ಡಿ. 1ರಿಂದ ನಂದಿಬೆಟ್ಟ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌, ಪ್ರವಾಸಿಗರಿಗೆ ಷರತ್ತಿನ ಪ್ರವೇಶ

ನಂದಿಬೆಟ್ಟ ಡಿಸೆಂಬರ್‌ 1 ರಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಕಳೆದ ಆ. 24ರಂದು ಭಾರಿ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಿಂದ ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಇದೀಗ ಹೊಸ ಕಾಂಕ್ರಿಟ್‌ ರಸ್ತೆ ಸಂಚಾರಕ್ಕೆ ಸಿದ್ಧವಾಗಿದೆ.

ಡಿ. 1ರಿಂದ ನಂದಿಬೆಟ್ಟ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌, ಪ್ರವಾಸಿಗರಿಗೆ ಷರತ್ತಿನ ಪ್ರವೇಶ
Linkup
  • ಕಣಿತಹಳ್ಳಿ ಎನ್‌.ಚಂದ್ರೇಗೌಡ,
ಚಿಕ್ಕಬಳ್ಳಾಪುರ: ಹಸಿರು ಹೊದ್ದು ಮಲಗಿರುವ ನಂದಿಬೆಟ್ಟ ಇಂದಿನಿಂದ ಅಂದರೆ ಡಿಸೆಂಬರ್‌ 1 ರಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಕಳೆದ ಆಗಸ್ಟ್‌ 24ರಂದು ಭಾರಿ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಿಂದ ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ತಾತ್ಕಾಲಿಕ ರಸ್ತೆಯೂ ಹಾಳಾದ ಕಾರಣ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಾಂಕ್ರಿಟ್‌ ರಸ್ತೆ ಈಗ ಸಂಚಾರಕ್ಕೆ ಸಿದ್ಧವಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಸತತ ಮಳೆ ಮತ್ತು ಸೈಕ್ಲೋನ್‌ ಅಡ್ಡಿಯಾಗಿತ್ತು. ಮೂರು ತಿಂಗಳಲ್ಲಿ ಕಾಮಗಾರಿ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಇನ್ನೂ ಕೆಲವು ಸಣ್ಣ ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ. ಲೋಕೋಪಯೋಗಿ ಇಲಾಖೆ ಸಂಚಾರಕ್ಕೆ ಅನುವಾಗುವಂತಹ ಎಲ್ಲ ಕಾಮಗಾರಿ ಮುಗಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಇಂದಿನಿಂದ ಪ್ರವಾಸಿಗರಿಗೆ ಬೆಟ್ಟವನ್ನು ಮುಕ್ತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಷರತ್ತು ಅನ್ವಯನಂದಿಬೆಟ್ಟ ಪ್ರವಾಸಿಗರಿಗೆ ಮುಕ್ತ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಹಿಂದೆ ಇದ್ದಂತೆ ವೀಕೆಂಡ್‌ಗಳಲ್ಲಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಟ್ಟದ ಮೇಲಿನ ವಸತಿ ಗೃಹಗಳಲ್ಲಿ ರೂಂ ಬುಕ್‌ ಮಾಡಿದ್ದರೆ ಮಾತ್ರ ಅಂತವರಿಗೆ ಪ್ರವೇಶ ನೀಡಲಾಗುವುದು. ಉಳಿದಂತೆ ನಂದಿಬೆಟ್ಟ ವೀಕ್ಷಣೆಗೆ ಬರುವವರಿಗೆ ಪ್ರವೇಶವಿರುವುದಿಲ್ಲ. ಇದರ ಜೊತೆಗೆ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಉಲ್ಲಂಘಿಸಿದರೆ ದಂಡ, ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ. ಹಲವು ಅಡ್ಡಿಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಇನ್ನೇನು ಮುಗಿಯುವ ಹಂತದಲ್ಲಿದ್ದ ವೇಳೆ ಮೆಟಲ್‌ ಕ್ರ್ಯಾಷ್ ಬ್ಯಾರಿಯರ್‌ಗಳ ಪೂರೈಕೆಗೆ ತಮಿಳುನಾಡಿನಲ್ಲಿ ಸುರಿದ ಸೈಕ್ಲೋನ್‌ ಅಡ್ಡಿಯಾಗಿತ್ತು. ಹೀಗಾಗಿ ರಸ್ತೆ ನಿರ್ಮಾಣ 15 ದಿನ ವಿಳಂಬವಾಗಿತ್ತು. ಈಗ ತಮಿಳುನಾಡು ಕಂಪನಿಯಿಂದ ಕ್ರ್ಯಾಷ್ ಬ್ಯಾರಿಯರ್‌ ಪೂರೈಕೆಯಾಗಿದ್ದು, ರಸ್ತೆಯ ಬದಿಯಲ್ಲಿ ಅಳವಡಿಸಿದ್ದು ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ. ರಸ್ತೆಗೆ ತೊಂದರೆಯಾಗದಂತೆ ಕಾಮಗಾರಿಬೆಟ್ಟದ ಮೇಲಿನಿಂದ ಹರಿದು ಬರುವ ನೀರಿನ ರಭಸ ತಾಳಲಾರದೆ ರಸ್ತೆ ಹಾಳಾಗುವುದು ನಿಶ್ಚಿತ ಎಂದು ಅರಿತ ಅಧಿಕಾರಿಗಳು 40 ಮೀಟರ್‌ ಉದ್ದದ ಕಾಂಕ್ರಿಟ್‌ ರಸ್ತೆ ನಿರ್ಮಿಸಿದ್ದಾರೆ. ಬೃಹತ್‌ ಗಾತ್ರದ 5 ಸಿಮೆಂಟ್‌ ಕಾಂಕ್ರಿಟ್‌ ಪೈಪ್‌ಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರಿಟ್‌ ರಸ್ತೆ ನಿರ್ಮಿಸಿದ್ದಾರೆ. ಹೀಗಾಗಿ ಬೆಟ್ಟದ ಮೇಲಿನಿಂದ ಬರುವ ನೀರು ಬೃಹತ್‌ ಗಾತ್ರದ ಪೈಪ್‌ಗಳ ಮೂಲಕ ಸರಾಗವಾಗಿ ಕೆಳಗೆ ಹರಿದು ಹೋಗಲಿದೆ. ಅಲ್ಲದೇ ಕಲ್ಲುಗಳು ಪೈಪ್‌ಗಳಿಗೆ ಬೀಳದಂತೆ ತಡೆಯಲು ಪೈಪ್‌ಗಳ ಮುಂಭಾಗ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಸಣ್ಣ ಪುಟ್ಟ ಕಲ್ಲುಗಳು ಬಂದರೂ ಅದರಲ್ಲಿ ಬೀಳಲಿವೆ. ಆಗಾಗ್ಗೆ ಆ ಚೇಂಬರ್‌ಗಳನ್ನು ಕ್ಲೀನ್‌ ಮಾಡುವ ಮೂಲಕ ನೀರನ್ನು ಹರಿಯುವಂತೆ ಮಾಡಿದರೆ ರಸ್ತೆಗೆ ಹೆಚ್ಚಿನ ಹಾನಿಯಾಗುವುದಿಲ್ಲ. ನಂದಿಬೆಟ್ಟದಲ್ಲಿ ಸ್ವರ್ಗಈಗ ನಂದಿಬೆಟ್ಟ ಸಂಪೂರ್ಣ ಹಸಿರು ಹೊದ್ದು ಮಲಗಿದೆ. ಅದರ ಅಂದ ಚೆಂದ ನೂರ್ಮಡಿಯಾಗಿದೆ. ಜನ, ವಾಹನ, ಬೈಕ್‌, ಅಂಗಡಿಗಳ ವ್ಯವಹಾರ ಹೀಗೆ ಎಲ್ಲವೂ ಬಂದ್‌ ಆಗಿ ಸ್ವರ್ಗದಂತೆ ನಿರ್ಮಾಣವಾಗಿದೆ. ದುಬಾರಿ ಭೀತಿರಸ್ತೆ ಕೊಚ್ಚಿ ಹೋದ ಮೂರು ತಿಂಗಳ ನಂತರ ರಸ್ತೆ ರೆಡಿಯಾಗಿ ಪ್ರವಾಸಿಗರು ಬೆಟ್ಟಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಪ್ರವಾಸೋದ್ಯಮ ಕೈವಶದಲ್ಲಿರುವ ನಂದಿಬೆಟ್ಟ ಬಡವರಿಗೆ ದುಬಾರಿಯಾಗುತ್ತಾ ಎನ್ನುವುದು ಪ್ರಶ್ನೆ. ಇನ್ನೊಂದೆಡೆ ತೋಟಗಾರಿಕೆ ಇಲಾಖೆ, ಬೆಸ್ಕಾಂ ಹಾಗೂ ಲೋಕೋಪಯೋಗಿ ಇಲಾಖೆಯಡಿಯಿದ್ದ ಪ್ರವಾಸಿ ಮಂದಿರಗಳು ಪ್ರವಾಸೋದ್ಯಮ ಸುಪರ್ದಿಗೆ ತೆಗೆದುಕೊಂಡಿದ್ದು, ಎಲ್ಲ ಇಲಾಖೆಗಳ ನಡುವೆ ಅಸಮಾಧಾನ ಕಂಡುಬರುತ್ತಿದೆ. ನಂದಿ ಗಿರಿಧಾಮ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ. 350 ನಾಲ್ಕು ಚಕ್ರದ ವಾಹನ ಹಾಗೂ 1,500 ದ್ವಿ ಚಕ್ರವಾಹನಗಳನ್ನು ಬೆಟ್ಟದ ಕೆಳಭಾಗದ ಪ್ರವೇಶದ್ವಾರದಲ್ಲೇ ತಪಾಸಣೆ ನಡೆಸಿ ಪಾಸ್‌ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪಾಸ್‌ ವಿತರಣೆಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಮಾಹಿತಿ ನೀಡಿದ್ದಾರೆ. ನಂದಿಬೆಟ್ಟದಲ್ಲಿ ವಾರಾಂತ್ಯದ ದಿನಗಳು ಸೇರಿದಂತೆ ಎಲ್ಲ ದಿನಗಳಲ್ಲೂ ಪೊಲೀಸ್‌ ಬಂದೋಬಸ್ತ್‌ ಇರಲಿದೆ. ಕೊರೊನಾ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.