ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯ ವಾತಾವರಣವನ್ನೇ ಮರೆತಿದ್ದ ಜನರಿಗೆ ಬಸವನಗುಡಿಯ ಹೊಸ ಸಂಭ್ರಮ, ಚೈತನ್ಯ ತಂದುಕೊಟ್ಟಿದೆ. ಪರಿಷೆಗೆ ಭಾನುವಾರ ಜನಸಾಗರವೇ ಹರಿದು ಬಂದಿತ್ತು.
ಕೋವಿಡ್ ಸೋಂಕಿನ ಆತಂಕವಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಡಲೆಕಾಯಿ ಕಾಯಿ ಪರಿಷೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಹಳೆಯ ವೈಭವ ನೆನಪಿಸುವಂತೆ ಪರಿಷೆ ನಡೆಯುತ್ತಿದೆ. ವಾರಾಂತ್ಯದ ದಿನವೂ ಆಗಿದ್ದ ಕಾರಣ ಭಾನುವಾರ ಭಾರಿ ಸಂಖ್ಯೆಯ ಜನರು ನೆರೆದಿದ್ದರು. ರಾಮಕೃಷ್ಣ ಆಶ್ರಮದ ಬಳಿಯಿಂದ ಬಿಎಂಎಸ್ ಕಾಲೇಜಿನವರೆಗೆ ಮುಖ್ಯ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನರೇ ಕಂಡು ಬಂದರು. ಸಾಲುಗಟ್ಟಿದ್ದ ಮಳಿಗೆಗಳು ಜಾತ್ರೆಗೆ ಇಂಬು ನೀಡಿದ್ದವು.
ನಾನಾ ಮಾದರಿಯ ಕಡಲೆಕಾಯಿ ಜತೆಗೆ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿ ನಡೆದಿತ್ತು. ಮೋಡ, ಚಳಿಯ ವಾತಾವರಣವಿದ್ದ ಹಿನ್ನೆಲೆಯಲ್ಲಿ ಬಜ್ಜಿ, ಬೋಂಡ, ಮಿರ್ಚಿ ಮಸಾಲೆಯಂತಹ ಖಾರ ಖಾರವಾದ ತಿಂಡಿ ಮಳಿಗೆಗಳ ಬಳಿ ಜನ ಹೆಚ್ಚಾಗಿ ಕಂಡು ಬರುತ್ತಿದ್ದರು.
ಮಾಸ್ಕ್ ಧರಿಸಲು ಸೂಚನೆ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಷೆಯಲ್ಲಿ ಮಾಸ್ಕ್ ಧರಿಸದವರಿಗೆ ಅಲ್ಲಲ್ಲಿ ಕೆಲವು ಮಾರ್ಷಲ್‌ಗಳು ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು. ಆದರೆ, ಯಾರಿಗೂ ದಂಡ ವಿಧಿಸುತ್ತಿರಲಿಲ್ಲ. ಪರಿಷೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರೂ, ಬಹುತೇಕ ಮಾರಾಟಗಾರರು ಪ್ಲಾಸ್ಟಿಕ್ ಕವರ್‌ಗಳಲ್ಲೇ ಕಡಲೆಕಾಯಿ, ಕಡಲೆಪುರಿ, ಬೆಂಡು, ಬತ್ತಾಸು ಇತ್ಯಾದಿಗಳನ್ನು ತುಂಬಿಕೊಡುತ್ತಿದ್ದರು. ಇದನ್ನು ಕಂಡ ಬಿಬಿಎಂಪಿ ಅಧಿಕಾರಿಗಳು ಮಳಿಗೆಗಳ ಬಳಿ ತೆರಳಿ ಪರಿಶೀಲಿಸಿ ಕೆಲವೆಡೆ ಮಾತ್ರ ಕವರ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಉಳಿದಂತೆ ಪ್ಲಾಸ್ಟಿಕ್ ಕವರ್‌ಗಳ ಬಳಕೆ ಮುಂದುವರಿದಿತ್ತು.
ಬೇಯಿಸಿದ ಹಸಿ ಕಡಲೆಗೆ ಬೇಡಿಕೆ
ಕಡಲೆಕಾಯಿ ದರ ಲೀಟರ್‌ಗೆ 30-50 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಹುರಿದದ್ದು, ಹಸಿಕಾಯಿ ದರ ಒಂದೇ ರೀತಿಯಿತ್ತು. ಬೇಯಿಸಿದ ಕಾಯಿ, ಬೇಯಿಸಿದ ಹಸಿ ಕಡಲೆ ಬೀಜದ ಮಸಾಲೆ ಪದಾರ್ಥಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿತ್ತು. ಬೇಯಿಸಿದ ಹಸಿ ಕಡಲೆ ಬೀಜದ ಮಸಾಲೆಯನ್ನು 20 ರೂ.ಗೆ ಒಂದು ಸಣ್ಣ ಕಪ್ ನೀಡುತ್ತಿದ್ದರು
ಬೆಳಗಾವಿ ಕಾಯಿ ಆಕರ್ಷಣೆ
ದಪ್ಪ ಹಾಗೂ ಉದ್ದವಾದ 'ಬೆಳಗಾವಿ ಕಾಯಿ' ಪರಿಷೆಯಲ್ಲಿ ಜನರ ಗಮನ ಸೆಳೆಯಿತು. ಇದರ ಬೆಲೆಯೂ ಸ್ವಲ್ಪ ದುಬಾರಿಯಾಗಿತ್ತು. ಕೆಲವರು ಚಿಕ್ಕ ಲೀಟರ್‌ಗೆ 30-40 ರೂ. ಮಾರಿದರೆ, ಇದು ವಿಶೇಷ ಕಾಯಿ ಎಂದು ಹೇಳುತ್ತಾ ಲೀಟರ್‌ಗೆ 50 ರೂ.ವರೆಗೆ ಮಾರುತ್ತಿದ್ದರು.
