ಹೊಸದಿಲ್ಲಿ: ವಿಶ್ವಾದ್ಯಂತ ಅಭೂತಪೂರ್ವ ಬೆಳವಣಿಗೆ ಕಾಣುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೊಂದಿಗೆ ಗುರುತಿಸಿಕೊಂಡಿರುವ 'ದಿ ಆರ್ಗನೈಸರ್' ನಿಯತಕಾಲಿಕೆಯು ದೇಶದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಕುರಿತಂತೆ ಬುಹುಮುಖ್ಯ ದನಿ ಎತ್ತಿದೆ.
ನಿಯತಕಾಲಿಕೆಯಲ್ಲಿ ಕ್ರಿಪ್ಟೋಕರೆನ್ಸಿ ಕುರಿತಂತೆ ಬಹುಮುಖ್ಯ ಅಭಿಪ್ರಾಯ ವ್ಯಕ್ತವಾಗಿದೆ. ಕ್ರಿಪ್ಟೋ ಕರೆನ್ಸಿಯ ಮೂಲ ಉದ್ದೇಶ ಹಣಕಾಸು ವಹಿವಾಟುಗಳನ್ನು ಸುಲಭಗೊಳಿಸುವುದಾಗಿದೆ. ಆದರೆ, ಕ್ರಿಪ್ಟೋಕರೆನ್ಸಿಗಳನ್ನು ವಿನಿಮಯ ಮಾಧ್ಯಮವಾಗಿ ಮಾತ್ರ ಪರಿಗಣಿಸದೇ, ಸಂಗ್ರಹಣಾ ಮೌಲ್ಯ ಹೊಂದಿರುವ 'ಸ್ವತ್ತು' ಎಂದು ನೋಡಲಾಗುತ್ತಿದೆ. ಪ್ರಸ್ತುತ ಕ್ರಿಪ್ಟೋಕರೆನ್ಸಿ ಕುರಿತಂತೆ ನಿಯಂತ್ರಕ ಕನೂನುಗಳ ಅಂತರವೇ ಇದಕ್ಕೆ ಕಾರಣ. ಇತ್ತೀಚಿನ ಬೆಳವಣಿಗೆಗಳು ಈ ಅಂತರವನ್ನು ಆದಷ್ಟು ಬೇಗನೆ ತುಂಬುವ ಸಮಯ ಬಂದಿದೆ ಎಂಬುದನ್ನು ಸೂಚಿಸುತ್ತಿವೆ ಎಂದು ಭಾರತೀಯ ಜನತಾ ಪಕ್ಷದ ವಕ್ತಾರ ಗೋಪಾಲ ಕೃಷ್ಣ ಅಗರ್ವಾಲ್ ಅವರ ಲೇಖನದಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಮೌಲ್ಯ ಪ್ರಸ್ತುತ 1.4 ಬಿಲಿಯನ್ ಡಾಲರ್ ದಾಟಿದೆ. ಸುಮಾರು 80 ಲಕ್ಷ ಜನ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಕ್ರಿಪ್ಟೋ ಮಾರುಕಟ್ಟೆಯಲ್ಲಿ ಒಂದು ರೀತಿಯ ತಲ್ಲಣ ಏರ್ಪಟ್ಟಿದೆ. ನಿಯಂತ್ರಣ ಕಾನೂನುಗಳನ್ನು ತರುವ ಮೂಲಕ ಈ ಭಯವನ್ನು ಹೋಗಲಾಡಿಸಬಹುದು ಎಂದು ಲೇಖನದಲ್ಲಿ ತಿಳಿಸಿದ್ದಾರೆ.
