4 ಲಕ್ಷಕ್ಕೂ ಹೆಚ್ಚು ಭೂ ಮಾಲಿಕರಿಗೆ ಇ-ಪ್ರಾಪರ್ಟಿ ಕಾರ್ಡ್‌ ವಿತರಿಸಿದ ಪ್ರಧಾನಿ ಮೋದಿ

ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನತೆ ಹೊಂದಿರುವ ಭೂಮಿಯ ಕರಾರುವಾಕ್‌ ಮಾಪನವನ್ನು ಮಾಡಿ, ಇ-ಪ್ರಾಪರ್ಟಿ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ.

4 ಲಕ್ಷಕ್ಕೂ ಹೆಚ್ಚು ಭೂ ಮಾಲಿಕರಿಗೆ ಇ-ಪ್ರಾಪರ್ಟಿ ಕಾರ್ಡ್‌ ವಿತರಿಸಿದ ಪ್ರಧಾನಿ ಮೋದಿ
Linkup
ಹೊಸದಿಲ್ಲಿ: ಪ್ರಧಾನಿ ಅವರು ಶನಿವಾರ ಇ-ಪ್ರಾಪರ್ಟಿ ಕಾರ್ಡ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ''ಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕೋವಿಡ್‌ ಎರಡನೇ ಅಲೆಯನ್ನು ಸೋಲಿಸುವ ದೃಷ್ಟಿಯಿಂದ ಕೋವಿಡ್‌-19 ಕುರಿತ ನಿರ್ಬಂಧಗಳನ್ನು ಪ್ರಾಮಾಣಿಕವಾಗಿ ಪಾಲಿಸುವಂತೆ ಗ್ರಾಮೀಣ ಭಾಗದ ಜನತೆಗೆ ಮನವಿ ಮಾಡಿದರು. ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ಮೊದಲ ಬಾರಿಗೆ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನತೆ ಹೊಂದಿರುವ ಭೂಮಿಯ ಕರಾರುವಾಕ್‌ ಮಾಪನವನ್ನು ಮಾಡಲಾಗುತ್ತಿದೆ. 4 ಲಕ್ಷಕ್ಕೂ ಹೆಚ್ಚು ಮಂದಿಗೆ ಆರಂಭಿಕ ಹಂತದಲ್ಲಿ ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಅವರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಈ ಪ್ರಾಪರ್ಟಿ ಕಾರ್ಡ್‌ಗಳು ಉಪಯುಕ್ತ ದಾಖಲೆಯಾಗಿ ನೆರವಾಗಲಿದೆ ಎಂದು ಪ್ರಧಾನಿಯವರು ವಿವರಿಸಿದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್‌, ಮಧ್ಯಪ್ರದೇಶ, ಪಂಜಾಬ್‌, ರಾಜಸ್ಥಾನದ ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಸ್ವಾಮಿತ್ವ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ಇದೀಗ ಯೋಜನೆಯನ್ನು ದೇಶದ ಒಟ್ಟು 6 ಲಕ್ಷ 62 ಸಾವಿರ ಗ್ರಾಮಗಳಿಗೆ ವಿಸ್ತರಿಸಲಾಗಿದೆ. ದೇಶದಲ್ಲಿ ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೋವಿಡ್‌-19 ವಿರುದ್ಧದ ಹೋರಾಟ ಪ್ರಬಲವಾಗಿದೆ. ಮೇ 1ರಿಂದ ಲಸಿಕೆ ವಿತರಣೆಯನ್ನು ಉದಾರೀಕರಣಗೊಳಿಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯಬಹುದು. ಸರಕಾರ ಕಾಲಾನುಸಾರ ಬಿಡುಗಡೆ ಮಾಡುವ ಪ್ರತಿಯೊಂದು ಮಾರ್ಗದರ್ಶಿಯನ್ನೂ ಜನತೆ ಪಾಲಿಸಬೇಕು ಎಂದರು. ಕೇಂದ್ರ ಸರಕಾರ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ 80 ಕೋಟಿ ಭಾರತೀಯರಿಗೆ ಮೇ ಮತ್ತು ಜೂನ್‌ನಲ್ಲಿ ಉಚಿತ ಪಡಿತರ ವ್ಯವಸ್ಥೆ ಕಲ್ಪಿಸಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಕೂಡ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಭಾಗವಹಿಸಬೇಕು. ಗ್ರಾಮೀಣ ಭಾರತ ಆತ್ಮವಿಶ್ವಾಸದಿಂದ ಈ ಸವಾಲನ್ನು ಎದುರಿಸುವ ವಿಶ್ವಾಸ ತಮಗಿದೆ ಎಂದರು. ಕೇಂದ್ರ ಸರಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಯನ್ನೂ ಸ್ವಾವಲಂಬಿಯಾಗಿಸಲು ಯತ್ನಿಸುತ್ತಿದೆ. ದೇಶಾದ್ಯಂತ ಗ್ರಾಮ ಪಂಚಾಯಿತಿಗಳನ್ನು ಬಲಪಡಿಸಲು ಸರಕಾರ 2 ಲಕ್ಷದ 25 ಸಾವಿರ ಕೋಟಿ ರೂ.