2023ರ ಚುನಾವಣಾ ಗುರಿ: 'ಪಂಚ ರತ್ನ' ಯೋಜನೆ ತೆರೆದಿಟ್ಟ ಎಚ್ ಡಿ ದೇವೇಗೌಡ

ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ ಅವರು 2023ರ ವಿಧಾನಸಭೆ ಚುನಾವಣೆಗೆ ಪಕ್ಷದ ಪಂಚ ರತ್ನ ಯೋಜನೆಯನ್ನು ತೆರೆದಿಟ್ಟಿದ್ದಾರೆ. ಸಮುದಾಯದ ಎಲ್ಲ ವರ್ಗಗಳನ್ನೂ ತಲುಪುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ.

2023ರ ಚುನಾವಣಾ ಗುರಿ: 'ಪಂಚ ರತ್ನ' ಯೋಜನೆ ತೆರೆದಿಟ್ಟ ಎಚ್ ಡಿ ದೇವೇಗೌಡ
Linkup
ಬೆಂಗಳೂರು: ಜನತಾದಳ (ಜಾತ್ಯತೀತ) ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಒಳಗೊಂಡಂತೆ 2023ರಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ದಿಕ್ಕಿನಲ್ಲಿ ಹಮ್ಮಿಕೊಂಡಿರುವ ಮಿಷನ್-123 ಗುರಿ ಮತ್ತು ಪಕ್ಷದ ಧ್ಯೇಯ ಉದ್ದೇಶಗಳನ್ನು ಒಳಗೊಂಡಿರುವ ಸಮಾಜದ ಎಲ್ಲಾ ವರ್ಗ ಮತ್ತು ಸಮುದಾಯದವರ ಏಳಿಗೆಗೆ '' ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಾಜಿ ಪ್ರಧಾನಿ, ವರಿಷ್ಠ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ಕಾರ್ಯಕರ್ತರೊಂದಿಗೆ ಮತ್ತು ಪ್ರಮುಖರೊಂದಿಗೆ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಸಮನ್ವಯತೆ, ಹೊಂದಾಣಿಕೆ-ಒಗ್ಗೂಡಿಸುವುದು, ಈ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳು ಹಾಗೂ ಯೋಜನೆಗಳ ಅನುಷ್ಠಾನ ಒಳಗೊಂಡಂತೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳ ಬಗ್ಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಮತ್ತು ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರು, ಪಕ್ಷದ ವಿವಿಧ ವಿಭಾಗಗಳ ಮುಖ್ಯಸ್ಥರ ನಡುವೆ ಹೊಂದಾಣಿಕೆ, ಸಮನ್ವಯತೆ ಸ್ಥಾಪಿಸಲು ನವೆಂಬರ್ ತಿಂಗಳಲ್ಲಿ ಪಕ್ಷದ ಜೆಪಿ ಭವನದಲ್ಲಿ ಪ್ರತಿ ದಿನ ನಾಲ್ಕು ಜಿಲ್ಲೆಗಳ 'ವಿಮರ್ಶನಾ ಸಭೆ' ಗಳನ್ನು ಆಯೋಜಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷದಿಂದ ಚುನಾಯಿತರಾಗಿರುವ 35 ಶಾಸಕರೂ ಒಳಗೊಂಡ ಕ್ಷೇತ್ರಗಳು, ಕಳೆದ 2018ನೇ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡ ಕ್ಷೇತ್ರಗಳು ಮತ್ತು ಉಳಿದ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಮತ್ತು ಪಕ್ಷದ ಕಾರ್ಯಕರ್ತರ ಪಡೆ ಇರುವ ಕ್ಷೇತ್ರಗಳನ್ನು ಗುರುತಿಸಿದ್ದು, ಈ ಕ್ಷೇತ್ರಗಳಿಂದ ಸ್ಪರ್ಧಿಸಲು 123 ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಗುರುತಿಸಲಾಗಿರುವ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಲು, ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ, ಪಕ್ಷದ ಸಂಘಟನೆ, ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರೊಂದಿಗೆ ಸಂಪರ್ಕ, ಚರ್ಚೆ ಮತ್ತು