''ಒಂದು ತಿಂಗನಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕಡಲೆಕಾಯಿಯನ್ನು ಒಣಗಿಸಲು ತೊಂದರೆಯಾಗುತ್ತಿದೆ. ಒಣಗದಿದ್ದರೆ ಬೂಸ್ಟ್ ಬಂದು ಹಾಳಾಗುತ್ತವೆ. ಹೀಗಾಗಿ, ಕಡಲೆಕಾಯಿ ಸಂಗ್ರಹ ದೊಡ್ಡ ಸಮಸ್ಯೆಯಾಗಿದೆ," ಎಂದು ಮಾರಾಟಗಾರರಾದ ದೇವಿ ತಮ್ಮ ಅಳಲು ತೋಡಿಕೊಂಡರು.
ನಾನಾ ಮಾದರಿಯ ಆಟ
ರಾಟೆ, ಡ್ರ್ಯಾಗನ್ ಫ್ಲೈ, ಪುಟಾಣಿ ರೈಲು, ಕುದುರೆ ಆಟ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನು ಕೂಡ ಸೆಳೆಯುತ್ತಿದ್ದವು. ದೊಡ್ಡ ಬಸವಣ್ಣ ದೇವಸ್ಥಾನದ ಬಳಿಯ ಬಂಡೆಯ ಪಕ್ಕದಲ್ಲಿ ನಾನಾ ಆಟಗಳನ್ನು ವ್ಯವಸ್ಥೆ ಮಾಡಲಾಗಿದೆ. 30 ರಿಂದ 70 ರೂ.ವರೆಗೆ ಟಿಕೆಟ್ ದರವಿದೆ.
ಮೈಕ್‌ನಲ್ಲಿ ಕೊರೋನಾ ಸಂದೇಶ
ಮಾರ್ಷಲ್‌ಗಳು ಮೈಕ್ ಹಿಡಿದು ಕೊರೊನಾ ಕುರಿತು ಎಚ್ಚರಿಸುತ್ತಿದ್ದರು. 'ಎಲ್ಲೆಡೆ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕಡ್ಡಾಯವಾಗಿ ಮಾಸ್ಕ್‌ಧರಿಸಿ' ಎಂದು ಎಚ್ಚರಿಸುತ್ತಿದ್ದರು. ತಮಿಳುನಾಡು, ಆಂಧ್ರ ಮತ್ತಿತರ ಭಾಗಗಳಿಂದ ಬಂದ ವ್ಯಾಪಾರಿಗಳೇ ಹೆಚ್ಚಾಗಿದ್ದರು. ಹೀಗಾಗಿ ಲಸಿಕೆಯ ಎರಡು ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆಯೇ ಎಂಬುದನ್ನು ಮಾರ್ಷಲ್‌ಗಳು ಪರಿಶೀಲಿಸುತ್ತಿದ್ದರು.
ಇಂದು ಬೆಳಗ್ಗೆ ಉದ್ಘಾಟನೆ
ಕಡಲೆಕಾಯಿ ಪರಿಷೆ ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದೆ. ದೊಡ್ಡ ಬಸವಣ್ಣನಿಗೆ ವಿಶೇಷವಾಗಿ ಕಡಲೆಕಾಯಿ ಅಭಿಷೇಕ ಮತ್ತು ಪೂಜೆ ನಡೆಯಲಿದೆ. ಬಿಬಿಎಂಪಿ ಅಧಿಕಾರಿಗಳು ಸಾಂಕೇತಿಕವಾಗಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡುವರು. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕ್ಷೇತ್ರದ ರಾಜಕಾರಣಿಗಳು ಮಾತ್ರ ಆಗಮಿಸುವರು ಎಂದು ಪರಿಷೆಯ ಮೇಲ್ವಿಚಾರಕರಾದ ಪ್ರಕಾಶ್ ತಿಳಿಸಿದರು.
ಒಂದು ಸಾವಿರ ಕೆ.ಜಿ. ಕಡಲೆಕಾಯಿಯಿಂದ ಅಭಿಷೇಕ
ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ದೊಡ್ಡ ಗಣಪತಿಗೆ ಒಂದು ಸಾವಿರ ಕೆ.ಜಿ. ಕಡಲೆಕಾಯಿಯಿಂದ ಅಭಿಷೇಕ ಮಾಡಲಾಯಿತು. ಸೋಮವಾರ ಗಣೇಶನಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. ಜತೆಗೆ ಗಣಪತಿ ಮತ್ತು ದೊಡ್ಡ ಬಸವಣ್ಣರಿಬ್ಬರಿಗೂ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಗುತ್ತದೆ.