1800ಕ್ಕೂ ಹೆಚ್ಚು ಮಂದಿಗೆ ವಂಚನೆ..! ಬೃಂದಾವನ್ ಪ್ರಾಪರ್ಟೀಸ್‌ ಮಾಲೀಕನ ಬಂಧನ

ದಿನೇಶ್‌ ಗೌಡ ಬೆಂಗಳೂರು ಮತ್ತು ಹಾಸನದಲ್ಲಿಆಸ್ತಿ ಹೊಂದಿದ್ದು, ಗ್ರಾಹಕರಿಂದ ಪಡೆದ ಹಣದಲ್ಲಿ ಆಸ್ತಿ ಖರೀದಿಸಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇದುವರೆಗೆ ದಿನೇಶ್‌ ಗೌಡನಿಂದ 1,800ಕ್ಕೂ ಅಧಿಕ ಮಂದಿ ವಂಚನೆಗೊಳಗಾಗಿದ್ದಾರೆ.

1800ಕ್ಕೂ ಹೆಚ್ಚು ಮಂದಿಗೆ ವಂಚನೆ..! ಬೃಂದಾವನ್ ಪ್ರಾಪರ್ಟೀಸ್‌ ಮಾಲೀಕನ ಬಂಧನ
Linkup
: ಕಡಿಮೆ ಬೆಲೆಗೆ ನಿವೇಶನ ನೀಡುವುದಾಗಿ ನಂಬಿಸಿ ಗ್ರಾಹಕರನ್ನು ವಂಚಿಸಿದ್ದ ಬೃಂದಾವನ ಪ್ರಾಪರ್ಟೀಸ್‌ ಮಾಲೀಕ ದಿನೇಶ್‌ ಗೌಡನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನದ ಅರಕಲಗೂಡಿನಲ್ಲಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಭಾನುವಾರ ರಾತ್ರಿ ದಿನೇಶ್‌ ಗೌಡನನ್ನು ಬಂಧಿಸಿ ನಗರಕ್ಕೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಇದುವರೆಗೆ ದಿನೇಶ್‌ ಗೌಡನಿಂದ 1,800ಕ್ಕೂ ಅಧಿಕ ಮಂದಿ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ವಂಚನೆಗೊಳಗಾದವರು ನೀಡಿದ ದೂರಿನನ್ವಯ ತನಿಖೆ ನಡೆಸಿದಾಗ ಅಂದಾಜು 50 ಕೋಟಿ ರೂ. ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಇದೀಗ ದಿನೇಶ್‌ ಗೌಡನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. 50 ಕೋಟಿ ರೂ.ಗೂ ಅಧಿಕ ನಡೆದ ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ದಿನೇಶ್‌ ಗೌಡ ಬೆಂಗಳೂರು ಮತ್ತು ಹಾಸನದಲ್ಲಿಆಸ್ತಿ ಹೊಂದಿದ್ದು, ಗ್ರಾಹಕರಿಂದ ಪಡೆದ ಹಣದಲ್ಲಿ ಆಸ್ತಿ ಖರೀದಿಸಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ನಿವೇಶನವೂ ಇಲ್ಲ, ಹಣವೂ ಇಲ್ಲ: ನಾಗರಬಾವಿ ನಿವಾಸಿ ದಿನೇಶ್‌ ಗೌಡ, ರಾಜಾಜಿ ನಗರದಲ್ಲಿ ಬೃಂದಾವನ ಪ್ರಾಪರ್ಟೀಸ್‌ ಹೆಸರಿನ ರಿಯಲ್‌ ಎಸ್ಟೇಟ್‌ ಕಚೇರಿ ತೆರೆದಿದ್ದ. ಕಡಿಮೆ ಮೊತ್ತಕ್ಕೆ ನಿವೇಶನಗಳನ್ನು ಕೊಡುವುದಾಗಿ ಜಾಹೀರಾತು ನೀಡಿದ್ದ. ಅದನ್ನು ನಂಬಿ ನೂರಾರು ಮಂದಿ ಸಾರ್ವಜನಿಕರು 2016ರಿಂದ 2 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಿ ಅಗ್ರಿಮೆಂಟ್‌ ಮಾಡಿಕೊಂಡಿದ್ದರು. ಆದರೆ, ಆರೋಪಿ ನಿವೇಶನವನ್ನೂ ನೀಡದೆ, ಹಣವನ್ನೂ ಹಿಂತಿರುಗಿಸದೇ ವಂಚಿಸಿದ್ದ ಎನ್ನಲಾಗಿದೆ. ವಂಚನೆ ವಿಚಾರ ಗೊತ್ತಾಗುತ್ತಿದ್ದಂತೆಯೇ ನೂರಾರು ಮಂದಿ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ನಿವೇಶನ ಅಥವಾ ಹಣ ಹಿಂತಿರುಗಿಸುತ್ತೇನೆ: ಈ ನಡುವೆ, ಒಂದೇ ನಿವೇಶನವನ್ನು 4-5 ಮಂದಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಹಣ ನೀಡಿದವರೆಲ್ಲರಿಗೂ ನಿವೇಶನ ಕೊಡುತ್ತೇನೆ. ಇಲ್ಲವೇ ಹೂಡಿಕೆ ಮಾಡಿರುವ ಹಣ ಹಿಂದಿರುಗಿಸುತ್ತೇನೆ ಎಂದು ದಿನೇಶ್‌ ಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.