2.74 ಲಕ್ಷ ಕೋಟಿ ರೂ. ತಲುಪಿದ ದೇಶದ ಕೃಷಿ ರಫ್ತು, ಕೊರೊನಾ ನಡುವೆಯೂ ಭಾರಿ ಏರಿಕೆ

2020ರ ಏಪ್ರಿಲ್ – 2021 ಫೆಬ್ರವರಿ ಅವಧಿಯಲ್ಲಿ 2.74 ಲಕ್ಷ ಕೋಟಿ ರೂ. ಮೊತ್ತದ ಕೃಷಿ ಮತ್ತು ಅವಲಂಬಿತ ಉತ್ಪನ್ನಗಳನ್ನು ಭಾರತ ರಫ್ತು ಮಾಡಿದ್ದು, ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ರಫ್ತು ಶೇ. 18.49 ರಷ್ಟು ಹೆಚ್ಚಾಗಿದೆ.

2.74 ಲಕ್ಷ ಕೋಟಿ ರೂ. ತಲುಪಿದ ದೇಶದ ಕೃಷಿ ರಫ್ತು, ಕೊರೊನಾ ನಡುವೆಯೂ ಭಾರಿ ಏರಿಕೆ
Linkup
ಹೊಸದಿಲ್ಲಿ: ಭಾರತ 2020ರ ಏಪ್ರಿಲ್ – 2021 ಫೆಬ್ರವರಿ ಅವಧಿಯಲ್ಲಿ 2.74 ಲಕ್ಷ ಕೋಟಿ ರೂಪಾಯಿ ಮೊತ್ತದ ಮತ್ತು ಅವಲಂಬಿತ ಉತ್ಪನ್ನಗಳ ಮಾಡಿದೆ. ಇದಕ್ಕೂ ಹಿಂದಿನ ವರ್ಷ ಇದೇ ಅವಧಿಯಲ್ಲಿ (11 ತಿಂಗಳು) ರಫ್ತು 2.31 ಲಕ್ಷ ಕೋಟಿ ರೂಪಾಯಿಷ್ಟಿತ್ತು. ಈ ಮೂಲಕ ಶೇ. 18.49 ರಷ್ಟು ಬೆಳವಣಿಗೆ ಸಾಧಿಸಿದೆ. ಒಟ್ಟಾರೆ 2019-20ರಲ್ಲಿ (ಪೂರ್ತಿ 12 ತಿಂಗಳು) ಭಾರತದ ಕೃಷಿ ಮತ್ತು ಸಂಬಂಧಿತ ವಲಯದ ರಫ್ತು 2.52 ಲಕ್ಷ ಕೋಟಿ ರೂಪಾಯಿಗಳಾಗಿವೆ. 2020ರ ಏಪ್ರಿಲ್ – 2021 ಫೆಬ್ರವರಿ ಅವಧಿಯಲ್ಲಿ ಭಾರತ 1.47 ಲಕ್ಷ ಕೋಟಿ ರೂಪಾಯಿ ಮೊತ್ತದ ಕೃಷಿ ಮತ್ತು ಅವಲಂಬಿತ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಸಾಂಕ್ರಾಮಿಕ ಸಂಕಷ್ಟ ಸಂದರ್ಭದಲ್ಲೂ ಜಗತ್ತಿನ ಆಹಾರ ಸರಪಳಿಗೆ ಧಕ್ಕೆಯಾಗದಂತೆ ನಿರಂತರ ರಫ್ತು ಚಟುವಟಿಕೆಯನ್ನು ಭಾರತ ಮುಂದುವರೆಸಿದ್ದು, ರಫ್ತು ವಲಯದಲ್ಲಿ ಗಣನೀಯ, ಸಕಾರಾತ್ಮಕ ಬೆಳವಣಿಗೆ ಸಾಧಿಸಿದೆ. ಗೋಧಿ, ಇತರೆ ಸಿರಿ ಧಾನ್ಯಗಳು, ಅಕ್ಕಿ (ಬಾಸ್ಮತಿ) ಮಾತ್ರವಲ್ಲದೆ ಸೋಯಾ ಮೀಲ್, ಮಸಾಲೆ ಪದಾರ್ಥಗಳು, ಸಕ್ಕರೆ, ಹತ್ತಿ, ತಾಜಾ ತರಕಾರಿ, ಸಂಸ್ಕರಿಸಿದ ತರಕಾರಿಗಳು, ಆಲ್ಕೋಹಾಲ್ ಯುಕ್ತ ಪಾನೀಯಗಳು ಇದರಲ್ಲಿ ಸೇರಿವೆ. ಗೋಧಿ ಮತ್ತು ಇತರೆ ಸಿರಿಧಾನ್ಯಗಳು ಅತಿ ಹೆಚ್ಚು ಬೆಳವಣಿಗೆ ದಾಖಲಿಸಿವೆ. ಈ ವಲಯದ ರಫ್ತು ಕ್ರಮವಾಗಿ 425 ಕೋಟಿ ರೂಪಾಯಿಯಿಂದ 3,283 ಕೋಟಿ ರೂಪಾಯಿಗೆ ಮತ್ತು 1,318 ಕೋಟಿ ರೂಪಾಯಿಯಿಂದ 4,542 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕೆಲವು ರಾಷ್ಟ್ರಗಳಿಂದ ನಿರ್ದಿಷ್ಟವಾಗಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅಪ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿ ಮತ್ತು ಲೆಬೆನಾನ್ ಗೆ ಜಿ2ಜಿ ಹೋಂದಾಣಿಕೆಯಡಿ 40,000 ಮೆಟ್ರಿಕ್ ಟನ್ ಗೋಧಿಯನ್ನು ನಫೆಡ್ ರಫ‍್ತು ಮಾಡಿದೆ. ಗೋಧಿ ರಫ್ತು ವಲಯದಲ್ಲಿ ಭಾರತ ಒಟ್ಟಾರೆ ಶೇ. 727 ರಷ್ಟು ಗಣನೀಯ ಪ್ರಗತಿ ದಾಖಲಿಸಿದೆ. ಅಕ್ಕಿ (ಬಾಸ್ಮತಿಯೇತರ) ವಲಯದಲ್ಲಿ ದೇಶ ಶೇ. 