18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ

18 - 44 ವರ್ಷ ವಯೋಮಾನದವರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಅನುವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೋವಿನ್‌ ಆ್ಯಪ್‌ನಲ್ಲಿ ನೇರ ನೋಂದಣಿ ಮತ್ತು ಲಸಿಕೆಗೆ ಸಮಯ ನಿಗದಿಗೊಳಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ
Linkup
ಹೊಸದಿಲ್ಲಿ: 18 ರಿಂದ 44 ವರ್ಷದ ವಯೋಮಾನದವರು ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಅನುವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೋವಿನ್‌ ಆ್ಯಪ್‌ನಲ್ಲಿ ನೇರ (ಆನ್‌ ಸೈಟ್‌) ನೋಂದಣಿ ಮತ್ತು ಲಸಿಕೆಗೆ ಸಮಯ ನಿಗದಿಗೊಳಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ವ್ಯವಸ್ಥೆ ಕೇವಲ ಸರಕಾರಿ ಕೋವಿಡ್‌ ಕೇಂದ್ರಗಳಲ್ಲಿ ಮಾತ್ರ ಸಕ್ರಿಯಗೊಳಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಖಾಸಗಿ ಲಸಿಕಾ ಕೇಂದ್ರಗಳು ತಮ್ಮ ಲಸಿಕಾ ವೇಳಾಪಟ್ಟಿಯನ್ನು ಆನ್‌ಲೈನ್‌ ಸಮಯ ನಿಗದಿಗೆ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ. ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಮತ್ತು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಸ್ಥಳೀಯ ಸನ್ನಿವೇಶದ ಆಧಾರದ ಮೇಲೆ 18-44 ವರ್ಷ ವಯಸ್ಸಿನವರಿಗೆ ಆನ್‌-ಸೈಟ್‌ ನೋಂದಣಿ ಮತ್ತು ಅಪಾಯಿಂಟ್ಮೆಂಟ್‌ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ನಿರ್ಧರಿಸಬೇಕು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಲಸಿಕೆ ಅಭಿಯಾನ ವೇಗಗೊಳಿಸುವ ನಿಟ್ಟಿನಲ್ಲಿ ಮೇ 1 ರಂದು 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿ ಕೆಲವು ರಾಜ್ಯಗಳಲ್ಲಿ ಚಾಲನೆ ನೀಡಲಾಗಿತ್ತು. ಆದರೆ ಕೋವಿಶೀಲ್ಡ್‌, ಕೊವ್ಯಾಕ್ಸಿನ್‌ ಲಸಿಕೆಗಳ ಕೊರತೆಯಿಂದ ಇದು ಅರ್ಧಕ್ಕೆ ಮೊಟಕುಗೊಂಡಿತ್ತು. ಲಸಿಕಾ ಕೇಂದ್ರಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಹಿಂದೆ ಆನ್‌ಲೈನ್‌ ಅಪಾಯಿಂಟ್ಮೆಂಟ್‌ ಮಾತ್ರ ನೀಡಲಾಗುತ್ತಿತ್ತು. ಬಳಿಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಸಂಗ್ರಹಿಸಿ ಈಗ ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಗಳಿಗೆ ಸೂಚನೆ18 ರಿಂದ 44 ವರ್ಷಗಳವರೆಗಿನ ಫಲಾನುಭವಿಗಳಿಗೆ ಆನ್‌-ಸೈಟ್‌ ನೋಂದಣಿ ಮತ್ತು ಲಸಿಕೆ ಸಮಯ ನಿಗದಿ ವೈಶಿಷ್ಟ್ಯವನ್ನು ಬಳಸುವ ವ್ಯಾಪ್ತಿ ಮತ್ತು ವಿಧಾನದ ಬಗ್ಗೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾಇಮ್ಯುನೈಸೇಶನ್‌ ಅಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಅಲ್ಲದೇ ಕೇಂದ್ರಗಳಲ್ಲಿ ಜನದಟ್ಟಣೆ ತಪ್ಪಿಸಲು 18-44 ವರ್ಷ ವಯಸ್ಸಿನವರಿಗೆ ಆನ್‌-ಸೈಟ್‌ ನೋಂದಣಿ ಮತ್ತು ಸಮಯ ನಿಗದಿಗೊಳಿಸುವ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದೂ ರಾಜ್ಯಗಳಿಗೆ ಸೂಚಿಸಿದೆ.