ಬೆಂಗಳೂರು: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್ ಪ್ರಯುಕ್ತ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರೈತ ಮುಖಂಡರೊಬ್ಬರ ಕಾರು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಕಾಲಿನ ಮೇಲೆ ಹಾದು ಹೋದ ಘಟನೆ ನಡೆದಿದೆ.
ಸುದೈವವಶಾತ್ ಯಾವುದೇ ಅನಾಹುತ ಸಂಭವಿಸದೆ, ಕೂದಲೆಳೆಯ ಅಂತರದಲ್ಲಿ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪಾರಾಗಿದ್ದಾರೆ.
ಕೃಷಿ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಗಳು ಭಾರತ್ ಬಂದ್ ನಡೆಸುತ್ತಿವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರತಿಭಟನೆಯೂ ನಡೆಯುತ್ತಿದೆ. ನಗರದ ಗೊರಗುಂಟೆ ಪಾಳ್ಯ ಜಂಕ್ಷನ್ ನಡೆದ ಪ್ರತಿಭಟನಾ ಸ್ಥಳದಲ್ಲಿ ಈ ಘಟನೆ ನಡೆದಿದೆ.
ಪ್ರತಿಭಟನಾ ನಿರತ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಈ ಅತಾಚುರ್ಯ ನಡೆದಿದ್ದು ಸದ್ಯ ಡಿಸಿಪಿಗೆ ಯಾವುದೇ ಗಾಯವಾಗಿಲ್ಲ. ಈ ಅಚಾತುರ್ಯಕ್ಕೆ ಕಾರಣವಾದ ಕಾರು ಚಾಲಕನನ್ನು ಆರ್ ಎಂ ಸಿ ವಾರ್ಡ್ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡಾ ಉಪಸ್ಥಿತರಿದ್ದರು. ಬಳಿಕ ಅವರು ಕೂಡಾ ಘಟನೆಯಿಂದ ಏನಾದರೂ ಗಾಯ ಆಗಿದೆಯಾ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರಲ್ಲಿ ವಿಚಾರಿಸಿದರು.
ಭಾರತ್ ಬಂದ್ ಗೆ ಬೆಂಗಳೂರಿನಲ್ಲಿ ಸಿಗದ ಬೆಂಬಲ
ಭಾರತ್ ಬಂದ್ ಗೆ ಬೆಂಗಳೂರಿನಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಬಂದ್ ಗೆ ಬೆಂಬಲ ನೀಡುವಂತೆ ರೈತ ಸಂಘಟನೆಗಳು ಬೆಂಬಲ ಕೋರಿದರೂ ಬಹುತೇಕ ಯೂನಿಯನ್ ಗಳು ನೈತಿಕ ಬೆಂಬಲವನ್ನಷ್ಟೇ ನೀಡಿವೆ.
ನಗರದಲ್ಲಿ ಜನ ಜೀವನ ಎಂದಿನಂತೆ ಇದೆ. ಮೆಟ್ರೋ, ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಉಂಟಾಗಿಲ್ಲ. ಶಾಲೆ ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಜ್ಯ ರಾಜಧಾನಿಯಲ್ಲಿ ಹೇಗಿದೆ ಬಂದ್?ಬೆಂಗಳೂರು: ಸಾ.ರಾ.ಗೋವಿಂದು ನೇತೃತ್ವದಲ್ಲಿ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದು, ಮೆಜೆಸ್ಟಿಕ್ನಲ್ಲಿ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಸಂಚಾರ ತಡೆಯಲು ಯತ್ನಿಸಿದ್ದ ಧರಣಿ ನಿರತರನ್ನು ಬಸ್ಗೆ ತುಂಬಿಸಿದ್ದಾರೆ. ಆ ಮೂಲಕ ಬಸ್ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಇನ್ನು ನಾಲ್ಕು ನಿಗಮದ ಸಾರಿಗೆ ನೌಕರರು ಈ ಬಾರಿಯ ಬಂದ್ನಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ ಎಂದಿನಂತೆ ಬೆಂಗಳೂರಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಆರಂಭಗೊಂಡಿದೆ. ಇನ್ನೂ ಆಟೋ, ಓಲಾ ಊಬರ್, ಟ್ಯಾಕ್ಸಿ ರೋಡಿಗಿಳಿದಿವೆ. ಹೋಟೆಲ್ಗಳು ಕೂಡ ಎಂದಿನಂತೆ ಆರಂಭಗೊಂಡಿದೆ. ಆದರೆ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.