132 ರಷ್ಟು ಗಮನಾರ್ಹ ಪ್ರಗತಿ ಸಾಧಿಸಿದೆ. 2019-20 ರಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತು 13,030 ಕೋಟಿ ರೂಪಾಯಿಯಷ್ಟಿದ್ದು, ಇದು 2020-21 ರಲ್ಲಿ 30,277 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಭಾರತ ಹೊಸ ದೇಶಗಳ ಮಾರುಕಟ್ಟೆಗಳನ್ನು ಪ್ರವೇಶಿಸಿದ್ದು ಈ ಏರಿಕೆಗೆ ಪ್ರಮುಖ ಕಾರಣ. ಟಿಮೊರೊ-ಲೆಸ್ಟೆ, ಪಪುವ ನ್ಯೂಗಿನಿ, ಬ್ರೆಜಿಲ್‌, ಚಿಲಿ ಮತ್ತು ಪೋರ್ಟೋ ರಿಕೋದಂತಹ ದೇಶಗಳಿಗೆ ಹೊಸದಾಗಿ ಭಾರತ ರಫ್ತು ಆರಂಭಿಸಿದೆ. ಟಾಂಗೋ, ಸೆನೆಗಲ್, ಮಲೇಷ್ಯಾ, ಮಡಗಾಸ್ಕರ್, ಇರಾಕ್‌, ಬಾಂಗ್ಲಾದೇಶ, ಮೊಜಾಂಬಿಕ್‌, ವಿಯೆಟ್ನಾಂ, ತಾಂಜೇನಿಯಾ ದೇಶಗಳಿಗೂ ಸಹ ಭಾರತ ಅಕ್ಕಿ ರಫ್ತು ನಡೆಸುತ್ತಿದೆ. ಸೋಯಾ ಮಿಲ್ ರಫ್ತು ಸಹ ಶೇ. 132 ರಷ್ಟು ಏರಿಕೆಯಾಗಿದ್ದು, 2019 - 20 ರಲ್ಲಿ 3,087 ಕೋಟಿ ರೂಪಾಯಿ ಇದ್ದ ರಫ್ತು ಮೌಲ್ಯ 2020-21 ರಲ್ಲಿ 7,224 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಕೃಷಿ ಮತ್ತು ಅವಲಂಬಿತ ವಲಯದಲ್ಲಿ 2020ರ ಏಪ್ರಿಲ್‌ನಿಂದ 2021 ರ ಫೆಬ್ರವರಿ ಅವಧಿಯಲ್ಲಿ ಇತರೆ ಉತ್ಪನ್ನಗಳ ರಫ್ತು ಸಹ ಗಣನೀಯ ಏರಿಕೆ ಕಂಡಿದೆ. ಸಂಬಾರ ಪದಾರ್ಥಗಳ ರಫ್ತು 23,562 ಕೋಟಿ ರೂಪಾಯಿಯಿಂದ 26,257 ಕೋಟಿ ರೂಪಾಯಿಗೆ ಏರಿಕೆಯಾಗಿದ್ದರೆ, ಸಕ್ಕರೆ ರಫ್ತು 12,226 ಕೋಟಿ ರೂಪಾಯಿಯಿಂದ 17,072 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಚ್ಚಾ ಹತ್ತಿ ರಫ್ತು 6771 ಕೋಟಿ ರೂಪಾಯಿಯಿಂದ 11,373 ಕೋಟಿ ರೂಪಾಯಿಗೆ ಏರಿಕೆಯಾಗಿದ್ದರೆ, ತಾಜಾ ತರಕಾರಿ ಮಾರಾಟ 4067 ಕೋಟಿ ರೂಪಾಯಿಯಿಂದ 4780 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇತ್ತ ಸಂಸ್ಕರಿತ ತರಕಾರಿಗಳ ರಫ್ತು ಕೂಡ 1994 ಕೋಟಿ ರೂಪಾಯಿಯಿಂದ 2846 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2020ರ ಏಪ್ರಿಲ್ ನಿಂದ 2021 ರ ಫೆಬ್ರವರಿ ಅವಧಿಯಲ್ಲಿ ಕೃಷಿ ಮತ್ತು ಅವಲಂಬಿತ ಕ್ಷೇತ್ರದ ಉತ್ಪನ್ನಗಳ ಆಮದು 141,034.25 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಹಿಂದಿನ ವರ್ಷ ಇದು 137,014.39 ಕೋಟಿ ರೂಪಾಯಿಯಷ್ಟಿತ್ತು. ಒಟ್ಟಾರೆ ಶೇ 2.93 ರಷ್ಟು ಹೆಚ್ಚಳವಾಗಿದೆ. ಕೋವಿಡ್-19 ಸಂಕಷ್ಟದ ನಡುವೆಯೂ ಕೃಷಿ ವಲಯದ ವ್ಯಾಪಾರ 2020ರ ‍ಏಪ್ರಿಲ್‌ನಿಂದ 2021 ರ ಫೆಬ್ರವರಿ ಅವಧಿಯಲ್ಲಿ 132,579.69 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೇ ಅವಧಿಯ ಹಿಂದಿನ ವರ್ಷದಲ್ಲಿ ಇದು 93,907.76 ಕೋಟಿ ರೂಪಾಯಿಯಷ್ಟಿತ್ತು.