ಹೂಡಿಕೆದಾರರಲ್ಲಿ ಭಯ
"ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲು ಯಾವುದೇ ಅಧಿಕೃತ ಪ್ರಾಧಿಕಾರವಾಗಲಿ, ಕಾನೂನುಗಳಾಗಲಿ ಇಲ್ಲ. ಕ್ರಿಪ್ಟೋಕರೆನ್ಸಿಗಳು ಅನಿಯಂತ್ರಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕ್ರಿಪ್ಟೋ ಮಾರುಕಟ್ಟೆ ಒಂದು ರೀತಿಯ ಅನಿಶ್ಚಿತತೆ ಎದುರಿಸುತ್ತಿದೆ. ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಸರಕಾರ ಕ್ರಿಪ್ಟೋ ಕರೆನ್ಸಿಗಳನ್ನು ರದ್ದು ಮಾಡಬಹುದು. ಸರಕಾರಗಳು ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದೆ ಎಂಬ ಊಹಾಪೋಹಗಳೂ ಹರಿದಾಡುತ್ತಿವೆ. ಇದರಿಂದ ಹೂಡಿಕೆದಾರರ ಜತೆಗೆ ಮಧ್ಯವರ್ತಿಗಳಿ ಕೂಡ ಆತಂಕದಲ್ಲೇ ಕಾರ್ಯನಿರ್ವಹಿಸುತ್ತಾರೆ. ಇದು ಹೈಪರ್ ಊಹಾಪೋಹಗಳಿಗೆ ಕಾರಣವಾಗಲಿದೆ ”ಎಂದು ಲೇಖನದಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತಂತ್ರಜ್ಞಾನಗಳನ್ನು ಮುಚ್ಚಲು ಸಾಧ್ಯವಿಲ್ಲ ಮತ್ತು ಮುಚ್ಚಲೂಬಾರದು ಎಂದು ಹೇಳಿದ್ದರು. ಆದರೆ ಕ್ರಿಪ್ಟೋಕರೆನ್ಸಿಗಳ ವಿಷಯದಲ್ಲಿ ಹಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಈ ಕುರಿತು ಸರ್ಕಾರ ಸಮಾಲೋಚನೆ ನಡೆಸುತ್ತಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಕಾರ್ಯಾಚರಣೆಗಾಗಿ ನೀತಿಗಳನ್ನು ರೂಪಿಸುವಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಆರ್ಬಿಐ ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವ ಯೋಜನೆಯ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿಂದೆ ಆರ್‌ಬಿಐ ಸೇರಿದಂತೆ ಹಲವು ಕೇಂದ್ರೀಯ ಬ್ಯಾಂಕುಗಳು ಕ್ರಿಪ್ಟೋ ತಂತ್ರಜ್ಞಾನ ಕುರಿತಂತೆ ಕಳವಳ ವ್ಯಕ್ತಪಡಿಸಿವೆ. ಅಕ್ರಮ ಹಣದ ಒಳಹರಿವಿನ ಭಯದ ಬಗ್ಗೆ ಆತಂಕ ವ್ಯಕ್ತಪಡಿಸಿವೆ.
ಆದರೆ, ಅಗರ್ವಾಲ್ ಅವರು ಕ್ರಿಪ್ಟೋಕರೆನ್ಸಿಯಲ್ಲಿ ಬಳಸುವ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬೆಂಬಲಿಸಿದ್ದಾರೆ. ಡಿಜಿಟಲ್ ಕರೆನ್ಸಿಗಳೊಂದಿಗೆ ಅದರ ಸರಿಯಾದ ಏಕೀಕರಣವು ಭಾರತದ ವಾಣಿಜ್ಯ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. "ಈ ಕರೆನ್ಸಿಗಳು ಪ್ರಯೋಜನಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಆದರೆ, ಖಾಸಗಿ ಕರೆನ್ಸಿಗಳಿಗೆ ಮನ್ನಣೆ ನೀಡಬೇಕೆ ಅಥವಾ ಕೇಂದ್ರೀಯ ಬ್ಯಾಂಕಿನಿಂದಲೇ ಅಧಿಕೃತ ಡಿಜಿಟಲ್ ಕರೆನ್ಸಿಗಳನ್ನು ಬಿಡುಗಡೆ ಮಾಡಬೇಕೆ ಎಂಬುದು ಪ್ರಶ್ನೆಯಾಗಿದೆ.
ಲೇಖನದಲ್ಲಿ ಬಹುನಿರೀಕ್ಷಿತ 'ಕ್ರಿಪ್ಟೋಕರೆನ್ಸಿಗಳು ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆ- 2021ರ' ಕುರಿತೂ ಹೇಳಲಾಗಿದೆ. ತಂತ್ರಜ್ಞಾನದ ಅಳವಡಿಕೆ ಮತ್ತು ಪಾರದರ್ಶಕತೆ ಹಾಗೂ ಆರ್ಥಿಕ ಸ್ಥಿರತೆಯ ನಡುವೆ ಸರಿಯಾದ ಸಮತೋಲನ ಸಾಧಿಸಲು ಈ ಮಸೂದೆ ಸಹಾಯ ಮಾಡಲಿದೆ ಎಂದು ಹೇಳಲಾಗಿದೆ.