೂರು: ರಾಜ್ಯದಲ್ಲಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಏನು ಪಾಲನೆ ಮಾಡಬೇಕು,‌ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಶುಕ್ರವಾರದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು. ದಿಲ್ಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಶುಕ್ರವಾರ ಮರಳಿದಾಗ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರಲ್ಲಿ ಓಮಿಕ್ರಾನ್ ತಳಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಸೂಚನೆ ನೀಡಿದ್ದೇನೆ. ಅವರು ಯಾರ ಸಂಪರ್ಕಕ್ಕೆ ಬಂದಿದ್ದಾರೆ, ಪ್ರಾಥಮಿಕ ಹಾಗೂ ಇತರ ಸ್ವರೂಪದ ಸಂಪರ್ಕದಲ್ಲಿ ಇದ್ದವರ ಬಗ್ಗೆ ಮಾಹಿತಿ‌ ಕಲೆ ಹಾಕಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸೋಂಕು ಪತ್ತೆಯಾದವರ ಪೈಕಿ ಒಬ್ಬರು ವಿದೇಶದಿಂದ ಬಂದವರು, ಮತ್ತೊಬ್ಬರು ಸ್ಥಳೀಯರು. ಈ ಬಗ್ಗೆ ತಜ್ಞರು ಏನು‌ ಹೇಳುತ್ತಾರೆ, ‌ಇದನ್ನು ಯಾವ ರೀತಿ ನಿಭಾಯಿಸಬೇಕು ಎಂಬ ನಿಟ್ಟಿನಲ್ಲೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಈ ಸೋಂಕು ವೈದ್ಯಕೀಯವಾಗಿ ಯಾವ ರೀತಿ ಇದೆ, ಸೋಂಕು ನಿಯಂತ್ರಣಕ್ಕೆ ಬೇರೆ ಬೇರೆ ದೇಶಗಳಲ್ಲಿ ಏನು ಮಾರ್ಗಸೂಚಿ ಪಾಲನೆ ಮಾಡುತ್ತಾರೆ? ಯಾವ ರೀತಿಯ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಿದ್ದಾರೆ ಹಾಗೂ ನಾವೇನು ಮಾಡಬೇಕು ಎಲ್ಲಾ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಭೆ ಕುತೂಹಲ ಮೂಡಿಸಿದೆ. ಸೋಂಕು ತಡೆಗೆ ಮತ್ತೆ ಕಠಿಣ ಕ್ರಮಗಳು ಅಥವಾ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸುವ ನಿರೀಕ್ಷೆ ಇದೆ. ದೇಶದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ತಳಿಯ ಎರಡು ಕೋವಿಡ್ ಪ್ರಕರಣಗಳು ಗುರುವಾರ ದೃಢಪಟ್ಟಿವೆ. ಈ ಎರಡೂ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿರುವುದರಿಂದ ಸಹಜವಾಗಿಯೇ ರಾಜ್ಯ ಸರ್ಕಾರಕ್ಕೆ ಕಳವಳ ಉಂಟುಮಾಡಿದೆ. ಆಫ್ರಿಕಾದಿಂದ ಮರಳಿದ ಇನ್ನೂ ಕೆಲವರು ಅಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.