3000ಕ್ಕೂ ಅಧಿಕ ಸಿನಿ ಕಲಾವಿದರು, ಕಾರ್ಮಿಕರು, ತಂತ್ರಜ್ಞರಿಗೆ ಯಶ್ ನೆರವು: 'ಅತ್ಯದ್ಭುತ ಕಾರ್ಯ' ಎಂದ ಉಪೇಂದ್ರ

ಸಿನಿಮಾರಂಗದಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ನೆರವು ನೀಡಲು ನಟ ಯಶ್ ನಿರ್ಧರಿಸಿದ್ದಾರೆ. ಯಶ್ ಅವರ ಈ ನಡೆಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3000ಕ್ಕೂ ಅಧಿಕ ಸಿನಿ ಕಲಾವಿದರು, ಕಾರ್ಮಿಕರು, ತಂತ್ರಜ್ಞರಿಗೆ ಯಶ್ ನೆರವು: 'ಅತ್ಯದ್ಭುತ ಕಾರ್ಯ' ಎಂದ ಉಪೇಂದ್ರ
Linkup
ಕೋವಿಡ್-19 ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಚಲನಚಿತ್ರರಂಗವನ್ನೇ ನಂಬಿರುವ ಕುಟುಂಬಗಳು ಕೆಲಸವಿಲ್ಲದೆ, ಕೈಯಲ್ಲಿ ದುಡ್ಡಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂತಹ ಚಿತ್ರರಂಗದ ಕುಟುಂಬಗಳಿಗೆ ರಿಯಲ್ ಸ್ಟಾರ್ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ಉಪೇಂದ್ರ ಜೊತೆ ಇನ್ನಿತರ ತಾರೆಯರೂ ಕೈಜೋಡಿಸಿ ಹಲವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಕೂಡ ಚಿತ್ರರಂಗದವರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಸಿನಿಮಾರಂಗದಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ನೆರವು ನೀಡಲು ನಟ ಯಶ್ ನಿರ್ಧರಿಸಿದ್ದಾರೆ. ''ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ'' ಎಂದು ಹೇಳುತ್ತ ಸುಮಾರು 3000ಕ್ಕೂ ಹೆಚ್ಚಿರುವ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ರೂಪಾಯಿಗಳನ್ನು ತಮ್ಮ ಸಂಪಾದನೆಯ ಹಣದಿಂದ ಭರಿಸಲು ನಟ ಯಶ್ ಮುಂದಾಗಿದ್ದಾರೆ. ಈ ಕುರಿತಾಗಿ ಈಗಾಗಲೇ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಜೊತೆ ಯಶ್ ಚರ್ಚಿಸಿದ್ದಾರೆ. ಬ್ಯಾಂಕ್ ವಿವರಗಳು ತಲುಪಿದ ಕೂಡಲೆ ಅಕೌಂಟ್‌ಗಳಿಗೆ ಹಣ ಹಾಕುವುದಾಗಿ ನಟ ಯಶ್ ತಿಳಿಸಿದ್ದಾರೆ. ಆ ಮೂಲಕ ಸುಮಾರು 1.50 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಿನಿ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ನಟ ಯಶ್ ಮೀಸಲಿಟ್ಟಿದ್ದಾರೆ. ಯಶ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಯಶ್ ಅವರ ಈ ನಡೆಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಭೇಷ್ ಎಂದಿದ್ದಾರೆ. ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ. ''ಅತ್ಯದ್ಭುತ ಕಾರ್ಯ. ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ'' ಎಂದು ಉಪೇಂದ್ರ ಟ್ವೀಟಿಸಿದ್ದಾರೆ.