ಗಳನ್ನು ವಿತರಿಸಿದೆ. ಇ-ಗ್ರಾಮ ಸ್ವರಾಜ್ಯ ಅಭಿಯಾನ ಚಾಲ್ತಿಯಲ್ಲಿದೆ. ಇದು ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲಿ ಪಾರದರ್ಶಕತೆ ತರಲಿದೆ. ಗ್ರಾಮಗಳ ಮಟ್ಟದಲ್ಲಿ ಅಂತರ್ಜಲ ಹೆಚ್ಚಳ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೃಷಿ ಮತ್ತು ಶಿಕ್ಷಣಾಭಿವೃದ್ಧಿಗೆ ಪಂಚಾಯಿತಿಗಳು ಸ್ಥಳೀಯ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಧಾನಿಯವರು ಈ ಸಂದರ್ಭದಲ್ಲಿ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಗಳನ್ನು ಕೂಡ ವಿತರಿಸಿದರು. ದೀನ್‌ ದಯಾಳ್‌ ಉಪಾಧ್ಯಾಯ್‌ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ, ನಾನಾಜಿ ದೇಶ್‌ಮುಖ್‌ ರಾಷ್ಟ್ರೀಯ ಗೌರವ್‌ ಗ್ರಾಮ ಸಭಾ ಪುರಸ್ಕಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಪುರಸಾರ ಇತ್ಯಾದಿ ಬಹುಮಾನಗಳನ್ನು ವಿತರಿಸಲಾಯಿತು. ಏನಿದು ಸ್ವಾಮಿತ್ವ ಯೋಜನೆ? ಸ್ವಾಮಿತ್ವ ಯೋಜನೆ (SWAMITVA -ಸರ್ವೇ ಆಫ್‌ ವಿಲೇಜಸ್‌ ಆ್ಯಂಡ್‌ ಮ್ಯಾಪಿಂಗ್‌ ವಿತ್‌ ಇಂಪ್ರುವೈಸ್ಡ್‌ ಟೆಕ್ನಾಲಜಿ ಇನ್‌ ವಿಲೇಜ್‌ ಏರಿಯಾಸ್‌) ಎಂದರೆ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಜಮೀನುಗಳ ಮ್ಯಾಪಿಂಗ್‌ ಮತ್ತು ಸಮೀಕ್ಷೆ ನಡೆಸುವುದು. ಹಾಗೂ ಗ್ರಾಮೀಣ ಜನರಿಗೆ ಅವರ ಆಸ್ತಿಗಳಿಗೆ ಸಂಬಂಧಿಸಿದ ಇ-ಪ್ರಾಪರ್ಟಿ ಕಾರ್ಡ್‌ ಅನ್ನು ವಿತರಿಸುವುದು. ಗ್ರಾಮೀಣ ಜನತೆ ಏನು ಲಾಭ? ಗ್ರಾಮೀಣ ಜನತೆ ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆಯಡಿಯಲ್ಲಿ ತಮ್ಮ ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದ ಇ-ಪ್ರಾಪರ್ಟಿ ಕಾರ್ಡ್‌ ಅನ್ನು ಪಡೆಯುವುದರಿಂದ ಅವರಿಗೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಹಾದಿ ಸುಗಮವಾಗುತ್ತದೆ. ಇತರ ಹಣಕಾಸು ಸೌಲಭ್ಯ ಪಡೆಯಲು ಕೂಡ ಇದನ್ನು ದಾಖಲಾತಿಯಾಗಿ ಬಳಸಿಕೊಳ್ಳಬಹುದು. 2021-2025ರ ಅವಧಿಯಲ್ಲಿ ಎಲ್ಲ6.62 ಲಕ್ಷ ಗ್ರಾಮಗಳಲ್ಲಿ ಜನತೆಗೆ ಇದು ಸಿಗುವ ನಿರೀಕ್ಷೆ ಇದೆ. ಈಗಾಗಲೇ 5 ಕೋಟಿ ಮಂದಿ ಈ ಸೌಲಭ್ಯ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಅನೇಕ ಮಂದಿಗೆ ಈಗಲೂ ತಮ್ಮದೇ ಭೂಮಿಯಾದರೂ, ಮಾಲಿಕತ್ವ ಕುರಿತ ದಾಖಲಾತಿ ಇಲ್ಲದೆ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ ಗಳಿಂದಲೂ ಸಾಲ ಪಡೆಯಲು ದಾಖಲಾತಿಗಳ ಕೊರತೆ ಉಂಟಾಗುತ್ತಿದೆ. ಸ್ವಾಮಿತ್ವ ಯೋಜನೆಯಿಂದ ಈ ಕೊರತೆ ತಪ್ಪಲಿದೆ.