ಕ್ಷೇತ್ರದ ಸಮಸ್ಯೆಗಳ ಅಧ್ಯಯನ ಮತ್ತು ಅಭ್ಯರ್ಥಿಯು ತನ್ನ ವರ್ಚಸ್ಸನ್ನು ವೃದ್ಧಿಗೊಳ್ಳಲು ರೂಪಿಸಿಕೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಸಮೀಕ್ಷೆ ನಡೆಸಲು ಒಂದು ಪ್ರಶ್ನಾವಳಿ ತಯಾರಿಸಿ ಅಭ್ಯರ್ಥಿಗಳಿಗೆ ನೀಡಲಾಗಿದೆ. ಇಂತಹ ಸಮೀಕ್ಷೆಯನ್ನು ನಡೆಸಿ ಒಂದು ತಿಂಗಳೊಳಗೆ ಪ್ರಶ್ನಾವಳಿಗಳಿಗೆ ಉತ್ತರವನ್ನು ಹಿಂದಿರುಗಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೇ, ಅಭ್ಯರ್ಥಿಗಳು ನಡೆಸುವ ಸಮೀಕ್ಷೆ ಬಗ್ಗೆ ನಿಗಾ ಇಡಲು ಬೇರೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ದೇವೇಗೌಡ ಅವರು ನೀಡಿದ ಪಂಚ ರತ್ನ ಯೋಜನೆಗಳ ಮಾಹಿತಿ ಇಲ್ಲಿದೆ. 1. ಆಧುನಿಕ ಶಿಕ್ಷಣ: ರಾಜ್ಯದಲ್ಲಿರುವ 6000 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರ್ಸರಿಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಭೋದಿಸಲು ಸುಸಜ್ಜಿತ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಒಳ್ಳೆಯ ಒಂದು ಪಬ್ಲಿಕ್ ಸ್ಕೂಲ್ ತೆರೆಯುವುದು. ಐದು ವರ್ಷಗಳ ಈ ಯೋಜನೆಯ ಗಾತ್ರ-25,000 ಕೋಟಿ ರೂಪಾಯಿ. 2. ಆರೋಗ್ಯ ಭಾಗ್ಯ: ರಾಜ್ಯದಲ್ಲಿರುವ 6000 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಆಧುನಿಕ ಕಟ್ಟಡವುಳ್ಳ ಎಲ್ಲಾ ಸೌಕರ್ಯಗಳು, ಮೂಲ ಭೂತ ಸೌಕರ್ಯಗಳುಳ್ಳ ಮತ್ತು ಅಗತ್ಯವಿರುವ ವೈದ್ಯರು ಮತ್ತು ದಾನಿಯರನ್ನು ಒಳಗೊಂಡ ಸುಸಜ್ಜಿತವಾದ ಆರೋಗ್ಯ ಕೇಂದ್ರ ಸ್ಥಾಪನೆ. ಐದು ವರ್ಷಗಳ ಈ ಯೋಜನೆ ಗಾತ್ರ-25,000 ಕೋಟಿ ರೂಪಾಯಿ. 3. ವಸತಿ ಯೋಜನೆ: ರಾಜ್ಯದಲ್ಲಿರುವ ವಸತಿ ಹೀನರನ್ನು ಗುರುತಿಸಿ, ಪ್ರತಿಯೊಬ್ಬರಿಗೂ ವಿವಿಧ ಸೌಕರ್ಯಗಳಿರುವ ಒಂದು ವಸತಿ ಗೃಹವನ್ನು 5 ವರ್ಷಗಳ ಯೋಜನೆಯಲ್ಲಿ ಕಟ್ಟಿ ಕೂಡಲಾಗುವುದು. ಐದು ವರ್ಷಗಳ ಈ ಯೋಜನೆಯ ಗಾತ್ರ-25,000 ಕೋಟಿ ರೂಪಾಯಿ. 4. ರೈತ ಕಲ್ಯಾಣ: ಕೇವಲ ರೈತರ ಸಾಲ ಮನ್ನಾದಿಂದ ರೈತನನ್ನು ಸಾಲದ ಸಂಕೋಲೆಯಿಂದ ತಪ್ಪಿಸಲು ಸಾಧ್ಯವಿಲ್ಲ. ರೈತರಿಗೆ ಸಕಾಲದಲ್ಲಿ ಅಗತ್ಯವಿರುವ ಉತ್ತಮ ಗುಣಮಟ್ಟದ ಬೀಜ, ಕೀಟನಾಶಕ ಮತ್ತು ಗೊಬ್ಬರ-ರಸಗೊಬ್ಬರವನ್ನು ರೈತನ ಬೆಳೆ ಆಧಾರಿತ ಮೇಲೆ ಒದಗಿಸಲು, ರೈತ ಬೆಳೆದ ಬೆಳೆ ಮತ್ತು ಅವುಗಳನ್ನು ಆಧುನಿಕ ಸಂಸ್ಕರಿಸಿ ಶೇಖರಣೆ ಮಾಡಲು ಮತ್ತು ಉತ್ತಮ ಬೆಲೆ ದೊರಕಿಸುವಂತೆ ಕಲ್ಪಿಸಲಾಗಿದೆ. ಐದು ವರ್ಷಗಳ ಈ ಯೋಜನಾ ಗಾತ್ರ-25,000 ಕೋಟಿ ರೂಪಾಯಿಗಳು. 5. ಉದ್ಯೋಗ: ಯುವ ಮಹಿಳೆ ಮತ್ತು ಯುವ ಜನತೆ ಸಬಲೀಕರಣ: ಈ ಯೋಜನೆ ಅಡಿ ರಾಜ್ಯದ ಪ್ರತಿಯೊಂದು ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆ, ಬೇಡಿಕೆ ಮತ್ತು ಜನರು ಬಯಸುವ ಕೈಗಾರಿಕೆ, ಅತಿಸೂಕ್ಷ್ಮ ಮತ್ತು ಇತರ ಕೈಗಾರಿಕೆಗಳನ್ನು ಸ್ಥಾಪಿಸಿ ಯುವತಿಯರು ಮತ್ತು ಯುವಕರಿಗೆ ಉದ್ಯೋಗ ಒದಗಿಸಲಾಗುವುದು. ಐದು ವರ್ಷಗಳ ಈ ಯೋಜನೆಯ ಗಾತ್ರ-25,000 ಕೋಟಿ ರೂಪಾಯಿಗಳು.