ಬಾಗಲಕೋಟೆಯಲ್ಲಿ ತಟ್ಟಿದ ಬಂದ್ ಬಿಸಿ!ಭಾರತ್ ಬಂದ್ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದಲ್ಲಿ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಬೆಳಗ್ಗೆಯಿಂದ ರಾಜ್ಯ ಹೆದ್ದಾರಿ ಬಂದ್ ಮಾಡಿದ ರೈತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಇನ್ನು ವಾಹನಗಳನ್ನು ತಡೆದ ಹಿನ್ನೆಲೆ ವಾಹನಗಳು ಸಾಲುಗಟ್ಟಿ ನಿಂತ ಘಟನೆ ನಡೆಯಿತು. ಇನ್ನು ಬಸ್ ಇಲ್ಲದ ಹಿನ್ನೆಲೆ ಶಾಲೆ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ನಡೆಸಿದರು. ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗಳನ್ನ ಆಟೋದಲ್ಲಿ ರೈತ ಮುಖಂಡರು ಕಳುಹಿಸಿಕೊಟ್ಟರು.
ರಾಮನಗರದಲ್ಲ ಬಂದ್ ಬಿಸಿ ಜೋರು!
ರಾಮನಗರ: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಖಂಡಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ಹಲವು ಸಂಘಟನೆಗಳು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತಪಡಿಸಿವೆ. ಚನ್ನಪಟ್ಟಣದ ಕಾವೇರಿ ಸರ್ಕಲ್ನಲ್ಲಿ ಕಸ್ತೂರಿ
ಜನಪರ ವೇದಿಕೆ, ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಪ್ರತಿಕೃತಿಗೆ ಬೆಂಕಿ ಹಚ್ಚಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರ ಭಾರತದ ರೈತರು ಹಲವು ತಿಂಗಳುಗಳಿಂದ ಕೇಂದ್ರ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಹಲವರು ಪ್ರಾಣವನ್ನು ಕಳೆದುಕೊಂಡಿದ್ದರೆ, ಮತ್ತಷ್ಟು ರೈತರು ಜೈಲಿಗೆ ಹೋಗಿದ್ದಾರೆ. ಹಲವರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡಕಿಡಿಕಾರಿದರು.
ಬೆಳಗಾವಿಯಲ್ಲಿ 40 ಮಂದಿ ಪೊಲೀಸ್ ವಶಕ್ಕೆ!
ಬೆಳಗಾವಿ: ರೈತ ವಿರೋಧಿ ಕಾನೂನು ವಿರುದ್ಧ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಟೊಲ್ ಬಳಿ ಪ್ರತಿಭಟನೆ. ಸೋಮವಾರ ಬೆಳಗಿನ ಜಾವ ಪ್ರತಿಭಟನೆ ನಿರತರನ್ನು ವಶಕ್ಕೆ ಪಡೆದ ಪೊಲೀಸರು. ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು. ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಪ್ರತಿಭಟನೆ ನಿರತ ಸುಮಾರು 40-50 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೋಲ್ ಬಳಿ ಪೊಲೀಸರ ಪಹರೆ ಇದೆ.
ತುಮಕೂರಿಗೆ ತಟ್ಟದ ಬಂದ್ ಬಿಸಿ!
ತುಮಕೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್ ತುಮಕೂರಿಗೆ ಅಷ್ಟೇನು ತಟ್ಟಿಲ್ಲ. ತುಮಕೂರಿನಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಗೊಂಡಿದೆ.
, ಸೇರಿದಂತೆ ಇತರೆಡೆ ಬಸ್ ಗಳು ತೆರಳುತ್ತಿವೆ. ಇನ್ನು ಬಸ್ ನಿಲ್ದಾಣ ಕಡೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ.ಅಲ್ಲದೇ ಭಾರತ್ ಬಂದ್ ನಡುವೆಯೂ ಬಸ್ ಗಳು ರಸ್ತೆಗಿಳಿದಿವೆ. ಇನ್ನು ನಗರದ ಪ್ರಮುಖ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. 9 ಗಂಟೆ ನಂತರ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಹೋಟೆಲ್, ಅಂಗಡಿ, ವ್ಯಾಪಾರ ವಹಿವಾಟು. ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಚಿಕ್ಕಮಗಳೂರಿನಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತ್ ಬಂದ್ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 7 ಗಂಟೆಯಾದ್ರು ಪ್ರತಿಭಟನಾಕಾರರು ಯಾರು ಕೂಡ ಬಂದಿಲ್ಲ. ಬಸ್ ಸಂಚಾರ, ಆಟೋ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಇನ್ನು ಬಂದ್ ಹಿನ್ನೆಲೆ ನಗರದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಯೋ ಸಾಧ್ಯತೆ ಇದೆ.